Namma metro yellow line: ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ, ಚೀನಾ ಅಧಿಕಾರಿಗಳ ಆಗಮನ ಅಪ್ಡೇಟ್ ವಿವರ
ಬೆಂಗಳೂರು, ಜನವರಿ 29: ಬೆಂಗಳೂರಿನ ಸಾರಿಗೆ ಸೇವೆ ಒದಗಿಸುತ್ತಿರುವ ನಮ್ಮ ಮೆಟ್ರೋನ ಬಹುನಿರೀಕ್ಷೆಯ ಹಳದಿ ಮಾರ್ಗ (Namma metro yellow line) ವಾಣಿಜ್ಯ ಕಾರ್ಯಾಚರಣೆಗೆ ಒಂದೆರಡು ತಿಂಗಳು ಮಾತ್ರ ಬಾಕಿ ಇದೆ. ಆದಷ್ಟು ಶೀಘ್ರವೇ ಪ್ರಾಯೋಗಿಕ ಸಂಚಾರ ನಡೆಯಲಿದೆ ಎಂದು BMRCL ಮೂಲಗಳು ತಿಳಿಸಿವೆ.
ಬೆಂಗಳೂರು ನಮ್ಮ ಮೆಟ್ರೋಗೆ ಒಪ್ಪಂದಂತೆ ಚೀನಾ ಸಂಸ್ಥೆಯು ಪ್ರೋಟೊಟೈಪ್ ಮೆಟ್ರೋ ಬೋಗಿಗಳನ್ನು ಒದಗಿಸುತ್ತಿದೆ. ಈಗಾಗಲೇ ಬೋಗಿಗಳು ಭಾರತಕ್ಕೆ ರವಾನೆಯಾಗಿದ್ದು, ಮುಂದಿನ ತಿಂಗಳ ಫೆಬ್ರವರಿಯಲ್ಲಿ ಬೆಂಗಳೂರಿಗೆ ಬರಲಿವೆ. ಬರುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆದು ಪ್ರಾಯೋಗಿಕ ಸಂಚಾರ ನಡೆಯಲಿದೆ.

ನಮ್ಮ ಮೆಟ್ರೋ ಹಳದಿ ರೇಖೆಯಲ್ಲಿ ಪ್ರಾಯೋಗಿಕ ಸಂಚಾರವು ಫೆಬ್ರವರಿಯ ಅಂತ್ಯಕ್ಕೆ ನಡೆಯುವ ಸಾಧ್ಯತೆಯು ಇದೆ ಎಂಬ ಮಾತುಗಳು ಕೇಳಿ ಬಂದಿವೆ.
ಪ್ರಾಯೋಗಿಕ ಸಂಚಾರ: ಚೀನಾ ಅಧಿಕಾರಿಗಳ ಆಗಮನ
ಫೆಬ್ರವರಿ ಮಧ್ಯ ಭಾಗದಲ್ಲಿ ಪ್ರೋಟೊಟೈಪ್ ಮೆಟ್ರೋ ರೈಲು ಬೋಗಿಗಳು ಆಗಮಿಸಲಿವೆ. ಇನ್ನು ಪ್ರಾಯೋಗಿಕ ಕಾರ್ಯಾಚರಣೆಗೆಂದೇ ಬೋಗಿ ಪೂರೈಸಿದ ಕಂಪನಿಯ ಸುಮಾರು 15 ಚೀನಾದ ಅಧಿಕಾರಿಗಳ ಗುಂಪು ಪೆಬ್ರವರಿಯಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಒಂದಷ್ಟು ತಾಂತ್ರಿಕ ಅನುಮೋದನೆಗಳು ಮತ್ತು ಶಾಸನಬದ್ಧ ಸುರಕ್ಷತಾ ತಪಾಸಣೆಯಿಂದ ಮಾಡಲಾಗುತ್ತದೆ.
ಮೆಟ್ರೋ ಈ ಹಳದಿ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ನಡೆಯಲಿದೆ. ಈ ಮಾರ್ಗವು ಪ್ರಯಾಣಿಕರಿಗೆ ಸುಲಭ ಸಂಪರ್ಕ ಒದಗಿಸುತ್ತದೆ. ಏಕೆಂದರೆ ಹಳದಿ ಮಾರ್ಗವು ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ದಕ್ಷಿಣ ಬೆಂಗಳೂರಿನ ಇತರ ಭಾಗಗಳನ್ನು ಸಂಪರ್ಕಿಸುತ್ತದೆ.

ಎಲೆಕ್ಟ್ರಾನಿಕ್ಸ್ ಸಿಟಿ ಟ್ರಾಫಿಕ್ ಇಳಿಕೆ ಸಾಧ್ಯತೆ
ಶೀಘ್ರವೇ ಲೋಕಾರ್ಪಣೆಗೊಳ್ಳಲಿರುವ ಈ ಹಳದಿ ಮಾರ್ಗವು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಜೊತೆಗೆ ಟೆಕ್ ಕ್ಯಾಪಿಟಲ್‌ನಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆಗೊಳಿಸುವ ನಿರೀಕ್ಷೆಯಿದೆ. 19.15-ಕಿಮೀ ಉದ್ದದ ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ ಚೀನಾದ ಕಂಪನಿ 'ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್' ಬೋಗಿ ಒದಗಿಸಲು ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬಿಡ್ ನಲ್ಲಿ ಪ್ರಬಲ ಕಂಪನಿಯಾಗಿ ಹೊರ ಹೊಮ್ಮಿದ ನಂತರ ಈ ಚೀನಾ ಕಂಪನಿಯು BMRCL ಗೆ 216 ಕೋಚ್‌ಗಳನ್ನು (36 ರೈಲು ಸೆಟ್‌ಗಳು) ಪೂರೈಸಲು ಒಪ್ಪಂದ ಸಹಿ ಮಾಡಿತು.ಈ 216 ಕೋಚ್‌ಗಳಲ್ಲಿ 90 ಕೋಚ್‌ಗಳು (15 ರೈಲುಸೆಟ್) 19.15-ಕಿಮೀ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಓಡಿಸಲು ನಮ್ಮ ಮೆಟ್ರೋ ಪ್ಲಾನ್ ಮಾಡಿದೆ.
ಹಳದಿ ಮಾರ್ಗವು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕಿಸುತ್ತದೆ. ಹಳದಿ ಲೈನ್‌ನಲ್ಲಿ ಸಿವಿಲ್ ಮತ್ತು ಟ್ರ್ಯಾಕ್ ಪರಿಶೀಲನೆ ಕೆಲಸ ಮುಗಿದಿವೆ. ಇನ್ನಷ್ಟು ಸಿಸ್ಟಮ್ಸ್ ಕೆಲಸಗಳು ನಡೆಯುತ್ತಿವೆ.
ಈ ವರ್ಷ ಸಾರ್ವಜನಿಕ ಸೇವೆಗೆ ಮುಕ್ತಗೊಳ್ಳಲಿರುವ ನೂತನ ಮಾರ್ಗ ಹಳದಿ ಲೈನ್ ಆಗಿದೆ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಪ್ರಾಯೋಗಿಕ ಸಂಚಾರ ಮುಗಿದು, ಫೆಬ್ರುವರಿಗೆ ಮಾರ್ಗ ಲೋಕಾರ್ಪಣೆಗೊಳ್ಳಬೇಕಿತ್ತು. ಕಾರಣಾಂತರಗಳಿಂದ ತುಸು ವಿಳಂಬವಾಗಿದೆ.












Click it and Unblock the Notifications