BREAKING: ಬೆಂಗಳೂರು ಮೆಟ್ರೋ ಸೇವೆಯಲ್ಲಿ ಇಂದು ಸಂಜೆ 4.45ಗಂಟೆಯಿಂದ ವ್ಯತ್ಯಯ
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಇಂದು (ಡಿಸೆಂಭರ್ 20) ಶನಿವಾರ ಸಂಜೆ 04 :45ರಿಂದ ರೈಲುಗಳ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗಿದೆ. ಒಂದು ರೈಲಿನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ಸೇವೆಯಲ್ಲಿ ಸ್ವಲ್ಪ ವಿಳಂಬ ಉಂಟಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಾರ್ಗದ ಪ್ರಯಾಣಿಕರು ಗಮನಿಸಿ ಸಂಚಾರ ಪ್ಲಾನ್ ಮಾಡಿಕೊಳ್ಳಬೇಕಿದೆ.
ನಗರದ ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಪ್ರಸ್ತುತ ಮೆಟ್ರೋ ರೈಲುಗಳು 15 ನಿಮಿಷಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದವು. ಈ ಸಂಚಾರ ವ್ಯತ್ಯಯದಿಂದಾಗಿ 19 ನಿಮಿಷಗಳಿಗೆ ಒಂದರಂತೆ ಮೆಟ್ರೋ ರೈಲುಗಳೂ ಸಂಚರಿಸುತ್ತಿವೆ. ಎಂದಿನಂತೆ ಸಾಮಾನ್ಯ ಸೇವೆಯನ್ನು ಶೀಘ್ರದಲ್ಲೇ ಪುನಃ ಆರಂಭಿಸಲು ನಮ್ಮ ಮೆಟ್ರೋ ಅಧಿಕಾರಿಗಳು, ತಾಂತ್ರಿಕ ತಂಡದವರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಕೋರಿದ್ದಾರೆ.

ಪ್ರಯಾಣಿಕರಿಗೆ ಸಂಚಾರ ಅಡಚಣೆಯ ಬಿಸಿ
ಇಂದು ಶನಿವಾರ ರಜೆ ದಿನವಾದ್ದರಿಂದ ಸಂಜೆ ಪಾರ್ಟಿ, ಕಾರ್ಯಕ್ರಮ, ಹೊರಗೆ ಸುತ್ತಾಡಲು ಹೋಗುವವರ ಸಂಖ್ಯೆ ಹೆಚ್ಚಿರುತ್ತದೆ. ಪೀಕ್ ಹವರ್ ಸಮಯದಲ್ಲೇ ಈ ರೀತಿ ಸಂಚಾರ ವ್ಯತ್ಯಯ ಆಗಿದ್ದರಿಂದ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು. ಒಟ್ಟು 19 ಕಿಲೋ ಮೀಟರ್ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ನಿಲ್ದಾಣಗಳು ಬರುತ್ತವೆ. ಈ ಮಾರ್ಗದ ಎಲ್ಲ ಪ್ರಯಾಣಿಕರಿಗೂ ವ್ಯತ್ಯಯದ ಬಿಸಿ ತಟ್ಟಿದೆ.
ನಾಳೆ ಬೆಳಗ್ಗೆ ಹಳದಿ ಮಾರ್ಗದ ಸಂಚಾರ ಸುಧಾರಣೆಗಾಗಿ ಒಂದಷ್ಟು ತುರ್ತು ನಿರ್ವಹಣಾ ಕೆಲಸ ಕೈಗೊಳ್ಳಲಾಗುವುದು. ಈ ಪ್ರಯುಕ್ತ ಡಿಸೆಂಬರ್ 21ರಂದು (ಭಾನುವಾರ) ಬೆಳಗ್ಗೆ 7 ಗಂಟೆಗೆ ಹಳದಿ ಮಾರ್ಗದ ಮೆಟ್ರೋ ಸೇವೆಗಳು ಆರಂಭಿಸುವ ಬದಲಾಗಿ 08 ಗಂಟೆಗೆ ಆರಂಭಿಸುವುದಾಗಿ ಬಿಎಂಆರ್‌ಸಿಎಲ್ ತಿಳಿಸಿತ್ತು. ಇದಕ್ಕೂ ಮೊದಲೇ ಶನಿವಾರವೇ ಸಂಚಾರ ತೊಂದರೆ ಉಂಟಾಗಿದೆ. ಇಂತಹ ದಿಢೀರ್ ಸಮಸ್ಯೆ ಇದೇ ಮೊದಲೇನಲ್ಲ. ಕಳೆದ ಆಗಸ್ಟ್ 11ರಿಂದ ವಾಣಿಜ್ಯ ಕಾರ್ಯಾಚರಣೆ ಆರಂಭವಾದಾಗಿನಿಂದ ಒಂದೆರಡು ಬಾರಿ ಡ್ರೈವರ್‌ಲೆಸ್ ಮೆಟ್ರೋ ರೈಲುಗಳು ಹಾಗೂ ಹಳದಿ ಮಾರ್ಗದಲ್ಲಿ ತಾಂತ್ರಿಕ ಲೋಪಗಳು ಕಂಡು ಬಂದಿತ್ತು. ಆಗಲೂ ಕೆಲ ಕಾಲ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗಿತ್ತು.












Click it and Unblock the Notifications