Namma Metro Yellow Line: ಹಳದಿ ಮಾರ್ಗದಲ್ಲಿ ಪ್ರತಿ 15 ನಿಮಿಷಗಳಿಗೆ ಒಂದು ಮೆಟ್ರೋ
ಬೆಂಗಳೂರು, ಮಾರ್ಚ್ 07: ಬೊಮ್ಮಸಂದ್ರ ಮತ್ತು ಆರ್‌ವಿ ರಸ್ತೆಯನ್ನು ಕನೆಕ್ಟ್ ಮಾಡುವ ಹಳದಿ ಲೈನ್ ಮೆಟ್ರೋ ಯೋಜನೆ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದ್ದು, ಉದ್ಘಾಟನೆಯ ನಂತರ ಪ್ರತಿ 15 ನಿಮಿಷಗಳಿಗೊಮ್ಮೆ ಮೆಟ್ರೋ ಸಿಗಲಿದೆ. ಆದರೆ, ಉದ್ಘಾಟನಾ ದಿನಾಂಕವನ್ನು ಮತ್ತಷ್ಟು ಮುಂದೂಡಲಾಗಿದೆ.
ಜುಲೈನಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಬಜೆಟ್‌ನಲ್ಲಿ ಹೇಳಲಾಗಿತ್ತು. ಆದರೆ 19.15 ಕಿಲೋಮೀಟರ್ ಹಳದಿ ಲೈನ್ ಡಿಸೆಂಬರ್ 2024 ರ ವೇಳೆಗೆ ಮಾತ್ರ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳದಿ ಮಾರ್ಗವು ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ಜೋಡಿಸಲಿದ್ದು, ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಂತಹ ಪ್ರಮುಖ ಸಂಚಾರ ದಟ್ಟಣೆಯ ಪ್ರದೇಶಗಳ ಮೂಲಕ ಹಾದು ಹೋಗಲಿದೆ.

ಬಿಎಂಆರ್‌ಸಿಎಲ್‌ನ ರೋಲಿಂಗ್ ಸ್ಟಾಕ್‌ನ ಪ್ರಾಜೆಕ್ಟ್ ಮ್ಯಾನೇಜರ್ ಜಿತೇಂದ್ರ ಝಾ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಹಳದಿ ಮಾರ್ಗದಲ್ಲಿ ನಿಯೋಜಿಸಲು ಉದ್ದೇಶಿಸಿರುವ 15 ರೈಲುಗಳಲ್ಲಿ ಆರು ಬೋಗಿಗಳ ರೈಲು, ಮೊದಲನೆಯದು. ಇದು ಹಲವು ಕಠಿಣ ಪರೀಕ್ಷೆಗಳ ಒಳಗಾಗಬೇಕು. ಸ್ಟ್ಯಾಟಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಮೌಲ್ಯಮಾಪನಕ್ಕಾಗಿ ರೈಲನ್ನು ಜೋಡಿಸಿ ಪರೀಕ್ಷಾ ಟ್ರ್ಯಾಕ್‌ಗೆ ಸ್ಥಳಾಂತರಿಸಲಾಗಿದ್ದರೂ, ಮುಂದಿನ ನಾಲ್ಕು ತಿಂಗಳೊಳಗೆ ಇದು 37 ಪರೀಕ್ಷೆಗಳಿಗೆ ಒಳಗಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಆರಂಭಿಕ ಪರೀಕ್ಷೆಗಳ ನಂತರ, ಸಿಗ್ನಲಿಂಗ್, ದೂರಸಂಪರ್ಕ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆಗಳನ್ನು ಕನೆಕ್ಟ್ ಮಾಡಲು ಮೀಸಲಾಗಿರುವ 45 ದಿನಗಳ ಅವಧಿ ಇರುತ್ತದೆ. ಈ ಪರೀಕ್ಷೆಗಳಲ್ಲಿ ತೊಂಬತ್ತರಷ್ಟು ಪರೀಕ್ಷೆಗಳು ಪ್ರೋಟೋಟೈಪ್ ರೈಲನ್ನು ಒಳಗೊಂಡಿರುತ್ತವೆ ಎಂದು ಜಿತೇಂದ್ರ ಝಾ ಉಲ್ಲೇಖಿಸಿದ್ದಾರೆ.
ಜೂನ್ ವೇಳೆಗೆ ಚೀನಾದಿಂದ ಮತ್ತೊಂದು ರೈಲು
ಜೂನ್ ವೇಳೆಗೆ ಚೀನಾದಿಂದ ಮತ್ತೊಂದು ರೈಲು ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎರಡು ಹೆಚ್ಚುವರಿ ರೈಲುಗಳನ್ನು ಟಿಆರ್‌ಎಸ್‌ಎಲ್ ಜೋಡಿಸಿದೆ. ಸದ್ಯ ಮೂರು ರೈಲುಗಳು ಲಭ್ಯವಿದ್ದು, ಬಿಎಂಆರ್‌ಸಿಎಲ್ ಅಗತ್ಯ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತದೆ.

ಈಗಾಗಲೇ ಸಿಗ್ನಲಿಂಗ್ ಪರೀಕ್ಷೆ ನಡೆಸಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಪ್ರಾಯೋಗಿಕ ಓಟಗಳು ಬೊಮ್ಮಸಂದ್ರ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ ನಡೆಯಲಿದ್ದು, ಏಪ್ರಿಲ್ ಮಧ್ಯದ ವೇಳೆಗೆ ಸಂಪೂರ್ಣ ಮಾರ್ಗವನ್ನು ವಿಸ್ತರಿಸಲು ಯೋಜಿಸಲಾಗಿದೆ. ಸದ್ಯ ಬಿಎಂಆರ್‌ಸಿಎಲ್‌ಗೆ ಕನಿಷ್ಠ ಏಳು ರೈಲುಗಳ ಅಗತ್ಯವಿದೆ. ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಮೊದಲು ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ (RDSO), ಮೆಟ್ರೋ ರೈಲು ಸುರಕ್ಷತೆಯ ಆಯುಕ್ತ (CMRS) ಮತ್ತು ರೈಲ್ವೆ ಮಂಡಳಿ ಸೇರಿದಂತೆ ಹಲವು ಘಟಕಗಳಿಂದ ಅನುಮೋದನೆ ಪಡೆಯಬೇಕು.
ಅಲ್ಲದೆ, ಉದ್ಘಾಟನೆ ಬಳಿಕ ಈ ಮಾರ್ಗದ ರೈಲುಗಳು ಪ್ರತಿ 15 ನಿಮಿಷಗಳಿಗೊಮ್ಮೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಮುಂದಿನ ವರ್ಷ ಎಂಟು ಹೆಚ್ಚುವರಿ ರೈಲುಗಳು ಬಂದ ನಂತರ ಮಾತ್ರ ಐದು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ರೈಲು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಹಳದಿ ಮಾರ್ಗದಲ್ಲಿ ಸಿವಿಲ್ ನಿರ್ಮಾಣ ಮತ್ತು ಟ್ರ್ಯಾಕ್-ಲೇಯಿಂಗ್ ಸಮಯ ಪೂರ್ಣಗೊಂಡಿದ್ದರೂ, ಸಾಕಷ್ಟು ರೈಲುಗಳು ಇಲ್ಲದಿರುವುದರಿಂದ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸುವಲ್ಲಿ ವಿಳಂಬವಾಗುತ್ತಿದೆ. ಹಳದಿ ಮಾರ್ಗವನ್ನು ಈ ಹಿಂದೆ ಫೆಬ್ರವರಿ-ಮಾರ್ಚ್ 2023 ರಲ್ಲಿ ಪ್ರಾರಂಭಿಸಲು ಪ್ಲ್ಯಾನ್ ಮಾಡಲಾಗಿತ್ತು.












Click it and Unblock the Notifications