Namma Metro: ನೇರಳೆ ಮಾರ್ಗದ ಉದ್ದ, ಪ್ರಯಾಣದ ಅವಧಿ, ಸಮಯ, ದರ ವಿವರ
ಕೊನೆಗೂ ಜನಾಕ್ರೋಶಕ್ಕೆ ಸರ್ಕಾರಗಳು ಮಣಿದಿವೆ. ನಮ್ಮ ಮೆಟ್ರೋದ ನೇರಳೆ ಮಾರ್ಗ ಸಂಪೂರ್ಣ ಕಾರ್ಯಾಚರಣೆ ಸಿದ್ದವಾಗಿದ್ದು ಅಕ್ಟೋಬರ್ 9ರಿಂದ ಸೇವೆ ಒದಗಿಸಲು ಸಿದ್ದವಾಗಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ನೇರಳೆ ಮಾರ್ಗದಲ್ಲಿ ಸಂಪೂರ್ಣ ಮೆಟ್ರೋ ಸಂಚಾರ ಆರಂಭವಾಗಲಿದೆ.
ಚಲ್ಲಘಟ್ಟ - ಕೆಂಗೇರಿ, ಕೆಆರ್ ಪುರ - ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದಲ್ಲಿ ಸುರಕ್ಷತಾ ತಪಾಸಣಾ ಕಾರ್ಯ ನಡೆಸಿದ್ದ ಸಿಎಂಆರ್ ಎಸ್ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ನಂತರ ಬಿಎಂಆರ್ ಸಿಎಲ್ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲು ಪತ್ರ ಬರೆದಿತ್ತು. ಅಕ್ಟೋಬರ್ 7ರಂದು ಈ ಮಾರ್ಗ ಉದ್ಘಾಟನೆ ಆಗುತ್ತೆ ಎನ್ನಲಾಗಿತ್ತಾದರೂ ನಂತರ ದಿನಾಂಕ ನಿಗದಿಯಾಗಿಲ್ಲ ಎಂದು ಬಿಎಂಆರ್ ಸಿಎಲ್ ಸ್ಪಷ್ಟನೆ ನೀಡಿತ್ತು.

ಈ ಬೆನ್ನಲ್ಲೇ ಐಟಿ ಉದ್ಯೋಗಿಗಳು, ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜಕೀಯ ಲಾಭಕ್ಕೆ ಜನರಿಗೆ ತೊಂದರೆ ಕೊಡದಂತೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದು ಯಾವ ಉದ್ಘಾಟನಾ ಸಮಾರಂಭವೂ ಇಲ್ಲದೆ ರೈಲು ಸಂಚಾರ ಆರಂಭಿಸಲು ಹೇಳಿದೆ.
ಪ್ರಯಾಣ ಈಗ ಇನ್ನೂ ಸುಲಭ!
ಅಕ್ಟೋಬರ್ 9ರಿಂದ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ 43.49 ಕಿಮೀ ಉದ್ದದ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದ್ದು, ಐಟಿ ಉದ್ಯೋಗಿಗಳು, ಸಾರ್ವಜನಿಕರಿಗೆ ಭಾರಿ ಅನುಕೂಲವಾಗಲಿದೆ. ಈ ಮೂಲಕ ನಮ್ಮ ಮೆಟ್ರೋದ ಅತಿ ಉದ್ದದ ಮಾರ್ಗ ಎನ್ನುವ ಖ್ಯಾತಿ ಈಗ ನೇರಳೆ ಮಾರ್ಗದ ಪಾಲಾಗಿದೆ. ಈ ಮಾರ್ಗದಲ್ಲಿ ಒಟ್ಟು 37 ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ.
43.49 ಕಿಮೀ ದೂರವನ್ನು ಕ್ರಮಿಸಲು ಸುಮಾರು 76 ನಿಮಿಷಗಳ ಸಮಯ ಬೇಕು ಎಂದು ಅಂದಾಜಿಸಲಾಗಿದೆ. ಚಲ್ಲಘಟ್ಟದಿಂದ - ವೈಟ್‌ಫಿಲ್ಡ್‌ವರೆಗೆ ಮೆಟ್ರೋ ಪ್ರಯಾಣ ದರವನ್ನು 60 ರೂಪಾಯಿ ನಿಗದಿ ಮಾಡಲಾಗಿದೆ.
ಈಗ ನಮ್ಮ ಮೆಟ್ರೋ ಒಟ್ಟು 73.81 ಕಿಮೀ ಮೆಟ್ರೋ ಮಾರ್ಗವನ್ನು ಹೊಂದಿದೆ (ಹಸಿರು ಮತ್ತು ನೇರಳೆ ಮಾರ್ಗ ಸೇರಿಸಿ). ಒಟ್ಟು 66 ಮೆಟ್ರೋ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ.
ನೇರಳೆ ಮಾರ್ಗದಲ್ಲಿ ಮೆಟ್ರೋ ಸಮಯ
ವೈಟ್‌ಫೀಲ್ಡ್ ನಿಂದ ಪಟ್ಟಂದೂರು ಅಗ್ರಹಾರ ಮಾರ್ಗದಲ್ಲಿ ಪ್ರತಿ 10 ನಿಮಿಷಗಳಿಗೆ ಒಂದು ರೈಲು ಸೇವೆ ಇರಲಿದೆ.
ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ ಪ್ರತಿ 5 ನಿಮಿಷಕ್ಕೆ ಒಂದು ಮೆಟ್ರೋ ರೈಲು ಸಂಚರಿಸಲಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ - ಎಂಜಿ ರಸ್ತೆ ಮಾರ್ಗದಲ್ಲಿ ದಟ್ಟಣೆಯ ಸಮಯದಲ್ಲಿ ಪ್ರತಿ 3 ನಿಮಿಷಕ್ಕೆ ಒಂದು ರೈಲು ಸಂಚಾರ ಇರಲಿದೆ.
ಮೈಸೂರು ರಸ್ತೆಯಿಂದ - ಚಲ್ಲಘಟ್ಟ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ.
ಕಾಡುಗೋಡಿ (ವೈಟ್‌ಫೀಲ್ಡ್) ನಿಲ್ದಾಣದಿಂದ ಕೊನೆಯ ಮೆಟ್ರೊ ರೈಲು ರಾತ್ರಿ 10.45ಕ್ಕೆ ಹೊರಡಲಿದೆ. ಬೆಳಗ್ಗೆ 5 ಗಂಟೆಗೆ ಮೊದಲ ರೈಲು ಸಂಚಾರ ಆರಂಭವಾಗಲಿದೆ.












Click it and Unblock the Notifications