Namma Metro: ಇನ್ನೂ 4 ಹೊಸ ಮೆಟ್ರೋ ಮಾರ್ಗ ಪಡೆಯಲಿದೆ ಬೆಂಗಳೂರು- ಅಂಕಿಅಂಶ, ವೆಚ್ಚ, ಮಾಹಿತಿ, ವಿವರ
ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ಕಾಮಗಾರಿಗಳು ತೀವ್ರ ವೇಗದಲ್ಲಿ ಸಾಗುತ್ತಿವೆ. ಮುಂದಿನ ಹತ್ತು ವರ್ಷಗಳಲ್ಲಿ ಬೆಂಗಳೂರಿನ ಪ್ರತಿಯೊಬ್ಬರು ಕೇವಲ ಒಂದು ಕಿಮೀ ಅಂತರದಲ್ಲಿ ಮೆಟ್ರೋ ರೈಲುಗಳಿಗೆ ಪ್ರವೇಶ ಪಡೆಯಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಬೆಂಗಳೂರು, ಮಾರ್ಚ್ 13: ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ಕಾಮಗಾರಿಗಳು ತೀವ್ರ ವೇಗದಲ್ಲಿ ಸಾಗುತ್ತಿವೆ. ಮುಂದಿನ ಹತ್ತು ವರ್ಷಗಳಲ್ಲಿ ಬೆಂಗಳೂರಿನ ಪ್ರತಿಯೊಬ್ಬರು ಕೇವಲ ಒಂದು ಕಿಮೀ ಅಂತರದಲ್ಲಿ ಮೆಟ್ರೋ ರೈಲುಗಳನ್ನು ಪಡೆಯಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. 2032ರ ವೇಳೆಗೆ ನಗರದ ನಿವಾಸಿಗಳು ಇನ್ನೂ ನಾಲ್ಕು ಹೊಸ ಮೆಟ್ರೋ ಮಾರ್ಗಗಳನ್ನು ಪಡೆಯಲಿದ್ದಾರೆ ಎಂದು ಕರ್ನಾಟಕ ಸರ್ಕಾರ ಮಾಹಿತಿ ಬಹಿರಂಗ ಪಡಿಸಿದೆ.

ಅಭಿವೃದ್ಧಿ ಯೋಜನೆಗೆ ಅಂದಾಜು ವೆಚ್ಚ
ಪ್ರಸ್ತುತ, ಬೆಂಗಳೂರು 56 ಕಿಲೋಮೀಟರ್ ಮೆಟ್ರೋ ರೈಲು ಜಾಲವನ್ನು ಹೊಂದಿದೆ. ಪ್ರಸ್ತಾವಿತ ನಾಲ್ಕು ಮಾರ್ಗಗಳು 59 ಕಿ.ಮೀ ಜಾಲವನ್ನು ಒಳಗೊಂಡಿದೆ. ಅಭಿವೃದ್ಧಿ ಯೋಜನೆಗೆ ಅಂದಾಜು 27 ಸಾವಿರ ಕೋಟಿ ರೂಪಾಯಿಗಳು ಬೇಕಿದೆ ಎಂದು ಸರ್ಕಾರ ಹೇಳಿದೆ.

ಎರಡು ಹೊಸ ಮೆಟ್ರೋ ಮಾರ್ಗ
ಕರ್ನಾಟಕ ಸರ್ಕಾರದ ಕ್ರಿಯಾ ಯೋಜನೆಯಲ್ಲಿ ಎರಡು ಹೊಸ ಮೆಟ್ರೋ ಮಾರ್ಗಗಳು ಮತ್ತು ಎರಡು ವಿಸ್ತರಣೆಗಳನ್ನು ಪ್ರಸ್ತಾಪಿಸಲಾಗಿದೆ. 9,600 ಕೋಟಿ ಬಜೆಟ್‌ನಲ್ಲಿ ಮಹಾತ್ಮ ಗಾಂಧಿ ರಸ್ತೆಯಿಂದ ಹಳೆ ವಿಮಾನ ನಿಲ್ದಾಣ ರಸ್ತೆಗೆ, ಮಾರತಹಳ್ಳಿಯಿಂದ ವೈಟ್‌ಫೀಲ್ಡ್ ವರೆಗೆ ಮೆಟ್ರೋ ಮಾರ್ಗವನ್ನು ಪ್ರಸ್ತಾಪಿಸಲಾಗಿದೆ. ನಾಗವಾರರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ( ಇದು ಥಣಿಸಂದ್ರ/ ಭಾರತೀಯ ಸಿಟಿ ಮೂಲಕ) ಮತ್ತೊಂದು 25 ಕಿಮೀ ಮಾರ್ಗವನ್ನು ರೂ 10,000 ಕೋಟಿ ಅಂದಾಜು ವೆಚ್ಚದಲ್ಲಿ ಪ್ರಸ್ತಾಪಿಸಲಾಗಿದೆ.

ಕ್ರಿಯಾ ಯೋಜನೆಯ ಪ್ರಸ್ತಾವನೆ
ಕರ್ನಾಟಕ ಡಿಪಾರ್ಟ್‌ಮೆಂಟ್ ಆಫ್ ಪ್ಲಾನಿಂಗ್, ಪ್ರೊಗ್ರಾಮ್ ಮಾನಿಟರಿಂಗ್ & ಸ್ಟ್ಯಾಟಿಸ್ಟಿಕ್ಸ್ ಹಾಗೂ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (ಎಫ್‌ಐಸಿಸಿಐ) ಮೂಲಕ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಮಾಡಲಾಗಿದೆ. '2032 ರ ವೇಳೆಗೆ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೆ ಅವರು ಕೆಲಸ ಮಾಡುವ ಸ್ಥಳ ಅಥವಾ ನಿವಾಸದಿಂದ 1-2 ಕಿಮೀ ವ್ಯಾಪ್ತಿಯಲ್ಲಿ ಮೆಟ್ರೋ ಪ್ರವೇಶವನ್ನು ಪಡೆಯುಂತಾಗಬೇಕು. ಈ ಗುರಿಯನ್ನು ಸಾಧಿಸಲು ನಾಲ್ಕು ಹೊಸ ಮೆಟ್ರೋ ಮಾರ್ಗಗಳನ್ನು ಪ್ರಸ್ತಾಪಿಸಲಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

2,500 ಕೋಟಿ ರೂಪಾಯಿ ಘೋಷಣೆ
2023-2024 ರ ಆರ್ಥಿಕ ವರ್ಷಕ್ಕೆ ನಮ್ಮ ಮೆಟ್ರೋದ ಚಾಲ್ತಿಯಲ್ಲಿರುವ ಯೋಜನೆಗಳಿಗಾಗಿ ರಾಜ್ಯ ಸರ್ಕಾರವು 2,500 ಕೋಟಿ ರೂಪಾಯಿಗಳನ್ನು ಘೋಷಿಸಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಈ ಅವಧಿಯಲ್ಲಿ 40.15 ಕಿಮೀ ಮೆಟ್ರೋ ಮಾರ್ಗವನ್ನು ಕಾರ್ಯಗತಗೊಳಿಸಲಿದೆ.

BMRCL ಯೋಜನೆಗಳಿಗೆ ಹಣ
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿರುವ BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, 'BMRCL ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯದಿಂದ ಹಣ ನೀಡಲಾಗುತ್ತದೆ. ಇವೆರಡರ ಬಜೆಟ್‌ನಲ್ಲಿ ನಾವು 5,936 ಕೋಟಿ ರೂಪಾಯಿಗಳನ್ನು ಪಡೆದಿದ್ದೇವೆ. ಇಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ನಮಗೆ ಅಂದಾಜು 2,500 ಕೋಟಿ ರೂ.ಗಳನ್ನು ಘೋಷಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

40 ಕಿ.ಮೀ ಮೆಟ್ರೋ ನೆಟ್‌ವರ್ಕ್‌ಗೆ ಹಣ ಬಳಕೆ
ಈ ಮೊತ್ತವನ್ನು ಯಾವ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ಕೇಳಿದಾಗ, ಈ ಹಣವನ್ನು ಈ ವರ್ಷ ಕಾರ್ಯಾರಂಭ ಮಾಡಲಿರುವ 40 ಕಿ.ಮೀ ಮೆಟ್ರೋ ನೆಟ್‌ವರ್ಕ್‌ಗೆ ಬಳಸಲಾಗುವುದು ಎಂದು ಎಂಡಿ ಹೇಳಿದ್ದಾರೆ. 'ನಮ್ಮ ಬಳಿ ಈಗ ಸುಮಾರು 6,000 ಕೋಟಿ ರೂ. ನಿಧಿ ಇದೆ. ಇದು ನಮ್ಮ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಸಾಕಾಗುತ್ತದೆ' ಎಂದು ಅವರು ಮಾಹಿತಿ ನೀಡಿದ್ದಾರೆ.

56 ಕಿಮೀ ಕಾರ್ಯಾಚರಣೆ ಜಾಲ
ಬೆಂಗಳೂರು ಮೆಟ್ರೋ ಪ್ರಸ್ತುತ 56 ಕಿಮೀ ಕಾರ್ಯಾಚರಣೆಯ ಜಾಲವನ್ನು ಹೊಂದಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಲೈನ್, ಕೆಂಗೇರಿಯಿಂದ ಚಲ್ಲಘಟ್ಟ, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮತ್ತು ನಾಗಸಂದ್ರದಿಂದ ಬಿಐಇಸಿವರೆಗೆ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ.

ವಿಮಾನ ನಿಲ್ದಾಣದ ಮಾರ್ಗ
ಬಜೆಟ್‌ನಲ್ಲಿ ವಿಮಾನ ನಿಲ್ದಾಣದ ಮಾರ್ಗದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ 58.19 ಕಿ.ಮೀ ಉದ್ದದ ಕೆಐಎಗೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಯೋಜನೆಯ ಕಾಮಗಾರಿಗಳು 30 ನಿಲ್ದಾಣಗಳೊಂದಿಗೆ ತ್ವರಿತಗತಿಯಲ್ಲಿ ಪ್ರಗತಿಯಲ್ಲಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರೂ 16,328 ಕೋಟಿ ವೆಚ್ಚದ ಮೆಟ್ರೋ ಹಂತ-3 ಯೋಜನೆಯು 44.65 ಕಿಮೀ ಉದ್ದದ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ.












Click it and Unblock the Notifications