Namma metro: ಮೆಟ್ರೋದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದವನ ಬಂಧನ, ಈತನ ಹಿನ್ನೆಲೆ ಏನು ಗೊತ್ತಾ?
ಬೆಂಗಳೂರು, ಡಿಸೆಂಬರ್, 08: ಬೆಂಗಳೂರಿನ ಜೀವನಾಡಿಯ ಸಾರಿಗೆಗಳಲ್ಲಿ ಒಂದಾಗಿರುವ ನಮ್ಮ ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಅಸಹ್ಯಕರ ಘಟನೆಗಳು ನಡೆಯುತ್ತಲೇ ಇವೆ. ಅಲ್ಲದೆ ಬಿಎಂಆರ್‌ಸಿಎಲ್ ಕೂಡ ಇಂತಹ ಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿರುವ ಉದಾಹರಣೆಗಳು ಇವೆ. ಆದರೂ ಮತ್ತೇ ಇದೀಗ ಕಾಮುಕ ಯುವಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಜರುಗಿದೆ.
ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿ ಈ ಹಿಂದೆಯೂ ಎರಡ್ಮೂರು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಇದೀಗ ಮತ್ತೊಂದು ಇಂತಹ ಘಟನೆ ಬೆಳಕಿಗೆ ಬಂದಿದೆ. ನಿನ್ನೆ (ಡಿಸೆಂಬರ್ 07) ಬೆಳಗ್ಗೆ 9.40ರ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿ ಯುವಕನೊಬ್ಬ ಮೆಟ್ರೋ ಹತ್ತಿದ್ದ ಯುವತಿಯ (22) ಮೈಕೈ ಮುಟ್ಟಿದ್ದಾನೆ.

ಬಳಿಕ ಯುವತಿ ಕಿರುಚಾಡುತ್ತಿದ್ದಂತೆ ಆ ಕಾಮುಕ ಯುವಕ ಮುಂದಿನ ನಿಲ್ದಾಣದಲ್ಲಿ ಪರಾರಿ ಆಗಲು ಯತ್ನಿಸಿದ್ದ, ನಂತರ ಆರೋಪಿ ಲೋಕೇಶ್ ಎಂಬಾತನನ್ನು ಮೆಟ್ರೋ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ತನಿಖೆ ನಡೆಸಿದ ವೇಳೆ ಆರೋಪಿ ಲೋಕೇಶ್ನ ಅಸಲಿ ಇತಿಹಾಸ ಬಟಾ ಬಯಲಾಗಿದೆ. ಈತನ ಮೇಲೆ ಈ ಹಿಂದೆ ಕೂಡ ಕೆಲ ಪ್ರಕರಣಗಳು ದಾಖಲಾಗಿದ್ದವು. ಈ ಹಿಂದೆ ಬಿಎಂಟಿಸಿ ಬಸ್ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಬಲೆಗೆ ಬಿದ್ದಿದ್ದ ಎನ್ನುವ ಸತ್ಯ ತನಿಖೆಯ ವೇಳೆ ಬಯಲಾಗಿದೆ. ಇನ್ನು ಆರೋಪಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರೋಪಿ ಹಿನ್ನೆಲೆ ಏನು?
ಮೆಟ್ರೋ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸಿದಾಗ ಲೋಕೇಶ್ ಆಚಾರ್ ಅಡುಗೆ ಉದ್ಯಮದ ನೌಕರನಾಗಿದ್ದು, ಚಲನಚಿತ್ರೋದ್ಯಮದಲ್ಲಿ ಸಂಪರ್ಕ ಹೊಂದಿದ್ದಾನೆ ಎಂಬುದು ತಿಳಿದುಬಂದಿದೆ. ಇನ್ನು ಈ ವೇಳೆ ಆತನ ಬಳಿ ಎರಡು ಮೆಟ್ರೋ ಕಾರ್ಡ್ ಸಿಕ್ಕಿವೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಮಹಿಳೆಗೆ ಮೆಟ್ರೋ ಸಿಬ್ಬಂದಿ ಕೌನ್ಸಿಲಿಂಗ್ ಮಾಡಿದ್ದು, ಆಚಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರು ದಾಖಲಿಸುವಂತೆ ಸೂಚಿಸಿದ್ದಾರೆ. ಮಹಿಳೆ ಸಮೀಪದ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಿರುಕುಳ ನೀಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.
ಆಕೆ ಎಫ್‌ಐಆರ್ ದಾಖಲಿಸಲು ಇಷ್ಟಪಡದ ಕಾರಣ ಎನ್‌ಸಿಆರ್ ದೂರು ಮಾತ್ರ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಿಎಂಆರ್‌ಸಿಎಲ್ ಸಿಬ್ಬಂದಿ ಆಚಾರ್ ಅವರನ್ನು ಠಾಣೆಗೆ ಕರೆತಂದರು.
ಇನ್ನು ಕಳೆದ ತಿಂಗಳು ಕೆಂಪೇಗೌಡ ನಿಲ್ದಾಣದಲ್ಲಿ ಕಿರುಕುಳದ ಘಟನೆಯ ನಂತರ, ಯಾವುದೇ ಮರುಕಳಿಸದಂತೆ ತಡೆಯಲು ಪೀಕ್ ಅವರ್‌ಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಜಾಗರೂಕತೆ ಮತ್ತು ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಸಿಬ್ಬಂದಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಬಿಎಂಆರ್‌ಸಿಎಲ್ ಮಹಿಳೆಯರ ರಕ್ಷಣೆ ದೃಷ್ಟಿಯಿಂದ ಇಂತಹ ಪಕ್ರರಣಗಳ ವಿರುದ್ಧ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ ಆಗಿದೆ.












Click it and Unblock the Notifications