ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ರೈಲು, ಶೀಘ್ರವೇ ಕಾಮಗಾರಿ
ಬೆಂಗಳೂರು, ಅಕ್ಟೋಬರ್ 08 : ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಬಿಎಂಆರ್‌ಸಿಎಲ್ ಮೆಟ್ರೋ ಮಾರ್ಗ ಸಾಗುವಲ್ಲಿ ಬೀದಿ ದೀಪಗಳ ಸ್ಥಳಾಂತರಕ್ಕೆ ಟೆಂಡರ್ ಕರೆದಿದೆ.
ನಮ್ಮ ಮೆಟ್ರೋ ಫೇಸ್ 2ಬಿ ಅಡಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತದೆ. ಕೆ. ಆರ್. ಪುರ, ಹೆಬ್ಬಾಳ ಮೂಲಕ ಮೆಟ್ರೋ ಮಾರ್ಗ ವಿಮಾನ ನಿಲ್ದಾಣವನ್ನು ತಲುಪಲಿದೆ.

ಮೆಟ್ರೋ ಮಾರ್ಗ ಸಾಗುವ ಹಾದಿಯಲ್ಲಿರುವ ಬೀದಿ ದೀಪಗಳನ್ನು ತೆರವುಗೊಳಿಸಿ 6 ತಿಂಗಳಿನಲ್ಲಿ ಹೊಸ ಬೀದಿ ದೀಪಗಳ ವ್ಯವಸ್ಥೆ ಮಾಡಲು ಟೆಂಡರ್ ಕರೆಯಲಾಗಿದೆ. ಮಾರ್ಗದಲ್ಲಿರುವ ನೀರು ಮತ್ತು ಒಳಚರಂಡಿ ಕೊಳವೆಗಳನ್ನು ಬದಲಾವಣೆ ಮಾಡಲಾಗುತ್ತದೆ, ಬಳಿಕ ಕಾಮಗಾರಿಗೆ ಚಾಲನೆ ಸಿಗಲಿದೆ.
ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಈ ಹಿಂದೆ ಅಂತಿಮಗೊಳಿಸಿದ್ದ ಮಾರ್ಗವನ್ನು ಬದಲಾವಣೆ ಮಾಡಿರುವುದರಿಂದ ಪ್ರಯಾಣದ ಅವಧಿ ಸ್ಪಲ್ಪ ಹೆಚ್ಚಾಗಲಿದೆ. ಬೆಂಗಳೂರು ದಕ್ಷಿಣ ಭಾಗದ ಜನರು 2 ಸಲ ಇಂಟರ್ ಚೇಂಜ್ ನಿಲ್ದಾಣದಲ್ಲಿ ಮಾರ್ಗ ಬದಲಾಯಿಸಬೇಕು.
ಹಿಂದೆ ಗೊಟ್ಟಿಗೆರೆ-ನಾಗವಾರ ಮಾರ್ಗವನ್ನು ವಿಮಾನ ನಿಲ್ದಾಣದ ತನಕ ವಿಸ್ತರಣೆ ಮಾಡಲು ಬಿಎಂಆರ್‌ಸಿಎಲ್ ತೀರ್ಮಾನಿಸಿತ್ತು. ನಾಗವಾರದ ನಂತರ ರಾಮಕೃಷ್ಣ ಹೆಗಡೆ ನಗರ, ಕೋಗಿಲು ಕ್ರಾಸ್, ಜಕ್ಕೂರು, ಜಿಕೆವಿಕೆ, ಟ್ರಂಪೆಟ್ ಮೂಲಕ ಮಾರ್ಗ ವಿಮಾನ ನಿಲ್ದಾಣ ತಲುಪುತ್ತಿತ್ತು.
ಈಗ ಮಾರ್ಗ ಬದಲಾವಣೆ ಮಾಡಲಾಗಿದೆ. ಸಿಲ್ಕ್ ಬೋರ್ಡ್‌ನಿಂದ ಕೆ. ಆರ್. ಪುರ ತನಕ ನಿರ್ಮಾಣವಾಗಲಿರುವ ಎತ್ತರಿಸಿದ ಮಾರ್ಗವೇ ವಿಮಾನ ನಿಲ್ದಾಣದ ತನಕ ವಿಸ್ತರಣೆಯಾಗಲಿದೆ. ಆದ್ದರಿಂದ, ಪ್ರಯಾಣದ ಅವಧಿ ತುಸು ಹೆಚ್ಚಾಗಲಿದೆ.
ಹೊಸ ಮಾರ್ಗದಲ್ಲಿ 17 ನಿಲ್ದಾಣಗಳಿದ್ದು, ಎರಡು ನಿಲ್ದಾಣಗಳು ಸುರಂಗದಲ್ಲಿ ಇರಲಿವೆ. ಹೊಸ ಮಾರ್ಗ ನಿರ್ಮಾಣಕ್ಕಾಗಿ 279 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಾರ್ಗ ಪೂರ್ಣಗೊಂಡ ಬಳಿಕ ಕೆ. ಆರ್. ಪುರದಿಂದ 45 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪುವ ನಿರೀಕ್ಷೆ ಇದೆ.












Click it and Unblock the Notifications