Namma Metro Pink Line: ಪ್ರಯಾಣಿಕರಿಗೆ ಸಿಹಿಸುದ್ದಿ! ಪಿಂಕ್ ಲೈನ್ CMRS ತಪಾಸಣೆ ಪೂರ್ಣ, ನ.1ಕ್ಕೆ ಓಪನ್?
ಬೆಂಗಳೂರು: ನಗರದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೆಲವೇ ದಿನಗಳಲ್ಲಿ ದಿನಗಳಲ್ಲಿ ಗುಡ್‌ನ್ಯೂಸ್ ಸಿಗಲಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಗುಲಾಬಿ ಮಾರ್ಗದ ಎತ್ತರಿಸಿದ ಕಾರಿಡಾರ್ (Metro Pink Line Corridor) ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (CMRS) ಮೂರು ದಿನಗಳ ಶಾಸನಬದ್ಧ ಕೊನೆಯ ತಪಾಸಣೆ ಪೂರ್ಣಗೊಂಡಿದೆ. ಸುರಕ್ಷತಾ ಆಯುಕ್ತರಾದ (ದಕ್ಷಿಣ ವಲಯ)ವಿ. ವೆಂಕಟಸುಬ್ರಮಣಿಯನ್ ಅವರ ನೇತೃತ್ವದ ತಂಡ ಅಕ್ಟೋಬರ್ 6ರಿಂದ 8ರವರೆಗೆ ತಪಾಸಣೆ ಮುಗಿಸಿದ್ದಾರೆ. ವರದಿ ಬರುತ್ತಿದ್ದಂತೆ ಮಾರ್ಗದ ಉದ್ಘಾಟನೆ ಆಗಲಿದೆ.
ಒಟ್ಟು 6 ನಿಲ್ದಾಣಗಳನ್ನು ಒಳಗೊಂಡ ಗುಲಾಬಿ ಮಾರ್ಗದಲ್ಲಿ (ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ) ಡ್ರೈವರ್‍ಲೆಸ್ ಹೊಸ ಮೆಟ್ರೋ ರೈಲುಗಳ ವಾಣಿಜ್ಯ ಕಾರ್ಯಾಚರಣೆಗೆ ಈ ಸುರಕ್ಷತಾ ತಪಾಸಣೆಯು ಮಹತ್ವದ ಮೈಲಿಗಲ್ಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ..

ಏನೆಲ್ಲ ತಪಾಸಣೆ ಆಯಿತು? ಉದ್ಘಾಟನೆ ಯಾವಾಗ?
ಮೊದಲ ದಿನ ಅಕ್ಟೋಬರ್ 6ರಂದು ಸಿಎಂಆರ್ ಎಸ್ ಮತ್ತವರ ತಂಡವು ಮುಖ್ಯ ಮಾರ್ಗ ಹಾಗೂ ಸಂಬಂಧಿತ ಮೂಲಸೌಕರ್ಯಗಳನ್ನು ಮೋಟಾರ್ ಟ್ರಾಲಿ ಮೂಲಕ ಪರಿಶೀಲಿಸಿತು. ಅಕ್ಟೋಬರ್ 7ರಂದು ಮೋಟಾರ್ ಟ್ರಾಲಿ ತಪಾಸಣೆಯನ್ನು ಮುಂದುವರಿಸುವುದರ ಜೊತೆಗೆ ಕೋತನೂರು ಡಿಪೋದ ಸೌಲಭ್ಯಗಳನ್ನು ಪರಿಶೀಲಿಸಿ, ಮುಖ್ಯ ಮಾರ್ಗದಲ್ಲಿ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ಮತ್ತು ವಿವಿಧ ಪರೀಕ್ಷೆಗಳನ್ನು ನಡೆಸಿತು. ಇಂದು ಗುರುವಾರ (ಅಕ್ಟೋಬರ್ 8ರಂದು) ಕೊನೆಯ ದಿನ ಬೈಯಪ್ಪನಹಳ್ಳಿಯಲ್ಲಿರುವ ಕಾರ್ಯಾಚರಣೆ ನಿಯಂತ್ರಣ ಕೇಂದ್ರವನ್ನು (OCC) ಪರಿಶೀಲಿಸುವ ಮೂಲಕ ಮೂರು ದಿನಗಳ ತಪಾಸಣೆಯನ್ನು ಪೂರ್ಣಗೊಳಿತು ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ರಾಜ್ಯೋತ್ಸವದಂದು ಪಿಂಕ್ ಲೈನ್ ಉದ್ಘಾಟನೆ?
ಸಿಎಂಆರ್ ಎಸ್ ತಪಾಸಣೆ ಪೂರ್ಣಗೊಂಡಿದ್ದು, ತಪಾಸಣೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ತಿಳಿಸುವ ಜೊತೆಗೆ ಅಲ್ಲಿಂದ ಅಂತಿಮ ಅನುಮೋದನಾ ವರದಿ ದೊರೆಯಬೇಕಿದೆ. ಅದಕ್ಕಾಗಿ ಸುಮಾರು 10-15ದಿನಗಳು ಕಾಯಬೇಕಿದೆ. ವರದಿ ಬರುತ್ತಿದ್ದಂತೆ ಗುಲಾಬಿ ಮಾರ್ಗ ತೆರೆಯಲಾಗುತ್ತದೆ. ಅಕ್ಟೋಬರ್ ತಿಂಗಳಾಂತ್ಯಕ್ಕೆ ಅಥವಾ ನವೆಂಬರ್ 1ರಂದು ರಾಜ್ಯೋತ್ಸವದ ಶುಭದಿನದಂದು ಗುಲಾಬಿ ಮಾರ್ಗವು ಕನ್ನಡಿಗರ ಸಂಚಾರಕ್ಕೆ ಲಭ್ಯವಾಗುವ ಸಾಧ್ಯತೆ ಇದೆ.
ಒಂದೂವರೆ ತಿಂಗಳ ಹಿಂದೆ RDSO ಪ್ರಮಾಣಪತ್ರ
ಈಗಾಗಲೇ ಬಿಎಂಆರ್ ಸಿಎಲ್ ಆಗಸ್ಟ್ 2026ರಲ್ಲಿ ಗುಲಾಬಿ ಮಾರ್ಗದ ಕಾರ್ಯಾಚರಣೆಗೆ ಅಗತ್ಯವಿದ್ದ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆಯಿಂದ (RDSO) ಪ್ರಮಾಣಪತ್ರ ಪಡೆದಿದೆ. ಬಳಿಕ ಇತ್ತೀಚೆಗಷ್ಟೇ ರೈಲ್ವೆ ಮಂಡಳಿಯಿಂದ ಮೆಟ್ರೋ ರೈಲು ಬೋಗಿಗಳಿಗೆ ತಾತ್ಕಾಲಿಕ ಅನುಮೋದನೆ ಹಾಗೂ ಸಿಗ್ನಲಿಂಗ್ ವ್ಯವಸ್ಥೆಗೆ ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕರಿಂದ (ISA) ಸುರಕ್ಷತಾ ಪ್ರಮಾಣೀಕರಣ ನೀಡಿತು. ಸಾರ್ವಜನಿಕ ಪ್ರಯಾಣಿಕರ ಸಂಚಾರಕ್ಕೆ ಈ ಮಾರ್ಗವನ್ನು ಮುಕ್ತಗೊಳಿಸುವ ಮೊದಲು ಮೇಲಿನ ಎಲ್ಲ ವಿಧದ ತಪಾಸಣೆಯು ಪ್ರಮುಖ ಶಾಸನಬದ್ಧ ಸುರಕ್ಷತಾ ಪರಿಶೀಲನೆಯಾಗಿವೆ.
ತಪಾಸಣೆಯ ಸಂದರ್ಭದಲ್ಲಿ ಸಿಎಂಆರ್‍ಎಸ್ ಸೂಚಿಸಿರುವ ಅಂಶಗಳು ಹಾಗೂ ಷರತ್ತುಗಳನ್ನು ಪಾಲಿಸಿದ ನಂತರವೇ ಪ್ರಯಾಣಿಕರ ಸಂಚಾರಕ್ಕೆ ಅಗತ್ಯವಾದ ಸುರಕ್ಷತಾ ಅನುಮೋದನೆ ನೀಡಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ..
ಮೆಟ್ರೋ ಜಾಲ 103.60ಕಿಮೀಗೆ ಏರಿಕೆ!
ನಮ್ಮ ಮೆಟ್ರೋದ ಪ್ರಸ್ತುತ ಕಾರ್ಯಾಚರಣೆಯ ಜಾಲವು 96.10 ಕಿ.ಮೀ. ಇದ್ದು, ಅದು ಗುಲಾಬಿ ಮಾರ್ಗದ ಈ ಎತ್ತರಿಸಿದ ಮಾರ್ಗದ ಲೋಕಾರ್ಪಣೆಯೊಂದಿಗೆ 103.60 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಇದರಿಂದ ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಧಾರಿಸಲಿದ್ದು, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಬಲ ದೊರೆಯಲಿದೆ ಎಂದು ಬಿಎಂಆರ್ ಸಿಎಲ್ ವಿಶ್ವಾಸ ವ್ಯಕ್ತಪಡಿಸಿದೆ.


Click it and Unblock the Notifications
