Namma Metro Phase-3 Project: 44.65 ಕಿಮೀ ಮಾರ್ಗದ ಕಾಮಗಾರಿಗೆ ವೇಗ ನೀಡಲು ಮಹತ್ವದ ಹೆಜ್ಜೆ ಇಟ್ಟ BMRCL
ಬೆಂಗಳೂರು: ವರ್ಷಗಳು ಕಳೆದರೂ ನಮ್ಮ ಮೆಟ್ರೋ ಆರೆಂಜ್ ಮಾರ್ಗದ ಯೋಜನೆ, ಕಾಮಗಾರಿ ಆರಂಭಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಹತ್ವದ ಹೆಜ್ಜೆ ಇಟ್ಟಿದೆ. 44.65 ಕಿಲೋ ಮೀಟರ್ ಉದ್ದದ 'ಹಂತ-3' ಯೋಜನೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸಾಮಾನ್ಯ ಸಲಹೆಗಾರರಾಗಿ (General Consultant) ಆಸಕ್ತಿ ವ್ಯಕ್ತಪಡಿಸುವಂತೆ ಆಹ್ವಾನ ನೀಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಹಂತ 3ರ ಎರಡು ಕಾರಿಡಾರ್ ನಿರ್ಮಾಣದ ಸ್ಪಷ್ಟ ಚಿತ್ರಣ ಸಿಗಲಿದೆ.
ಈ ಹಿಂದೊಮ್ಮೆ ಇದೇ ಮಾರ್ಗಕ್ಕಾಗಿ ಟೆಂಡರ್ ಆಹ್ವಾನಿಸಲಾಗಿತ್ತಾದರೂ ಕಾರಣಾಂತರಗಳಿಂದ ಆ ಟೆಂಡರ್ ರದ್ದುಗೊಳಿಸಲಾಯಿತು. ಎತ್ತರಿಸಿದ ಎರಡು ಕಾರಿಡಾರ್‌ಗಳ ಯೋಜನೆ ಆರಂಭಿಸುವ ಮೊದಲು ಯೋಜನಗೆ ಸಲಹಾ ಸಮಿತಿ, ಟೆಂಡರ್ ಪ್ರಕ್ರಿಯೆ, ಖರೀದಿ, ಗುತ್ತಿಗೆ ನೀಡುವ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ. ಈಗಾಗಲೇ ತಡವಾಗಿದ್ದು, ಯೋಜನೆ ತ್ವರಿತವಾಗಿ ಕೈಗೆತ್ತಿಕೊಳ್ಳುವ ಸಂಬಂಧ ಮೆಟ್ರೋ ಅಧಿಕಾರಿಗಳು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ 'ಆಸಕ್ತಿ ಅಭಿವ್ಯಕ್ತಿ' (EOI) ನೀಡುವಂತೆ ಕೋರಿದೆ.

44.65 ಕಿ.ಮೀ, 31 ನಿಲ್ದಾಣಗಳ ಯೋಜನೆ
ನಮ್ಮ ಮೆಟ್ರೋ ಹಂತ 3ರಲ್ಲಿ ಎರಡು ಕಾರಡಾರ್ ನಿರ್ಮಿಸಲಾಗುತ್ತದೆ. ಅದರಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ಸಹ ಸೇರಿದ್ದು, ಮೊದಲ ಕಾರಿಡಾರ್- 'ಜೆಪಿ ನಗರ 4ನೇ ಹಂತ - ಕೆಂಪಾಪುರವರೆಗೆ 32.15 ಕಿಲೋ ಮೀಟರ್ (22 ನಿಲ್ದಾಣಗಳು) ಇದೆ. ಎರಡನೇ ಕಾರಿಡಾರ್- 'ಹೊಸಹಳ್ಳಿ - ಕಡಬಗೆರೆ ವರೆಗೆ ಒಟ್ಟು 12.50 ಕಿಲೋ ಮೀಟರ್ (9ನಿಲ್ದಾಣಗಳು) ಉದ್ದವಿದೆ. ಇವೆರಡು ಸೇರಿ ಒಟ್ಟು 44.65 ಕಿ.ಮೀ ಉದ್ದಿವೆ. ಈ ಯೋಜನೆಯಡಿ ಒಟ್ಟು 31 ನಿಲ್ದಾಣಗಳು ನಿರ್ಮಾಣಗೊಳ್ಳಬೇಕಿದೆ. ಕೇಂದ್ರ ಸರ್ಕಾರ ಡಿಪಿಆರ್ ಪರಿಷ್ಕರಣೆ ಬಳಿಕ ಅನುಮೋದನೆ ನೀಡಿ ವರ್ಷಗಳು ಕಳೆದರೂ ಕಾಮಗಾರಿ ಆರಂಭಕ್ಕೆ ತಾಂತ್ರಿಕ ಸವಾಲುಗಳು ಎದುರಾಗಿ ವಿಳಂಬವಾಗಿತ್ತು. ಇದೀಗ ಯೋಜನೆಗೆ ವೇಗ ದೊರೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಸಲಹೆಗಾರರಾಗಿ ಆಗಮಿಸುವ ಸಂಸ್ಥೆಗಳು ಯೋಜನೆಗೆ ರೂಪಿಸುವಿಕೆ, ಖರೀದಿ, ಹಣಕಾಸು, ಅನುಷ್ಠಾನ ಪ್ರಕ್ರಿಯೆಗಳಲ್ಲಿ ನೆರವಾಗಲಿವೆ. ಅತ್ಯಂತ ಸೂಕ್ತ ಹಾಗೂ ಸಮಂಜಸ ಸಲಹೆಗಳನ್ನು BMRCL ನಿರೀಕ್ಷಿಸುತ್ತಿದೆ. ಹೀಗಾಗಿ ಯೋಜನೆ ವಿನ್ಯಾಸಗಳ ಪರಿಶೀಲನೆ ಮತ್ತು ನಿರ್ವಹಣೆ, ಟೆಂಡರ್ ದಾಖಲೆಗಳ ಸಿದ್ಧತೆ, ಆರಂಭಿಕ ಎಲ್ಲ ಪ್ರಕ್ರಿಯೆಯನ್ನು ತ್ವರಿತವಾಗಿ ಅಂತಿಮಗೊಳಿಸುವುದು, ಬಿಡ್ ಮೌಲ್ಯಮಾಪನ ಎಲ್ಲ ಅಂಶಗಳಲ್ಲಿ ಈ ಸಲಹಾ ಕಂಪನಿಗಳು ಬೆಂಬಲ ನೀಡಲಿವೆ.
ಕಾಮಗಾರಿ ಸ್ಥಳದ ಪರಿಸರ ಅಧ್ಯಯನ, ಕಾಮಗಾರಿ ಸುರಕ್ಷತೆ, ಗುತ್ತಿಗೆ ಕಂಪನಿಗಳ ಅಂತಿಮಗೊಳಿಸುವುದು ಹೀಗೆ ವಿವಿಧ ವಿಷಯಗಳಲ್ಲಿ ಈ ಕಂಪನಿಗಳಿಗೆ BMRCL ಸಲಹೆ ನೀಡಲಿವೆ. ಈ ಮೂಲಕ ಯೋಜನೆ ಅನುಷ್ಠಾನಗೊಳಿಸಿ ಭವಿಷ್ಯದಲ್ಲಿ ನಗರದ ಪಶ್ಚಿಮ ಮತ್ತು ದಕ್ಷಿಣ ಭಾಗದ ವಸತಿ ಪ್ರದೇಶಗಳ ಸಂಪರ್ಕ ಸುಧಾರಣೆಗೆ ಮೆಟ್ರೋ ಗುರಿ ಹಾಕಿಕೊಂಡಿದೆ.
ಸುಂಕದಕಟ್ಟೆಯಲ್ಲಿ ಮೆಟ್ರೋ ನಿರ್ವಹಣಾ ಡಿಪೋ
ಇನ್ನೂ ನಮ್ಮ ಮೆಟ್ರೋ 3ನೇ ಹಂತದ ಎರಡು ಕಾರಿಡಾರ್‌ಗಳ ಮೆಟ್ರೋ ನಿರ್ವಹಣೆಯ ಡಿಪೋವನ್ನು ಸುಂಕದಕಟ್ಟೆಯಲ್ಲಿ ನಿರ್ಮಿಸಲು ಚಿಂತಿಸಲಾಗಿದೆ. ಸುಮನಹಳ್ಳಿ ಕ್ರಾಸ್ ಪ್ರದೇಶವು ಈ ಕಾರಿಡಾರ್‌ಗಳ ಸಂಪರ್ಕ ಕೇಂದ್ರವಾಗಲಿದೆ. ಹೊಸ ಮಾರ್ಗಗಳು ಜೆಪಿ ನಗರ, ಜೆಪಿ ನಗರ 4ನೇ ಹಂತ, ಮೈಸೂರು ರಸ್ತೆ, ಪೀಣ್ಯ ಮತ್ತು ಕೆಂಪಾಪುರ ಹಾಗೂ ನಗರದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿವೆ.
6775 ಕೋಟಿ ರೂ. ಸಾಲ ಕೇಳಿದ BMRCL
ಈ ಯೋಜನೆ ಜಾರಿಗಾಗಿ BMRCL ಜಪಾನ್ ಇಂಟರ್ ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಕಂಪನಿಗೆ ಸಾಲ ಕೇಳಿದೆ. ಒಟ್ಟು 6775 ಕೋಟಿ (102.48 ಶತಕೋಟಿ ಜಪಾನಿಯನ್ ಯೆನ್) ರೂಪಾಯಿ ನೀಡುವಂತೆ ಮನವಿ ಮಾಡಿಕೊಂಡಿದೆ. ಈ ಹಣದಲ್ಲಿ ಕಾಮಗಾರಿ ಆರಂಭ, ವಾಸ್ತುಶಿಲ್ಪ, ಕಟ್ಟಡ ನಿರ್ಮಾಣದ ಎಲ್ಲ ಖರ್ಚುಗಳನ್ನು ನೋಡಿಕೊಳ್ಳಲಿದೆ. ಯೋಜನೆಗೆ ಬೇಕಾದ ಹಣದ ಅಲ್ಪ ಭಾಗವನ್ನು ಸಾಲ ರೂಪದಲ್ಲಿ ಪಡೆಯಲಿರುವ ನಮ್ಮ ಮೆಟ್ರೋ ಉಳಿದ ಬಹುಪಾಲನ್ನು ತಾನೇ ಭರಿಸಲಿದೆ.
ಹೊಸ ಮಾರ್ಗಗಳಿಗೆ 252 ಹೊಸ ಮೆಟ್ರೋ ರೈಲುಗಳನ್ನು ಪೂರೈಸಲು ಈಗಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಳದಿ ಮಾರ್ಗ, ನೀಲಿ ಮಾರ್ಗ, ಗುಲಾಬಿ ಮಾರ್ಗ ಹಾಗೂ ಹಸಿರು ಮಾರ್ಗಕ್ಕೆ ಹಂತ ಹಂತವಾಗಿ ಮೆಟ್ರೋ ರೈಲುಗಳು ಪೂರೈಕೆ ಆಗುತ್ತಿವೆ. ಮೆಟ್ರೋ ಹಂತ 3ನೇ ಯೋಜನೆ ಎರಡು ಕಾರಿಡಾರ್‌ಗಳು ನಿರ್ಮಾಣವಾದ ಬಳಿಕ ಸಂಚಾರ ದಟ್ಟಣೆ ಕೊಂಚ ನಿಯಂತ್ರಣಕ್ಕೆ ಬರಲಿದೆ.


Click it and Unblock the Notifications
