Namma Metro: ನಾಗಸಂದ್ರ-ಮಾದಾವರ ನಡುವೆ ಮೆಟ್ರೋ ಸೇವೆ, ಫಸ್ಟ್ ಡೇ ಭರ್ಜರಿ ಪ್ರಯಾಣ!
Namma Metro: ನಾಗಸಂದ್ರ-ಮಾದಾವರ ನಡುವೆ ಮೆಟ್ರೋ ರೈಲು ಸಂಚಾರ ಗುರುವಾರದಿಂದ ಪ್ರಾರಂಭವಾಗಿದ್ದು, ಮೊದಲ ದಿನವೇ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ತುಮಕೂರು ಮುಖ್ಯರಸ್ತೆಯ ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮೆಟ್ರೊ ರೈಲು ಮಾರ್ಗವನ್ನು ಸಾರ್ವವಜನಿಕರ ಸಂಚಾರಕ್ಕೆ ಮುಕ್ತವಾಗಿಸಲಾಗಿತ್ತು. ನವೆಂಬರ್ 7ರ ಬೆಳಿಗ್ಗೆ 5ಗಂಟೆಯಿಂದ ಹಸಿರು ಬಣ್ಣದ ಮಾರ್ಗದಲ್ಲಿ ಸೇವೆ ಪ್ರಾರಂಭವಾಗಿತ್ತು. ಇದಕ್ಕೆ ಬೆಂಗಳೂರಿನ ಜನರಿಂದ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗುರುವಾರ ಬೆಳಿಗ್ಗೆ 5 ಗಂಟೆಯಿಂದ ನಾಗಸಂದ್ರ-ಮಾದಾವರ ನಡುವೆ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ಬುಧವಾರ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ನಾಯಕರು ಯಶವಂತಪುರದಿಂದ ಮಾದಾವರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದ್ದರು.

ಸುದೀರ್ಘ ಏಳು ವರ್ಷಗಳ ನಂತರ ಈ ಭಾಗದಲ್ಲಿ ಮೆಟ್ರೋ ಸಾರ್ವಜನಿಕರ ಸೇವೆಗೆ ಮುಕ್ತಾಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ತುಮಕೂರು ಮುಖ್ಯರಸ್ತೆಯ ಮಾರ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ (ಸಂಚಾರ ದಟ್ಟಣೆ) ಆಗುತ್ತಿತ್ತು. ಅಲ್ಲದೇ ಸುತ್ತಮುತ್ತಲಿನ ಭಾಗದಲ್ಲೂ ಟ್ರಾಫಿಕ್ ಕಿರಿಕಿರಿಯಿಂದ ಬೆಂಗಳೂರು ವಾಹನ ಸವಾರರು ಹೈರಾಣಾಗಿದ್ದರು. ಇದೀಗ ಮೆಟ್ರೋ ಸೇವೆ ಪ್ರಾರಂಭವಾಗುತ್ತಿದ್ದಂತೆಯೇ ಮೊದಲ ದಿನವೇ ಜನ ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಸೇವೆ ಬಳಸುತ್ತಿದ್ದಾರೆ.
11 ಸಾವಿರ ಜನರಿಂದ ಸೇವೆ ಬಳಕೆ: ಇನ್ನು ಮೊದಲ ದಿನವೇ ನಾಗಸಂದ್ರ-ಮಾದಾವರ ನಡುವೆ ಮೆಟ್ರೋ ರೈಲು ಸಂಚಾರ ಸೇವೆಯನ್ನು 11,000 ಸಾವಿರಕ್ಕೂ ಹೆಚ್ಚು ಜನ ಬಳಸಿಕೊಂಡಿದ್ದಾರೆ. ಗುರುವಾರ ಈ ಭಾಗದಲ್ಲಿ ಬೆಳಿಗ್ಗೆ 5ಗಂಟೆಗೆ ಸೇವೆ ಪ್ರಾರಂಭವಾಗಿತ್ತು. ಬೆಳಿಗ್ಗೆ 5ರಿಂದ ರಾತ್ರಿ 7 ಗಂಟೆಯ ವರೆಗೆ ಈ ಮಾರ್ಗದಲ್ಲಿ 6,032 ಜನ ಆಗಮಿಸಿದ್ದು (ಪ್ರವೇಶ) 5,061 ಜನ (ಎಕ್ಸಿಟ್) ನಿರ್ಗಮಿಸಿದ್ದಾರೆ. ಈ ಬಗ್ಗೆ ಮೆಟ್ರೋ ಅಧಿಕೃತ ಖಾತೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಈ ಮಾರ್ಗದ ಜನರಿಗೆ ಅನುಕೂಲ: ನಾಗಸಂದ್ರ-ಮಾದಾವರ ನಡುವೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗಿರುವುದರಿಂದ ಇಲ್ಲಿನ ಸುತ್ತಮುತ್ತ ಪ್ರದೇಶದ ಬಿಐಇಸಿ, ದಾಸನಪುರ ಹಾಗೂ ನೆಲಮಂಗಲ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ. ಈ ಭಾಗದ ಜನ ಹಲವು ವರ್ಷಗಳಿಂದ ಇಲ್ಲಿ ಮೆಟ್ರೋ ಸೇವೆ ಪ್ರಾರಂಭವಾಗಬೇಕು ಎಂದು ಕಾಯುತ್ತಿದ್ದರು. ಈ ಭಾಗದ ಜನರ ಬಹುವರ್ಷಗಳ ಕನಸು ಇದೀಗ ಈಡೇರಿದಂತಾಗಿದೆ. ಈ ಮಾರ್ಗಗಳಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆಯು ಕಡಿಮೆ ಆಗುವ ನಿರೀಕ್ಷೆ ಇದೆ.
ಸರತಿ ಸಾಲಲ್ಲಿ ನಿಂತು ಸಮಸ್ಯೆ: ಈಚೆಗೆ ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಏಕಾಏಕಿ ಸಾವಿರಾರು ಜನ ಪ್ರಯಾಣಿಕರು ಒಂದೇ ದಿನದಲ್ಲಿ ಬಂದಿದ್ದರಿಂದ ಸಮಸ್ಯೆ ಎದುರಾಗಿತ್ತು. ಸಾಮಾನ್ಯವಾಗಿ ಈ ಭಾಗದಲ್ಲಿ ನಿತ್ಯ ಬೆಳಿಗ್ಗೆ 6-11 ಗಂಟೆಯವರೆಗೆ 11000 ಜನ ಪ್ರಯಾಣಿಸುತ್ತಿದ್ದರು. ಆದರೆ, ಹಬ್ಬ ಮುಗಿಸಿ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿ ನವೆಂಬರ್ 4ರಂದು 15800 ಪ್ರಯಾಣಿಸಿದ್ದರು. ಇದರಿಂದ ಈ ಭಾಗದಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.












Click it and Unblock the Notifications