Namma Metro: ನಾಗಸಂದ್ರ-ಮಾದಾವರದ ನಡುವೆ ಮೆಟ್ರೋ ಸಂಚಾರ; ವಿಡಿಯೋ ನೋಡಿ
ನಾಗಸಂದ್ರದಿಂದ ಮಾದಾವರದ ನಡುವಿನ ಬಹು ನಿರೀಕ್ಷಿತ ಹಸಿರು ಮಾರ್ಗದಲ್ಲಿ ಭಾನುವಾರ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ನಾಗಸಂದ್ರದಿಂದ 3.14 ಕಿ.ಮೀ ನಡುವೆ ಇಂದು ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದ್ದು ಈ ಬಗ್ಗೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ. ನಾಗಸಂದ್ರದಿಂದ ಮಾದಾವರ ನಡುವಿನ ಮೆಟ್ರೋ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು, ಅಕ್ಟೋಬರ್ - ನವೆಂಬರ್ ವೇಳೆಗೆ ಆರಂಭವಾಗುವ ಸಾಧ್ಯತೆ ಇದೆ.
ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ರೇಷ್ಮೆ ಸಂಸ್ಥೆಯವರೆಗೂ ಮೆಟ್ರೋ ಸಂಚಾರವಿದೆ. ಇದೀಗ ಇದಕ್ಕೆ 3.14 ಕಿಮೀ ಉದ್ದದ ಮೆಟ್ರೋ ಮಾರ್ಗ ಸೇರ್ಪಡೆಯಾಗಲಿದೆ. ನಾಗಸಂದ್ರದಿಂದ ಮಾದಾವರ (ಬೆಂಗಳೂರು ಅಂತಾರಾಷ್ಟ್ರೀ ವಸ್ತು ಪ್ರದರ್ಶನ ಮೈದಾನ) ವರೆಗಿನ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಇದೀಗ ಕೌಂಟ್‌ಡೌನ್ ಶುರುವಾಗಿದೆ.

ಬಿಎಂಆರ್ ಸಿಎಲ್ ಹೇಳಿದ್ದೇನು?
"ರೀಚ್-3ರ ಎತ್ತರಿಸಿದ ಮಾರ್ಗದಲ್ಲಿನ -ನಾಗಸಂದ್ರದಿಂದ ಮಾದವರದ -3.14 ಕಿ.ಮೀ ನಡುವೆ (ರೋಲ್ಲಿಂಗ್ ಸ್ಟಾಕ್) ಮೆಟ್ರೋ ರೈಲು ಮೂಲಕ ಮೊದಲ ಪರೀಕ್ಷಾರ್ಥ ಸಂಚಾರ. ಕನಿಷ್ಠ 5ಕಿ.ಮೀ ಮತ್ತು ಗರಿಷ್ಠ 35 ಕಿ.ಮೀ ವೇಗದಲ್ಲಿ ಆಗಸ್ಟ್ 17ರಂದು ನಡೆಸಲಾಯಿತು." ಎಂದು ಮಾಹಿತಿ ಹಂಚಿಕೊಂಡಿದೆ.
7 ವರ್ಷಗಳ ಸುದೀರ್ಘ ಕಾಮಗಾರಿ
3.14 ಕಿ.ಮೀ ಹಸಿರು ಮಾರ್ಗದ ವಿಸ್ತರಣೆ ಕಾಮಗಾರಿ 2017ರಲ್ಲಿ ಪ್ರಾರಂಭವಾಯಿತು. 2019ರಲ್ಲೇ ಈ ಕಾಮಗಾರಿ ಮುಗಿಯಬೇಕಿತ್ತಾದರೂ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದು ಕಾಮಗಾರಿಗೆ ಅಡ್ಡಿಪಡಿಸಿತ್ತು. ನೈಸ್ ರಸ್ತೆಯ ಭೂಮಿ ವಶಪಡಿಸಿಕೊಳ್ಳಲು ಸಾಕಷ್ಟು ವಿಳಂಬವಾಗಿತ್ತು, ಇದೀಗ ಎಲ್ಲಾ ಅಡೆತಡೆಗಳನ್ನು ದಾಟಿದ್ದು ಮೆಟ್ರೋ ಸಂಚಾರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.
ಪ್ರಾಯೋಗಿಕ ಸಂಚಾರದ ಬಳಿಕ ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರಿಂದ ಸುರಕ್ಷತಾ ತಪಾಸಣೆ ನಡೆಯಲಿದ್ದು, ಬಳಿಕ ಮೆಟ್ರೋ ಸಂಚಾರ ಅಧಿಕೃತವಾಗಿ ಆರಂಭಿಸಬಹುದಾಗಿದೆ.
ವಿಸ್ತೃತ ಹಸಿರು ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ ಒಟ್ಟು ಮೂರು ನಿಲ್ದಾಣಗಳು ಬರಲಿವೆ. ಈ ವಿಸ್ತೃತ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ತುಮಕೂರು ರಸ್ತೆ, ಅಂಚೆಪಾಳ್ಯ, ಜಿಂದಾಲ್ ನಗರ ಪ್ರದೇಶಗಳ ನಿವಾಸಿಗಳಿಗೆ ಭಾರಿ ಅನುಕೂಲವಾಗಲಿದೆ.












Click it and Unblock the Notifications