KIA Metro station: ಬೆಂಗಳೂರು ಏರ್‌ಫೋರ್ಟ್ ನಲ್ಲಿ 'ವಿಮಾನ ಮಾದರಿ'ಯ ಮೆಟ್ರೋ ನಿಲ್ದಾಣ, ವಿಶೇಷತೆಗಳು?
ಬೆಂಗಳೂರು, ಡಿಸೆಂಬರ್ 27: ಯುನೆಸ್ಕೋದಿಂದ ಅತ್ಯುತ್ತಮ ಸುಂದರ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ವಿಮಾನ ಮಾದರಿ'ಯ ನಮ್ಮ ಮೆಟ್ರೋ ನಿಲ್ದಾಣ (Namma Metro Station) ನಿರ್ಮಾಣಗೊಳ್ಳಲಿದೆ. ಈಗಾಗಲೇ ಬಿಡ್ ಆಹ್ವಾನಿಸಲಾಗಿದೆ ಎಂದು 'ವಿಕ' ವರದಿ ಮಾಡಿದೆ.
ಒಂದು ಕಡೆ ಬೆಂಗಳೂರು ನಗರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಸಂಪರ್ಕ ಕಲ್ಪಿಸುವ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ. ಇತ್ತ ಕೆಐಎ ವತಿಯಿಂದ ಬೃಹತ್ ವ್ಯಾಪ್ತಿಯಲ್ಲಿ 'ಕೆಂಪೇಗೌಡ ಏರ್‌ಪೋರ್ಟ್ ಮೆಟ್ರೋ ನಿಲ್ದಾಣ' (Bengaluru Kempegowda Airport Metro Station)ನಿರ್ಮಾಣ ಯೋಜನೆಗೆ ಆರಂಭವಾಗಲು ದಿನಗಣನೇ ಶುರುವಾಗಿದೆ.

ಹೊಸ ವಿನ್ಯಾಸದಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇ ಮೆಟ್ರೋ ನಿಲ್ದಾಣ ನಿರ್ಮಿಸುತ್ತಿದೆ. ಒಟ್ಟು 14,000 ಚದರ ಮೀಟರ್ ಪ್ರದೇಶದಲ್ಲಿ ವಿಮಾನ ಮಾದರಿಯಲ್ಲಿ ನೂತನ ವಿನ್ಯಾಸದಲ್ಲಿ ಹೊಸ ನಿಲ್ದಾಣವನ್ನು ಕೆಐಎ ನಿರ್ಮಾಣ ಮಾಡಲಿದೆ.
ಕೆಐಎ ಈಗಾಗಲೇ ಡಿಸೆಂಬರ್ ಮೂರನೇ ವಾರದಲ್ಲಿ ಟೆಂಡರ್ ಕರೆದಿತ್ತು. ಮುಂದಿನ ವರ್ಷ 2024ರ ಜನವರಿ ಆರಂಭದಲ್ಲಿ ಈ ಬಿಡ್ ತೆರೆಯಲಾಗುತ್ತದೆ. ಒಟ್ಟಾರೆಯಾಗಿ ಬಿಐಎಎಲ್ ಎರಡು ಹಂತದಲ್ಲಿ ಟೆಂಡರ್ ಪ್ರಕರಿಯೆ ನಡೆಸಲಿದೆ. ಇಲ್ಲಿ ಆಯ್ಕೆ ಆಗುವವರಿಗೆ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ದೊರೆಯಲಿದೆ.
KIA ನಮ್ಮ ಮೆಟ್ರೋ ನಿಲ್ದಾಣದ ವಿಶೇಷತೆ
ಒಟ್ಟು 14000 ಚದರ ಅಡಿ ಪ್ರದೇಶದಲ್ಲಿ ವಿಶಾಲವಾಗಿ ನಿರ್ಮಾಣಗೊಳ್ಳಿರುವ ಈ ಮೆಟ್ರೋ ನಿಲ್ದಾಣವು ಬೇರೆ ನಿಲ್ದಾಣಗಳಿಗಿಂತಲೂ ಭಿನ್ನವಾಗಿರಲಿದೆ. ಅಂಡರ್ ಗ್ರೌಂಡ್ ಸೇರಿದಂತೆ ಒಟ್ಟು ಮೂರು ಅಂತಸ್ಥನ್ನು ನಿಲ್ದಾಣ ಒಳಗೊಂಡಿರಲಿದೆ. ಪ್ರಯಾಣಿಕರ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಈ ಮೆಟ್ರೊ ನಿಲ್ದಾಣವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಕೆಐಎ ಟರ್ಮಿನಲ್ 2 ಭಾಗದ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತದೆ. ಅಲ್ಲಿಂದ ಏರ್‌ಪೋರ್ಟ್‌ಗೆ ಸಂಪರ್ಕ ಇರಲಿದೆ. ಇನ್ನೂ ಟೆಂಡರ್ ಬಳಿಕ ಮೌಲ್ಯಮಾಪನಕ್ಕೆ ಒಳಗಾಗಿ ಅದರಲ್ಲಿ ಆಯ್ಕೆ ಆಗುವ ಕಂಪನಿಗಳು ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಆಗಲಿವೆ.
ನೀಲಿ ಮಾರ್ಗದಲ್ಲಿ ಲಕ್ಷಾಂತರ ಮಂದಿ ಪ್ರಯಾಣ
ರೇಷ್ಮೆ ಬೋರ್ಡ್ ಕಡೆಯಿಂದ ಕೆ.ಆರ್.ಪುರ ಮಾರ್ಗವಾಗಿ ಹೆಬ್ಬಾಳ ಮೂಲಕ ಬೆಂಗಳೂರು ವಿಮಾನ ನಿಲ್ದಾಣವರೆಗೆ ಮೆಟ್ರೋ ಮಾರ್ಗ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಅಂದಾಜು 14,788 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಈಗಾಗಲೇ ಪಿಲ್ಲರ್ ನಿರ್ಮಾಣ, ಸಿವಿಲ್ ಕೆಲಸಗಳು ಭರದಿಂದ ಸಾಗಿವೆ.
ಬೆಂಗಳೂರಿನ ಹೃದಯ ಭಾಗದಿಮದ ಕೆಐಎಗೆ ಸಲೀಸಾಗಿ ಸಂಚಾರಕ್ಕೆ ಅವಕಾಶ ದೊರೆಯಲಿದೆ. ಅದಕ್ಕಾಗಿ ನಾವು 2026ರ ವರೆಗೂ ಕಾಯಬೇಕಿದೆ. ಲಭ್ಯಮಾಹಿತಿ ಪ್ರಕಾರ, ಕೆ.ಆರ್ ಪುರಂ ನಿಂದ ಕೆಐಎ ವರೆಗೆ 2031ರ ವೇಳೆಗೆ ಪ್ರಯಾಣಿಕರ ಸಂಖ್ಯೆ 8.35 ಲಕ್ಷದಷ್ಟು ಇರಲಿದೆ. 2041ರ ಹೊತ್ತಿಗೆ ಈ ಸಂಖ್ಯೆ 11.14 ಲಕ್ಷಕ್ಕೆ ಹೆಚ್ಚಾಗಲಿದೆ. ಹೆಬ್ಬಾಳದಿಂದ ಅತ್ಯಧಿಕ ಜನರು ಪ್ರಯಾಣ ಮಾಡುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ನಗರದ ಕೆಆರ್ ಪುರ ಮೆಟ್ರೋ ನಿಲ್ದಾಣ ಹಾಗೂ ನಾಗವಾರದಿಂದ ತಲಾ ಅಂದಾಜು 50,000 ಕ್ಕೂ ಹೆಚ್ಚು ಪ್ರಯಾಣಿಕರು ಕೆಐಎಎ ಟರ್ಮಿನಲ್ ಪ್ರದೇಶದಲ್ಲಿ ತಲೆ ಎತ್ತಲಿರುವ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಮಾಡಲಿದ್ದಾರೆ ಎಂದು ಬಿಎಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.












Click it and Unblock the Notifications