Namma metro: ಕೇವಲ 11 ತಿಂಗಳಲ್ಲಿಯೇ ಪ್ರಯಾಣಿಕರಿಂದ ₹5.38 ಕೋಟಿ ದಂಡ ವಸೂಲಿ ಮಾಡಿದ BMRCL-ಯಾವ ವಿಚಾರಕ್ಕೆ?-ಮಾಹಿತಿ
Namma Metro: ಬೆಂಗಳೂರಿನ ನಮ್ಮ ಮೆಟ್ರೋ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲೂ ಪ್ರಯಾಣಿಕರು ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿದಂತೆ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇದೀಗ ಕೇವಲ 11 ತಿಂಗಳಲ್ಲಿ 10.76 ಲಕ್ಷ ಪ್ರಯಾಣಿಕರ ಬಳಿ ಬಿಎಂಆರ್‌ಸಿಎಲ್ ಒಂದಲ್ಲ.. ಎರಡಲ್ಲ 5.38 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ ವಿಚಾರಕ್ಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಿಎಂಆರ್‌ಸಿಎಲ್ ಪ್ರಯಾಣಿಕರ ಸುರಕ್ಷತೆ, ಭದ್ರತೆಯ ದೃಷ್ಟಿಯಿಂದ ಹಲವು ನಿಯಮಗಳನ್ನು ಜಾರಿ ಮಾಡಿದೆ. ಅಷ್ಟೇ ಅಲ್ಲದೆ, ನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ದಂಡವನ್ನು ಕೂಡ ವಿದಿಸುತ್ತಿದೆ. ಇತ್ತೀಚೆಗಷ್ಟೇ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಕಾಲ ಕಳೆದ ಪ್ರಯಾಣಿಕನಿಗೆ 50 ರೂಪಾಯಿ ದಂಡ ವಿದಿಸಿತ್ತು.

ಇನ್ನು ಕಳೆದ ವರ್ಷ ಅಂದರೆ 2023ರ ಜೂನ್‌ನಿಂದ ಇಲ್ಲಿಯವರೆಗೆ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಕಾಲ ಕಳೆದಿದ್ದ 10.75 ಲಕ್ಷ ಪ್ರಯಾಣಿಕರಿಗೆ, ಒಬ್ಬರಿಗೆ 50 ರೂಪಾಯಿನಂತೆ ಒಟ್ಟು 5.38 ಕೋಟಿ ರೂಪಾಯಿ ದಂಡ ವಿದಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ದಂಡ ಸಂಗ್ರಹಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಪ್ರಯಾಣಿಕರು ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಇರಬಾರದು ಎಂಬ ನಿಯಮ ಮೊದಲಿನಿಂದಲೂ ಜಾರಿಯಿದೆ. ಒಂದು ವೇಳೆ ಪ್ರಯಾಣಿಕರು ಹೆಚ್ಚು ಸಮಯ ನಿಲ್ದಾಣದಲ್ಲಿ ಕಾಲ ಕಳೆದರೆ, ಇತರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಆದ್ದರಿಮದ ಈ ನಿಯಮವನ್ನು ಜಾರಿ ಮಾಡಲಾಗಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಪ್ರಯಾಣಿಕರು ಟಿಕೆಟ್ ಪಡೆದ ನಂತರ ಒಂದು ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷ ಇರುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಈ ನಿಯಮ ಮೀರಿ ಇದಕ್ಕೂ ಹೆಚ್ಚು ಸಮಯ ಇದ್ದರೆ, ಗರಿಷ್ಠ 50 ರೂಪಾಯಿ ಅಥವಾ ಗಂಟೆಗೆ 10 ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಒಟ್ಟಿನಲ್ಲಿ ಹೀಗೆ ಬೆಂಗಳೂರು ಜನರ ಜೀವನಾಡಿ ಸಾರಿಗೆಯಾದ ನಮ್ಮ ಮೆಟ್ರೋದಲ್ಲಿ ಒಂದಲ್ಲ ರೀತಿಯಲ್ಲಿ ಬದಲಾವಣೆಗಳು ಆಗುತ್ತಲೇ ಇವೆ.












Click it and Unblock the Notifications