ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು
ಬೆಂಗಳೂರು, ಅಕ್ಟೋಬರ್ 12 : ನಾಗವಾರ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕಿಸುವ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಬದಲಾವಣೆಯಾಗಲಿದೆ. 29.62 ಕಿ.ಮೀ. ಉದ್ದದ ಮಾರ್ಗವಿದಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮೂಲ ಯೋಜನೆಯ ಮಾರ್ಗವನ್ನು ಬದಲಾವಣೆ ಮಾಡಲು ಮುಂದಾಗಿದೆ. ಹೆಬ್ಬಾಳ ಮೂಲಕ ನೂತನ ಮಾರ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ ಎಂದು ನಕ್ಷೆ ತಯಾರಿಸಲಾಗಿದೆ.
ಉದ್ದೇಶಿತ ಮಾರ್ಗದಲ್ಲಿ ಬೆಂಗಳೂರು-ಮಂಗಳೂರು ಪೆಟ್ರೋಲಿಯಂ ಪೈಪ್ ಲೈನ್ ಹಾದು ಹೋಗಿದೆ. ಆದ್ದರಿಂದ, ಬಿಎಂಆರ್‌ಸಿಎಲ್ ಮಾರ್ಗವನ್ನು ಬದಲಾವಣೆ ಮಾಡಲಿದೆ. ನಮ್ಮ ಮೆಟ್ರೋ ಫೇಸ್2ಬಿ 29.62 ಕಿ.ಮೀ. ಯೋಜನೆಗೆ 2017ರ ಡಿಸೆಂಬರ್ 11ರಂದು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.
5,950 ಕೋಟಿ ವೆಚ್ಚದ ಈ ನಮ್ಮ ಮೆಟ್ರೋ ಮಾರ್ಗದಲ್ಲಿ 6 ನಿಲ್ದಾಣಗಳು ಬರಲಿವೆ. ಪ್ರಮುಖವಾಗಿ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸೇವೆಯನ್ನು ಈ ಮಾರ್ಗ ಒದಗಿಸುವುದರಿಂದ ಈ ಯೋಜನೆ ಬಹಳ ಮಹತ್ವ ಪಡೆದಿದೆ...

ಯೋಜನೆಯ ಮೊದಲ ಹಂತ
ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಡುವಿನ 29.62 ಕಿ.ಮೀ.ಮಾರ್ಗ ನಾಗವಾರದಲ್ಲಿ ಆರಂಭವಾಗಲಿದೆ. ಮೊದಲ ನಕ್ಷೆಯಂತೆ ನಾಗವಾರ-ಆರ್.ಕೆ.ಹೆಗ್ಡೆ ನಗರ-ಥಣಿಸಂದ್ರ ಮುಖ್ಯರಸ್ತೆ-ಜಕ್ಕೂರು ಫ್ಲೈಯಿಂಗ್ ಸ್ಕೂಲ್-ಬಳ್ಳಾರಿ ರಸ್ತೆ ಮೂಲಕ ಮಾರ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು.
ಆದರೆ, ಈಗ ಬಿಎಂಆರ್‌ಸಿಎಲ್ ಮಾರ್ಗವನ್ನು ಬದಲಾವಣೆ ಮಾಡಲಿದೆ. ಮಾರ್ಗ ಬದಲಾವಣೆಯಾದರೂ ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣದ ನಡುವಿನ ದೂರ ಹೆಚ್ಚಾಗುವುದಿಲ್ಲ.

ಮಾರ್ಗ ಬದಲಾವಣೆ ಹೇಗೆ?
ಬಿಎಂಆರ್‌ಸಿಎಲ್ ಹೇಳುವ ಪ್ರಕಾರ ಮಾರ್ಗ ಬದಲಾವಣೆ ಕೆಲವು ಭಾಗಗಳಲ್ಲಿ ಮಾತ್ರ ಆಗಲಿದೆ. ಹೊಸ ಮಾರ್ಗದ ನಕ್ಷೆ ಪ್ರಕಾರ ನಾಗವಾರ-ರಿಂಗ್‌ರೋಡ್-ಹೆಬ್ಬಾಳ-ಬಳ್ಳಾರಿ ಮುಖ್ಯ ರಸ್ತೆ-ಜಕ್ಕೂರು ಫ್ಲೈಯಿಂಗ್ ಸ್ಟೇಷನ್ ತನಕ ಮಾರ್ಗ ಬದಲಾಗಲಿದ್ದು, ಅಲ್ಲಿಂದ ಹಳೇ ನಕ್ಷೆಯ ಮೂಲಕವೇ ಮೆಟ್ರೋ ಮಾರ್ಗ ಸಾಗಲಿದೆ.

ಒಟ್ಟು ಎಷ್ಟು ನಿಲ್ದಾಣಗಳು
ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಆರು ನಮ್ಮ ಮೆಟ್ರೋ ನಿಲ್ದಾಣಗಳು ಬರಲಿವೆ. ಅವುಗಳಲ್ಲಿ ಎರಡು ನಿಲ್ದಾಣಗಳು ವಿಮಾನ ನಿಲ್ದಾಣದ ಆವರಣದಲ್ಲಿ ಇರಲಿವೆ. ಆರ್.ಕೆ.ಹೆಗಡೆ ನಗರ, ಜಕ್ಕೂರು, ಯಲಹಂಕ (ಕೋಗಿಲು ಕ್ರಾಸ್), ಚಿಕ್ಕಜಾಲ ನಿಲ್ದಾಣಗಳನ್ನು ಮಾರ್ಗ ಹೊಂದಿದೆ.

ಮಾರ್ಗ ಬದಲಾವಣೆ ಏಕೆ?
ಬಿಎಂಆರ್‌ಸಿಎಲ್ ಮೊದಲು ತಯಾರಿಸಿದ ನಕ್ಷೆ ಪ್ರಕಾರ ಮಾರ್ಗ ನಿರ್ಮಿಸಲು ಅಡೆ-ತಡೆಗಳಿವೆ. ಬೆಂಗಳೂರು-ಮಂಗಳೂರು ಪೆಟ್ರೋಲಿಯಂ ಪೈಪ್ ಲೈನ್ ಹೆಗಡೆ ನಗರದ ಮೂಲಕ ಹಾದು ಹೋಗಲಿದೆ. ಆದ್ದರಿಂದ, ಅನಿವಾರ್ಯವಾಗಿ ಮಾರ್ಗ ಬದಲಾವಣೆ ಮಾಡಬೇಕಾಗಿದೆ. ಪೈಪ್ ಲೈನ್ 9 ಮೀಟರ್ ಅಕ್ಕಪಕ್ಕ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವುದನ್ನ ನಿಷೇಧಿಸಲಾಗಿದೆ.
ಈ ಮಾರ್ಗದಲ್ಲಿ ದೊಡ್ಡ ನೀರಿನ ಪೈಪ್ ಲೈನ್ ಸಹ ಇತ್ತು. ಅದನ್ನು ಸ್ಥಳಾಂತರ ಮಾಡಲು ಚಿಂತಿಸಲಾಗಿತ್ತು. ಆದರೆ, ಪೆಟ್ರೋಲಿಯಂ ಪೈಪ್ ಲೈನ್ ಸ್ಥಳಾಂತರ ಸಾಧ್ಯವಿರಲಿಲ್ಲ. ಆದ್ದರಿಂದ, ಮಾರ್ಗ ಬದಲಾವಣೆ ಮಾಡಲಾಗಿದೆ.












Click it and Unblock the Notifications