ಮೈಸೂರಿನಲ್ಲಿ ‘ದಮ್’ ಹೊಡೆದ್ರೆ ದಂಡ ಖಚಿತ!

ಮೈಸೂರು ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ. ಇದರ ಅರಿವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಧಮ್ ಎಳೆಯುತ್ತಿದ್ದ ಜನರಿಂದ ದಂಡ ವಸೂಲಿ ಮಾಡಿದ್ದಾರೆ.
ಗುರುವಾರ ಮೈಸೂರು ಪೊಲೀಸರು ನಗರದ ನಾನಾ ಬಡಾವಣೆಗಳಲ್ಲಿ ಏಕ ಕಾಲದಲ್ಲಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ 357 ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಧಮ್ ಎಳೆಯುತ್ತಿದ್ದವರಿಂದ ಒಟ್ಟು 64,200ರೂ. ದಂಡ ವಸೂಲಿ ಮಾಡಿದ್ದಾರೆ.
ಕುವೆಂಪುನಗರ, ಸರಸ್ವತಿಪುರಂ, ಚಾಮರಾಜ ಜೋಡಿ ರಸ್ತೆ, ವಿದ್ಯಾರಣ್ಯಪುರಂ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ವಿ.ವಿ.ಪುರಂ, ಒಂಟಿಕೊಪ್ಪಲು, ಜಯನಗರ ಸೇರಿದಂತೆ ನಾನಾ ಕಡೆಗಳಲ್ಲಿ ಈ ಕಾರ್ಯಾಚರಣೆ ನಡೆಯಿತು. (ಮೈಸೂರಲ್ಲಿ ಹೊರಗೆಲ್ಲೂ 'ದಮ್' ಹೊಡೆಯಂಗಿಲ್ಲ!)
ಕಾರ್ಯಾಚರಣೆ ವೇಳೆ ಧಮ್ ಹೊಡೆಯುತ್ತಿದ್ದ 357 ಮಂದಿ ಸಿಕ್ಕಿ ಬಿದ್ದಿದ್ದಾರೆ. ದಂಡ ಕಟ್ಟಲು ವಿಫಲವಾದ ಇಬ್ಬರಿಗೆ ನ್ಯಾಯಾಲಯದ ನೋಟಿಸ್ ನೀಡಿ, ದಂಡ ಕಟ್ಟಲು ಆದೇಶಿಸಲಾಗಿದೆ. ಕಾಯ್ದಯನ್ನು ಜಾರಿಗೆ ತಂದ ಕೆಲವು ದಿನಗಳಲ್ಲಿಯೇ ಪೊಲಿಸರು ಭರ್ಜರಿ ದಂಡಪ್ರಯೋಗ ಮಾಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ವ್ಯಕ್ತಿಗಳಿಗೆ 200ರೂ. ದಂಡ ವಿಧಿಸಲಾಗುವುದು ಎಂದು ಇತ್ತೀಚೆಗೆ ಮೈಸೂರು ಪೊಲೀಸರು ಹೇಳಿದ್ದರು. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಸಿಗರೇಟ್ ಸುಡುವ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ.
ಕಾಯ್ದೆ ಏನು ಹೇಳುತ್ತದೆ : ತಂಬಾಕು ಉತ್ಪನ್ನಗಳ ಕಾಯ್ದೆ ಸೆಕ್ಷನ್-4ರ ಪ್ರಕಾರ ಸಾರ್ವಜನಿಕ ಸ್ಥಳಗಳ ಧೂಮಪಾನ ಮಾಡಿದರೆ 200ರೂ. ದಂಡ ವಿಧಿಸಲಾಗುತ್ತದೆ. ಸೆಕ್ಷನ್-5 ಪ್ರಕಾರ ಸಿಗರೇಟ್ ಅಥವಾ ಹೊಗೆಸೊಪ್ಪು ಕುರಿತು ಜಾಹಿರಾತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ.
ಸೆಕ್ಷನ್-6 ಪ್ರಕಾರ ಸಿಗರೇಟ್ ಅಥವಾ ಹೊಗೆಸೊಪ್ಪು ಉತ್ಪನ್ನಗಳನ್ನು 18 ವರ್ಷದೊಳಗಿನ ವಯಸ್ಸಿನವರಿಗೆ ಮಾರುವುದು, ಶಾಲಾ ಕಾಲೇಜುಗಳ 100 ಮೀಟರ್ ಸುತ್ತಮುತ್ತ ಸಿಗರೇಟ್, ಹೊಗೆಸೊಪ್ಪು ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ 200ರೂ.ದಂಡ ವಿಧಿಸಲು ಅವಕಾಶವಿದೆ.












Click it and Unblock the Notifications