ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಸಿನಿಮಾಗಳಿಗೆ ಪ್ರೇರಣೆ ಏನು..?
ಬೆಂಗಳೂರು, ಆಗಸ್ಟ್ 19: 'ಕುಂದಾಪ್ರ ಕನ್ನಡ ಪ್ರತಿಷ್ಠಾನ' ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 'ಕುಂದಾಪುರ ಕನ್ನಡ ಹಬ್ಬ-2024'ರ ಮೊದಲ ದಿನದ ಸಂಭ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭಾಗಿಯಾಗಿದ್ದು, ಊರ ಗೌರವ ಸನ್ಮಾನ ಸ್ವೀಕರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನನ್ನ ಸಿನಿಮಾದ ಕಥೆಗಳಿಗೆ ನನ್ನ ಊರು ಮತ್ತು ಯಕ್ಷಗಾನವೇ ಪ್ರೇರಣೆ ಎಂದು ಹೇಳಿದ್ದಾರೆ.
ಊರ ಗೌರವ ಸನ್ಮಾನ ಸ್ವೀಕರಿಸಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಿಗೆ ಹೋದರೂ, ಏನೇ ಮಾಡಿದರೂ, ಎಲ್ಲಿಂದ ಬಂದಿದ್ದೇವೆ ಎನ್ನುವುದು ಮುಖ್ಯ. ಆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ಸಿನಿಮಾದ ಎಲ್ಲ ಕಥೆಗಳಿಗೂ ಕುಂದಾಪುರದ ನನ್ನೂರು ಕೆರಾಡಿಯೇ ಕಾರಣ, ನಾನು ಬೆಳೆದ ಪರಿಸರವೇ ಪ್ರೇರಣೆ. ಅದರಲ್ಲೂ ಓದದೆಯೇ ರಾಮಾಯಣ-ಮಹಾಭಾರತದ ಸಾರ ತಿಳಿಯಲು ಯಕ್ಷಗಾನ ಕಾರಣ. 'ಕಾಂತಾರ' ಸಿನಿಮಾ ಚಿತ್ರೀಕರಣ ಕೂಡ ಕುಂದಾಪುರ ಪರಿಸರದಲ್ಲೇ ಆಗಿರುವುದು ಎಂದು ರಿಷಬ್ ಹೇಳಿದರು.

ನಮ್ಮ ಭಾಷೆ ಸಂಸ್ಕೃತಿ ಮಕ್ಕಳಿಗೆ ಗೊತ್ತಾಗಬೇಕು. ಅದಕ್ಕಾಗಿ ಇಂಥ ಹಬ್ಬಗಳು ಅತ್ಯಗತ್ಯ. ತುಳಸಿ ಕಟ್ಟೆಗಳು ಅಪರೂಪ ಆಗಿರುವ ಈ ಕಾಲದಲ್ಲಿ ಇಲ್ಲಿ ತುಳಸಿ ಕಟ್ಟೆ ಇಟ್ಟು ಉದ್ಘಾಟನೆ ನಡೆಸಿರುವುದು ಉತ್ತಮ ಸಂಗತಿ. ನಾನು ಕೂಡ ನನ್ನ ಪ್ರತಿ ಸಿನಿಮಾದಲ್ಲೂ ಅಕ್ಕಿಮುಡಿ, ನೆಟ್ಟಿ ಮುಂತಾದವನ್ನು ತೋರಿಸುತ್ತಿರುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು.
ಅರ್ಜುನ ಪ್ರಶಸ್ತಿ ಪುರಸ್ಕೃತೆಗೆ 'ಹುಟ್ಟೂರ ಗೌರವ' ಸನ್ಮಾನ
ಇನ್ನು ಕುಂದಾಪುರ ಕನ್ನಡ ಹಬ್ಬ-2024ರಲ್ಲಿ ಪದ್ಮಶ್ರೀ, ಅರ್ಜುನ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ಮಾಲತಿ ಹೊಳ್ಳ ಅವರಿಗೆ ಊರ ಗೌರವ ಸ್ವೀಕರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ದೇಶ ವಿದೇಶದಲ್ಲಿ ಎಷ್ಟೇ ಗೌರವ ಸನ್ಮಾನ ಬಂದಿದ್ದರೂ, ಹುಟ್ಟೂರ ಸನ್ಮಾನಕ್ಕೆ ಯಾವುದೂ ಸರಿಸಾಟಿ ಇಲ್ಲ. 14 ತಿಂಗಳ ಮಗುವಾಗಿದ್ದಾಗ ಪೋಲಿಯೂ ರೋಗಕ್ಕೆ ತುತ್ತಾದೆ. ಹೆತ್ತವರ ಪರಿಶ್ರಮ, ಆಶೀರ್ವಾದದ ಫಲವಾಗಿ ಸಾಧನೆ ಸಾಧ್ಯವಾಗಿದೆ. ನಾನಿಂದು ವ್ಹೀಲ್ಚಯರ್ನಲ್ಲಿ ಕೂತಿಲ್ಲ, ಇದು ನನ್ನ ರಥ, ಇದರಲ್ಲಿ ರಾಣಿಯಂತೆ ಕೂತಿದ್ದೇನೆ ಎಂದು ಭಾವಿಸುತ್ತೇನೆ.
ಕನಸು ಕಾಣಬೇಕು. ಆ ಕನಸು ಒಂದಲ್ಲ ಒಂದು ದಿನ ನನಸಾಗುತ್ತದೆ. ಕೆಲವು ಬಾರಿ ಸ್ವಲ್ಪ ತಡವಾಗುತ್ತದೆ. ಇದಕ್ಕೆ ನಾನೇ ಉದಾಹರಣೆ. ದೇವರು ನನಗೆ ಸಣ್ಣ ನೋವು ಕೊಟ್ಟರೂ, ನೂರರಷ್ಟು ಗೌರವ ಕೊಟ್ಟಿದ್ದಾನೆ. ಅಂಗವೈಕಲ್ಯ ಇದೆ ಅಂತ ಅಂಜಬೇಕಿಲ್ಲ. ಮನಸ್ಸಿದ್ದರೆ ಎಲ್ಲವನ್ನೂ ಗೆಲ್ಲಬಹುದು ಎಂದು ಪದ್ಮಶ್ರೀ, ಅರ್ಜುನ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ಮಾಲತಿ ಹೊಳ್ಳ 'ಊರ ಗೌರವ' ಸ್ವೀಕರಿಸಿ ಮಾತನಾಡಿದರು.












Click it and Unblock the Notifications