ಬೆಂಗಳೂರು: ಅವೈಜ್ಞಾನಿಕ ರೋಡ್ ಹಂಪ್ಸ್‌ನಿಂದ ವಾಹನ ಸವಾರರಿಗೆ ಶೀಘ್ರವೇ ಮುಕ್ತಿ
ಬೆಂಗಳೂರು, ಡಿ.07 : ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಕಿರಿಕಿರಿ, ಹಾರ್ನ್ ಸದ್ದುಗಳು ಒಂದೆಡೆಯಾದರೆ, ರಸ್ತೆ ಹಂಪ್ಸ್‌ಗಳ ಕಾಟ ಮತ್ತೊಂಡೆದೆ. ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರಸ್ತೆ ಹಂಪ್ಸ್‌ಗಳು ನೀಡುವ ತೊಂದರೆ ಅಷ್ಟೀಷ್ಟಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು.
ಹೌದು, ವಾಹನ ಸವಾರರು ಅಡ್ಡಾದಿಡ್ಡಿ ನಿರ್ಮಾಣವಾಗಿರುವ ಹಂಪ್ಸ್‌ಗಳಿಮದ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲು ಟ್ರಾಫಿಕ್ ಪೊಲಿಸರು ನಿರ್ಧರಿಸಿದ್ದಾರೆ. ಸರಿಯಾಗಿ ವೈಜ್ಞಾನಿಕ ವಿಧಾನದಲ್ಲಿ ಹಾಕಲಾಗಿರುವ ಹಂಪ್ಸ್‌ಗಳನ್ನು ಬಿಟ್ಟು ಉಳಿದ ಹಂಪ್ಸ್‌ಗಳ ತೆರವಿಗೆ ಮುಂದಾಗಿದ್ದಾರೆ.
ಇದಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಈಗಾಗಲೇ ನಗರದ ವಿವಿಧ ಭಾಗಗಳಲ್ಲಿ 427 ಅವೈಜ್ಞಾನಿಕ ಹಂಪ್ಸ್‌ಗಳನ್ನು ಗುರುತಿಸಿದ್ದಾರೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಅಳವಡಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದಾರೆ.

ಅವೈಜ್ಞಾನಿಕ ರೋಡ್ ಹಂಪ್ಸ್ ತೆರವಿಗೆ ಪೊಲೀಸರ ಸೂಚನೆ
ಈ ಅವೈಜ್ಞಾನಿಕ ರೋಡ್ ಹಂಪ್ಸ್‌ಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಅದೇಷ್ಟೋ ಬಾರಿ ತಮ್ಮ ಬೆನ್ನು ಮೂಳೆ ಮುರಿದುಕೊಂಡಿದ್ದಾರೆ. ಇವುಗಳು ಸರಿಯಾಗಿ ಕಾಣದೆ ವಾಹನ ಚಾಲಕರು ಇನ್ನೊಬ್ಬರಿಗೆ ಗುದ್ದಿ ಹಲವು ಗಂಭೀರ ಅಪಘಾತಗಳು ನಡೆದಿವೆ. ಹೀಗಾಗಿ ಇವುಗಳ ತೆರವಿಗೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
ಈ ಅವೈಜ್ಞಾನಿಕ ರಸ್ತೆ ತಡೆಗಳಿಂದಾಗಿ ನಗರದಲ್ಲಿ ಈಗಾಗಲೇ ಇರುವ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದೆ. ಈ ಎಲ್ಲಾ ಕಾರಣಗಳನ್ನು ಗಮನದಲ್ಲಿರಿಸಿಕೊಂಡು ಸಂಚಾರಿ ಪೋಲಿಸರು ರಸ್ತೆ ಹಂಪ್ಸ್‌ಗಳನ್ನು ತೆರುವುಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ನಗರದಲ್ಲಿ 427 ಅವೈಜ್ಞಾನಿಕ ರೋಡ್ ಹಂಪ್ಸ್
ನಗರದ ವಿವಿಧ ಭಾಗಗಳಲ್ಲಿ 427 ಅವೈಜ್ಞಾನಿಕ ವೇಗದ ತಡೆಗಳನ್ನು ಗುರುತಿಸಿರುವ ಸಂಚಾರಿ ಪೊಲೀಸರು ಅವುಗಳನ್ನು ಸರಿಯಾದ ರೀತಿಯಲ್ಲಿ ಅಳವಡಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದಾರೆ.
ಕೆಎಸ್ ಲೇಔಟ್ ನಲ್ಲಿ 61, ಜಾಲಹಳ್ಳಿಯಲ್ಲಿ 54, ಜಯನಗರದಲ್ಲಿ 42, ಯಲಹಂಕದಲ್ಲಿ 24, ರಾಜಾಜಿನಗರದಲ್ಲಿ 21 ರಸ್ತೆ ಉಬ್ಬುಗಳು ಸೇರಿದಂತೆ ಒಟ್ಟು 427 ಅವೈಜ್ಞಾನಿಕ ನಿರ್ಮಾಣಗಳು ಕಂಡು ಬಂದಿವೆ.
ಜೊತೆಗೆ ಬಿಡಬ್ಲೂಎಸ್‌ಎಸ್‌ಬಿ ಸೇರಿದಂತೆ ನಾಗರಿಕ ಏಜೆನ್ಸಿಗಳೂ ನಡೆಸುವ ಕಾಮಗಾರಿಗಳಾದ ಹೊಂಡಗಳು ಮತ್ತು ಕೆಟ್ಟ ರಸ್ತೆಗಳ ಸರಿಪಡಿಸುವಿಕೆ, ರಸ್ತೆ ಗುಂಡಿಗಳ ಸರಿಪಡಿಸುವಿಕೆಗಳಿಮದ ಉಂಟಾಗುವ ಅಡೆತಡೆಗಳನ್ನು ನಿವಾರಿಸಬೇಕು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಟ್ರಾಫಿಕ್‌ಗೆ ಈ ಹಂಪ್ಸ್‌ಗಳ ಅವಶ್ಯಕತೆಯೇನು?
ಇನ್ನು, ಬೆಂಗಳೂರಿನ ಬಹುತೇಕ ರಸ್ತೆಗಳು ಕೂಡ ಹೊಂಡಗಳಿಂದ ಕೂಡಿರುತ್ತವೆ. ಇದರ ಜೊತೆಗೆ ಹಂಪ್ಸ್ ಇಲ್ಲದೆಯೇ ವಾಹನಗಳಿಗೆ ಇವು ಸ್ಪೀಡ್ ಬ್ರೇಕರ್‌ನಂತೆ ಕಾರ್ಯ ನಿರ್ವಹಿಸುತ್ತವೆ. ಬಹುಶಃ, ಈ ರಸ್ತೆ ಉಬ್ಬುಗಳು ತಡರಾತ್ರಿಯ ಡ್ರ್ಯಾಗ್ ರೇಸರ್ ಮಾಡುವವರಿಗೆ ಮಾತ್ರ ತಡೆ ನೀಡಬಹುದು.
ಅವೈಜ್ಞಾನಿಕ ವೇಗದ ಉಬ್ಬುಗಳು ಚಾಲಕರಿಗೆ ಅಪಾಯವನ್ನುಂಟುಮಾಡುವುದಲ್ಲದೆ, ಸಂಚಾರವನ್ನು ನಿಧಾನಗೊಳಿಸುತ್ತವೆ ಎಂದು ವಿಶೇಷ ಪೊಲೀಸ್ ಕಮಿಷನರ್ (ಸಂಚಾರ) ಎಂಎ ಸಲೀಮ್ ಹೇಳಿದ್ದಾರೆ.
"ರಸ್ತೆ ಹಂಪ್ಸ್‌ಗಳ ರೀತಿಯಲ್ಲಿ, ಮೂಲಸೌಕರ್ಯಕ್ಕೆ ಸಂಬಂಧಿಸಿದ ಇತರ ಅಂಶಗಳನ್ನು ನಾವು ಗುರುತಿಸಿದ್ದೇವೆ, ಅವುಗಳು ತಮ್ಮದೇ ಆದ ರೀತಿಯಲ್ಲಿ ಟ್ರಾಫಿಕ್ ಮೇಲೆ ಪರಿಣಾಮ ಬೀರುತ್ತವೆ. ಅವುಗಳೆಂದರೆ ಗುಂಡಿಗಳು, ಪಾದಚಾರಿ ಮಾರ್ಗಗಳ ಮೇಲೆ ಸಣ್ಣ ಅಂಗಡಿಗಳು, ರಸ್ತೆಗಳಲ್ಲಿ ಸುರಿಯಲಾದ ಕಸ, ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ಮೇಲೆ ಬಿಸಾಡಲಾದ ಬಿಡಬ್ಲ್ಯೂಎಸ್ಎಸ್ಬಿಯ ಪೈಪ್ಗಳು, ರಸ್ತೆಗಳಲ್ಲಿ ಬಿಸಾಡಲಾದ ನಿರ್ಮಾಣ ಸಾಮಗ್ರಿಗಳು ಮತ್ತು ಅಸಮರ್ಪಕ ಡಾಂಬರೀಕರಣ" ಎಂದಿದ್ದಾರೆ.

ನಿರ್ಮಾಣ ಸಾಮಗ್ರಿಗಳಿಂದ ತುಂಬಿವೆ 84 ರಸ್ತೆಗಳು
ಟ್ರಾಫಿಕ್ ಪೊಲೀಸ್ ಇಲಾಖೆಯ ಅಂಕಿಅಂಶಗಳ ಪ್ರಕಾರ, ನಗರದಾದ್ಯಂತ 55 ರಸ್ತೆಗಳಲ್ಲಿ ಕಸವನ್ನು ಹಾಕಿರುವ ಸ್ಥಳಗಳನ್ನು ಗುರುತಿಸಲಾಗಿದೆ. 84 ರಸ್ತೆಗಳಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಬಿಡಲಾಗಿದೆ. 36 ಬಿಡಬ್ಲ್ಯೂಎಸ್ಎಸ್ಬಿಯ ಸಾಮಗ್ರಿಗಳಿವೆ. 186 ಸ್ಥಳಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಸಣ್ಣಪುಟ್ಟ ಅಂಗಡಿಗಳಿವೆ ಎಂದು ತಿಳಿಸಿದ್ದಾರೆ.
ಇನ್ನು, ಹೈಮಾಸ್ಟ್ ದೀಪಗಳನ್ನು ಅಳವಡಿಸಬೇಕಾದ 330 ಜಂಕ್ಷನ್‌ಗಳಿವೆ. ಹಾಗೆಯೇ, 76 ಸ್ಥಳಗಳಲ್ಲಿ ಬೀದಿದೀಪಗಳು ನಿಷ್ಕ್ರಿಯವಾಗಿವೆ. ಸರಿಯಾದ ಬೆಳಕಿಲ್ಲದೆ ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾವು ವಿವಿಧ ಸರ್ಕಾರಿ ಏಜೆನ್ಸಿಗಳ ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದೇವೆ. ಇದಲ್ಲದೆ, ಈವರೆಗೆ ವಿವಿಧ ರಸ್ತೆಗಳಲ್ಲಿ 1,342 ಗುಂಡಿಗಳನ್ನು ಗುರುತಿಸಿರುವುದಾಗಿಯೂ ಎಂದು ಎಂಎ ಸಲೀಮ್ ಹೇಳಿದ್ದಾರೆ.
(ಮಾಹಿತಿ ಕೃಪೆ- ದಿ ಟೈಮ್ಸ್ ಆಫ್ ಇಂಡಿಯಾ)












Click it and Unblock the Notifications