Deepavali 2024: ಪಟಾಕಿಯಿಂದ 40ಕ್ಕೂ ಹೆಚ್ಚು ಮಂದಿಗೆ ಕತ್ತಲು ತಂದ ಬೆಳಕಿನ ಹಬ್ಬ

ದೀಪಾವಳಿ ಹಬ್ಬದ ಹಿನ್ನೆಲೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಕಳೆದ ಎರಡು ದಿನಗಳಿಂದಲೂ ಬೆಂಗಳೂರು ಸೇರಿದಂತೆ ಹಲವು ಕಡೆ ವಿಜೃಂಭಣೆಯಿಂದ ಹಬ್ಬ ನೆರವೇರಿದೆ. ಮತ್ತೊಂದೆಡೆ ಪಟಾಕಿ ಸಿಡಿತದಿಂದ ಹಲವರು ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ. ಇವರ ಪಾಲಿಗೆ ಬೆಳಕಿನ ಹಬ್ಬವೇ ಕತ್ತಲು ತಂದಿಟ್ಟಿದೆ.

ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದರ ನಡುವೆಯೂ ಹಲವು ಪಟಾಕಿ ಸಿಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪಟಾಕಿ ಸಿಡಿತದಿಂದಾಗಿ ಬೆಂಗಳೂರಿನಲ್ಲಿ ಮಕ್ಕಳು, ಮಹಿಳೆಯರು ಸೇರಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

More Than 40 People Injured In Diwali 2024 Fireworks Burst In Bengaluru

ಇಲ್ಲಿ ಪಟಾಕಿ ಸಿಡಿಸಿದವರಿಗಿಂತ ಹೆಚ್ಚಾಗಿ ದೂರದಲ್ಲಿ ನಿಂತು ನೋಡಿದವರಿಗೆ ಹೆಚ್ಚು ಗಾಯಗಳಾಗಿವೆ. ಪಟಾಕಿಯಿಂದ ಹಲವರಿಗೆ ಕಣ್ಣಿಗೆ ಹಾನಿಯಾಗಿದ್ದು, ಮಿಂಟೋ ಆಸ್ಪತ್ರೆ, ಶಂಕರ ಆಸ್ಪತ್ರೆ, ನಾರಾಯಣ ನೇತ್ರಾಲಯ ಸೇರಿದಂತೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಹಲವರಿಗೆ ದೇಹದ ವಿವಿಧ ಭಾಗಗಳ ಮೇಲೂ ಸುಟ್ಟ ಗಾಯಗಳು ವರದಿಯಾಗಿವೆ.

ಶಂಕರ್‌ ಕಣ್ಣಿನ ಆಸ್ಪತ್ರೆಯಲ್ಲಿ ಗಂಭೀರ ಪ್ರಕರಣವೊಂದು ವರದಿಯಾಗಿದೆ. ಹುಡುಗನೊಬ್ಬ ಪಟಾಕಿ ಸಿಡಿಸುವಾಗ ಅದರ ಕಿಡಿ ತಾಗಿ, ಕಣ್ಣಿಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದಾನೆ. ಕಣ್ಣಿಗೆ ತೀವ್ರ ಗಾಯವಾಗಿರುವುದರಿಂದ ಹುಡುಗ ದೃಷ್ಟಿ ಕಳೆದುಕೊಳ್ಳುವ ಆತಂಕದಲ್ಲಿದ್ದಾನೆ. ಪಟಾಕಿ ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಂಟು ಮಕ್ಕಳಿಗೆ ಕಣ್ಣಿಗೆ ಗಂಭೀರ ಗಾಯಗಳಾಗಿವೆ. ಕೆಲವರಿಗೆ ಆಪರೇಷನ್‌ ಕೂಡ ಮಾಡಲಾಗಿದ್ದು, ಇನ್ನೂ ಕೆಲವರಿಗೆ ಶೀಘ್ರವೇ ಆಪರೇಷನ್‌ ಮಾಡಬೇಕಾಗಿದೆ ಎನ್ನಲಾಗಿದೆ.

ಮೂರು ವರ್ಷದ ಹೆಣ್ಣುಮಗುವೊಂದು ಪಟಾಕಿ ಹೊಡೆಯುತ್ತಿರುವುದನ್ನು ನೋಡುತ್ತಿದ್ದಾಗ ಕಿಡಿ ತಗುಲಿದೆ. ಇದರಿಂದ ಮಗುವಿನ ಕಣ್ಣಿಗೆ ಹಾನಿಯಾಗಿದೆ. ಮತ್ತೊಂದೆಡೆ ಅಂಟಿಸಿದ್ದ ಪಟಾಕಿ ಸಿಡಿಯಲಿಲ್ಲ ಎಂದು ನೋಡಲು ಹೋದಾಗ ಅದು ದಿಢೀರ್‌ ಬ್ಲಾಸ್ಟ್‌ ಆಗಿ ಕಣ್ಣಿಗೆ ಅಪಾಯ ತಂದುಕೊಂಡಿದ್ದಾನೆ ಎಂದು ವರದಿಯಾಗಿದೆ.

More Than 40 People Injured In Diwali 2024 Fireworks Burst In Bengaluru

ಆಂಧ್ರಪ್ರದೇಶದ ಒಬ್ಬರಿಗೆ ಪಟಾಕಿಯಿಂದ ಕಣ್ಣಿನ ಕಾರ್ನಿಯಾ ಹಾನಿಗೆ ಒಳಗಾಗಿದೆ. ಹಲವರಿಗೆ ಕಾರ್ನಿಯಾ ಸವೆತ ಉಂಟಾಗಿದೆ. ರೋಗಿಗಳ ಪೈಕಿ ಮಹಿಳೆಯರು ಹಾಗೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಮಿಂಟೋ ಆಸ್ಪತ್ರೆಯಲ್ಲಿ ಎಂಟಕ್ಕೂ ಹೆಚ್ಚು ಮಂದಿ ಕಣ್ಣಿನ ಸಮಸ್ಯೆಯಿಂದ ದಾಖಲಾಗಿದ್ದಾರೆ. ಪಟಾಕಿ ಹಚ್ಚುವ ವೇಳೆ ಬಾಲಕನ ಕಣ್ಣಿಗೆ ಗಾಯವಾಗಿದ್ದರೆ, ಪಟಾಕಿ ಕಿಡಿ ತಾಗಿ ಹಿರಿಯ ವ್ಯಕ್ತಿಗೆ ಕಣ್ಣಿನ ಕಾರ್ನಿಯಾಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

ವಿವಿಧ ಆಸ್ಪತ್ರೆಗಳಲ್ಲಿ ಪಟಾಕಿ ದುರಂತದಿಂದ ದಾಖಲಾದವರಿಗೆ ಚಿಕಿತ್ಸೆ ಮುಂದುವರಿದಿದ್ದು, ಇನ್ನೂ ಕೆಲವರಿಗೆ ಆಪರೇಷನ್‌ ಪೂರ್ಣಗೊಂಡಿದೆ. ಕೆಲವರಿಗೆ ಕಣ್ಣಿನ ದೃಷ್ಟಿ ತಾತ್ಕಾಲಿಕವಾಗಿ ಕಳೆದುಕೊಂಡಿದ್ದು, ಆಪರೇಷನ್‌ ಆದವರಿಗೆ ಇನ್ನು ಎರಡು ವಾರದವರೆಗೆ ಕಣ್ಣಿನ ದೃಷ್ಟಿ ಸರಿಹೋಗುವುದು ತಡವಾಗಲಿದೆ ಎಂದು ವರದಿಯಾಗಿದೆ.

ಇನ್ನು ಪಟಾಕಿ ಸಿಡಿಸುವಾಗ ಮಕ್ಕಳ ಬಗ್ಗೆ ಜೋಪಾನ. ಹೆಚ್ಚು ಸಿಡಿತವಾಗುವ ಪಟಾಕಿಗಳಿಂದ ಮಕ್ಕಳನ್ನು ದೂರವಿರಿಸಿ. ಸಿಡಿಸುವಾಗ ಕಣ್ಣಿಗೆ ಯಾವುದಾದರೂ ಕನ್ನಡಕಗಳನ್ನು ಧರಿಸುವುದು ಒಳ್ಳೆಯದು. ಇದರಿಂದ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಬಹುದು ಎಂದು ವೈದ್ಯರು ಕಿವಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+