ಓಲಾ ಚಾಲಕನನ್ನು ಅಪಹರಿಸಿ ಪತ್ನಿಯ ಬೆತ್ತಲೆ ವಿಡಿಯೋ ಚಿತ್ರೀಕರಿಸಿದ ಕಿರಾತಕರು
ಬೆಂಗಳೂರು, ಡಿಸೆಂಬರ್ 3: ಓಲಾ ಕ್ಯಾಬ್ ಚಾಲಕನನ್ನು ಅಪಹರಿಸಿ, ಚಾಲಕನ ಹೆಂಡತಿಯನ್ನು ಬೆತ್ತಲೆ ಮಾಡಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಅಮಾನವೀಯ ಘಟನೆಗೆ ಬೆಂಗಳೂರು ಸಾಕ್ಷಿಯಾಗಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಓಲಾ, ಊಬರ್ ಚಾಲಕರು ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿತ್ತು ಆದರೆ ಓಲಾ ಚಾಲಕನನ್ನೇ ಅಪಹರಿಸಿ ಆತನ ಪತ್ನಿಯನ್ನು ನಗ್ನಗೊಳಿಸಿ ವಿಡಿಯೋ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಬೊಮ್ಮಸಂದ್ರದಲ್ಲಿ ಪ್ರಯಾಣಿಕರಂತೆ ಕಾರು ಹತ್ತಿದ ದುಷ್ಕರ್ಮಿಗಳು ಓಲಾ ಕ್ಯಾಬ್ ಚಾಲಕನನ್ನು ಅಪಹರಿಸಿ, ಹಿಂಸೆ ನೀಡಿದ್ದಷ್ಟೇ ಅಲ್ಲದೆ, ಆತನ ಹೆಂಡತಿಗೆ ಕರೆ ಮಾಡಿ ಬೆದರಿಕೆ ಹಾಕಿ, ಆಕೆಯ ಬೆತ್ತಲೆ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಒಂದು ವಾರದ ಹಿಂದೆ ರಾತ್ರಿ ಬೊಮ್ಮಸಂದ್ರದಿಂದ ಕ್ಯಾಬ್ ಚಾಲಕನಿಗೆ ಪ್ರಯಾಣಿಕರನ್ನು ಪಿಕ್‍ಅಪ್ ಮಾಡಿಕೊಳ್ಳಲು ಕರೆ ಬಂದಿತ್ತು. ಕೂಡಲೇ ಚಾಲಕ ನಿಗದಿತ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಕ್ಯಾಬ್‍ಗಾಗಿ ಕಾಯುತ್ತಿದ್ದ 4 ಮಂದಿ, ಕಾರು ಬರುತ್ತಿದ್ದಂತೆ ಹತ್ತಿ ಕುಳಿತಿದ್ದಾರೆ. ಈ ವೇಳೆ ಚಾಲಕ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ, ಏಕಾಏಕಿ ನಾಲ್ವರು ಹಲ್ಲೆ ಮಾಡಿದ್ದಾರೆ.
ಅಲ್ಲದೇ ಬಲವಂತವಾಗಿ ಚಾಲಕನ್ನು ಹಿಂಬದಿ ಸೀಟಿಗೆ ಹಾಕಿ, ಮತ್ತೊಬ್ಬ ಕಾರು ಚಾಲನೆಗೆ ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನ ಬಳಿ ಇದ್ದ 9 ಸಾವಿರ ರೂ ತೆಗೆದುಕೊಂಡಿದ್ದಾರೆ, ಅಷ್ಟೇ ಅಲ್ಲದೆ ಬೇರೆಯವರಿಂದ ಖಾತೆಗೆ ಹಣ ಹಾಕಿಸಿಕೊಳ್ಳುವಂತೆ ತಿಳಿಸಿ ಹಣ ಬಂದ ನಂತರ ಎಟಿಎಂನಿಂದ ಡ್ರಾ ಮಾಡಿ, ಬಳಿಕ ಒಂದು ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಒಂದು ರೂಮಿನಲ್ಲಿ ಚಾಲಕನನ್ನು ಕೂಡಿಹಾಕಿದ್ದರು.
ವಿಡಿಯೋ ಕಾಲ್ ಮಾಡಿ ಪತಿ ನಿನಗೆ ಬೇಕಿದ್ದರೆ ಬೆತ್ತಲಾಗು ಎಂದು ಹೇಳಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೋಟೆಲ್ ಶೌಚಾಲಯ ಕಿಟಕಿ ಒಡೆದು ತಪ್ಪಿಸಿಕೊಂಡು ಬಂದ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರೊಳಗೆ ಆರೋಪಿಗಳು ಪರಾರಿಯಾಗಿದ್ದಾರೆ.












Click it and Unblock the Notifications