RCB ಫ್ಯಾನ್ಸ್ ಅಬ್ಬರ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಪ್ರಜ್ಞೆ ತಪ್ಪಿ ಬಿದ್ದ ಮಗು
ಐಪಿಎಲ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಈ ಸಲ ಕಪ್ ನಮ್ದೇ ಎಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಬೆಂಗಳೂರಿಗೆ ಆಗಮಿಸಿದೆ. ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ಇರುವ ಹಿನ್ನೆಲೆ ಅಭಿಮಾನಿಗಳ ಜನಸಾಗರ ಹರಿದುಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವನ್ನು ಆಚರಿಸಲು ಭಾರಿ ಜನಸಮೂಹ ಜಮಾಯಿಸುತ್ತಿದ್ದಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಮಗುವೊಂದು ಪ್ರಜ್ಞೆ ತಪ್ಪಿ ಬಿದ್ದಿದೆ. ಕೂಡಲೇ ಆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತಲೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಕ್ರೇಜ್‌ಗೆ ಕೊನೆಯಿಲ್ಲ ಎನ್ನುವಂತೆ ವರ್ತಿಸುತ್ತಿರುವ ಅಭಿಮಾನಿಗಳ ಮೇಲೆ ಪೊಲೀಸರು ಕೊನೆಗೆ ಲಾಠಿಚಾರ್ಜ್ ಮಾಡಿದ್ದಾರೆ. ವಿಧಾನಸೌಧದ ಮುಂಭಾಗದ ಕೂಡ ಆರ್‌ಸಿಬಿ ತಂಡಕ್ಕೆ ರಾಜ್ಯ ಸರ್ಕಾರದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಇರುವ ಹಿನ್ನೆಲೆ ಅಲ್ಲಿಯೂ ಲಕ್ಷಾಂತರ ಜನ ಆರ್‌ಸಿಬಿ ಫ್ಯಾನ್ಸ್ ದೌಡಾಯಿಸಿದ್ದಾರೆ. ಆರ್‌ಸಿಬಿ ಆಟಗಾರರನ್ನು ಕಣ್ತುಂಬಿಕೊಂಡು ಅವರಿಗೆ ವಿಶ್ ಮಾಡಬೇಕು ಎಂಬ ಆಸೆಯಿಂದ ಆರ್‌ಸಿಬಿ ಜೆರ್ಸಿ ತೊಟ್ಟು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಜನ ಕಿಕ್ಕಿರಿದು ಸೇರಿದ್ದಾರೆ. ತಮ್ಮ ಚಾಂಪಿಯನ್ ತಂಡವನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದಾರೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನೆರೆದಿದ್ದ ಜನಸಮೂಹವನ್ನು ನಿಯಂತ್ರಿಸಲು ಕರ್ನಾಟಕ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಐಪಿಎಲ್ 2025ರ ಐತಿಹಾಸಿಕ ಗೆಲುವಿನ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿನಂದನಾ ಸಮಾರಂಭವನ್ನು ಆಯೋಜಿಸಿರುವುದರಿಂದ ಆರ್‌ಸಿಬಿ ಫ್ಯಾನ್ಸ್ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಗೋಡೆಗಳು ಮತ್ತು ಕೌಂಪೌಂಡ್ ಹತ್ತಿ ಕೂತಿದ್ದು, ದಯವಿಟ್ಟು ಅಲ್ಲಿಂದ ಹೊರಹೋಗುವಂತೆ ಮತ್ತು ಅಂತಹ ಚಟುವಟಿಕೆಗಳಲ್ಲಿ ತೊಡಗದಂತೆ ಪೊಲೀಸರು ಮನವಿ ಮಾಡಿದ್ದಾರೆ. ತಮ್ಮ ಚಾಂಪಿಯನ್ ತಂಡವನ್ನು ನೋಡಲು ಆರ್‌ಸಿಬಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
18 ವರ್ಷಗಳ ಹೋರಾಟ ಸಣ್ಣ ವಿಷಯವಲ್ಲ: ಡಿಕೆಶಿ
ಐಪಿಎಲ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ವಿರಾಟ್ ಕೊಹ್ಲಿ ಕಳೆದ 18 ವರ್ಷಗಳಿಂದ ತಮ್ಮ ಅನುಭವ, ಪ್ರೀತಿ ಮತ್ತು ಹೃದಯವನ್ನು ಅರ್ಪಿಸಿದ್ದಾರೆ. ಅವರು ನಮ್ಮ ರಾಜ್ಯವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರನ್ನು ಅಭಿನಂದಿಸುವುದು ನಮ್ಮ ಬದ್ಧ ಕರ್ತವ್ಯ ಎಂದು ಡಿಕೆಶಿ ಹೇಳಿದ್ದಾರೆ.

ನಮ್ಮ ರಾಜ್ಯದ ಎಲ್ಲ ಯುವಕರ ಹೃತ್ಪೂರ್ವಕ ಬೆಂಬಲದೊಂದಿಗೆ ನಾನು ಇಲ್ಲಿ ನಿಂತಿದ್ದೇನೆ. ಕರ್ನಾಟಕ ಸರ್ಕಾರದ ಪರವಾಗಿ, ಅವರೆಲ್ಲರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆರ್‌ಸಿಬಿ ಅವರಿಗೆ ನಿರಂತರ ಯಶಸ್ಸನ್ನು ಹಾರೈಸುತ್ತೇವೆ. 18 ವರ್ಷಗಳ ಹೋರಾಟವು ಸಣ್ಣ ವಿಷಯವಲ್ಲ ಎಂದು ಶ್ಲಾಘಿಸಿದ್ದಾರೆ.












Click it and Unblock the Notifications