ಹೃದಯ ಕದ್ದ ಕಳ್ಳನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ !
ಬೆಂಗಳೂರು, ಡಿಸೆಂಬರ್ 09: ಮನೆ ಕಳ್ಳತನ ಮಾಡಿ ಅನುಭವಿಸಿದ ಶಿಕ್ಷೆ ಕಡಿಮೆ. ಆದರೆ, ಸ್ನೇಹಿತನ ಸಹೋದರಿನ್ನು ಪ್ರೀತಿಸಿದ ವಿಚಾರವಾಗಿ ಮಚ್ಚಿನೇಟು ತಿಂದು ಕಳ್ಳನೊಬ್ಬ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾನೆ. ಇದು ಮನೆಗಳ್ಳ ಎಸ್ಕೇಪ್ ಕಾರ್ತೀಕ್ ನ ಪ್ರೇಮ ಕಹಾನಿ.
ಇವನ ಹೆಸರು ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತೀಕ್. ಮನೆಗಳ್ಳತನ ಈತನ ವೃತ್ತಿ. ಮೂವತ್ತಕ್ಕೂ ಹೆಚ್ಚು ಮನೆಗಳ್ಳತನ ಮಾಡಿರುವ ಈ ಕಿರಾತಕ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದರೂ ತಪ್ಪಿಸಿಕೊಳ್ಳುವುದರಲ್ಲಿ ನಿಪುಣ. ಜೈಲಿನಿಂದಲೂ ತಪ್ಪಿಸಿಕೊಳ್ಳುತ್ತಾನೆ. ಹೀಗಾಗಿಯೇ ಎಸ್ಕೇಪ್ ಕಾರ್ತೀಕ್ ಎಂದೇ ಪೊಲೀಸ್ ದಾಖಲೆಗಳಲ್ಲಿ ಚಿರಪರಿಚಿತ. ಈತನನ್ನು 2006 ರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಿಂದ ತರಕಾರಿ ವಾಹನದ ತಳಭಾಗದಲ್ಲಿ ಅಡಗಿಕೊಂಡು ಎಸ್ಕೇಪ್ ಆಗಿದ್ದ. ಆಗಿನಿಂದ ಕಳ್ಳ ಕಾರ್ತೀಕ್ ಎಸ್ಕೇಪ್ ಎಂದೇ ಪರಿಚಿತನಾಗಿದ್ದ. ಹೆಣ್ಣೂರಿನ ಪ್ರಕೃತಿ ಲೇಔಟ್ ನಲ್ಲಿರುವ ಈತ ಚಿಕ್ಕಂದಿನಿಂದಲೇ ಮನೆಗಳ್ಳತನ ಮಾಡಿ ಬಂಧನಕ್ಕೆ ಒಳಗಾಗಿದ್ದ. ಸ್ನೇಹಿತನ ಸಹೋದರಿಯನ್ನು ಪ್ರೀತಿಸಿದ ಕಳ್ಳನಿಗೆ ಪ್ರಿಯತಮೆಯ ಸಹೋದರ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

Recommended Video
ಎಸ್ಕೇಪ್ ಕಾರ್ತಿಕ್ ಗೆ ರಾಜ್ ಕುಮಾರ್ ಎಂಬ ಆಪ್ತನಿದ್ದ. ಕಳೆದ ಐದು ವರ್ಷಗಳಿಂದ ಇಬ್ಬರೂ ಸ್ನೇಹಿತರಾಗಿದ್ದರು. ಆಗಾಗ ರಾಜ್ ಕುಮಾರ್ ಮನೆಗೆ ಬರುತ್ತಿದ್ದ ಕಾರ್ತೀಕ್ ರಾಜ್ ಕುಮಾರ್ ನ ಅಕ್ಕ ಏಂಜಲ್ ಪರಿಚಯವಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಏಂಜಲ್ ಸಹವಾಸ ಬಿಡುವಂತೆ ರಾಜ್ ಕುಮಾರ್ ಎಚ್ಚರಿಕೆ ನೀಡಿದ್ದ. ಇಷ್ಟಾಗಿಯೂ ಯಾರೂ ಇಲ್ಲದ ವೇಳೆ ಏಂಜಲ್ ನನ್ನು ಭೇಟಿ ಮಾಡಿ ಬರುತ್ತಿದ್ದ. ಈ ವಿಷಯ ಏಂಜಲ್ ಸಹೋದರ ರಾಜ್ ಕುಮಾರ್ ಗೆ ಗೊತ್ತಾಗಿತ್ತು. ಡಿಸೆಂಬರ್ 5 ರಂದು ರಾತ್ರಿ ಪ್ರಿಯತಮೆಯನ್ನು ಭೇಟಿ ಮಾಡಿ ಆಟೋದಲ್ಲಿ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಭೈರತಿ ಕ್ರಾಸ್ ಬಳಿ ಬರುವಾಗ ಕಾರಿನಲ್ಲಿ ಬಂದ ರಾಜ್ ಕುಮಾರ್ ಮತ್ತು ಆತನ ಸಹಚರರು ಅಡ್ಡಗಟ್ಟಿದ್ದಾರೆ. ಅಭಿಷೇಕ್, ಪ್ರಶಾಂತ್ ಇತರರು ಸೇರಿ ಮಚ್ಚಿನಿಂದ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಣ್ಣಿಗೆ ಕಾರದ ಪುಡಿ ಎರಚಿ ಚಾಕು ಮತ್ತು ಇತರೆ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿರುವ ಕಾರ್ತಿಕ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ತೀಕ್ ನೀಡಿರುವ ದೂರಿನ ಮೇರೆಗೆ ರಾಜ್ ಕುಮಾರ್ ಮತ್ತು ಪ್ರಶಾಂತ್, ಅಭಿಷೇಕ್ ಇತರರ ವಿರುದ್ಧ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೊಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.












Click it and Unblock the Notifications