ಮಾಗಡಿ ರೋಡ್-ನಾಯಂಡಹಳ್ಳಿ ಮೆಟ್ರೋ ಸಂಚಾರ ಜುಲೈಗೆ
ಬೆಂಗಳೂರು, ಜೂ. 02 : ಮಾಗಡಿ ರಸ್ತೆಯಿಂದ ನಾಯಂಡಹಳ್ಳಿಯ ತನಕ ನಮ್ಮ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ಆರಂಭಿಸಿದೆ. ಪರೀಕ್ಷಾರ್ಥ ಸಂಚಾರ ವೀಕ್ಷಿಸುವಂತೆ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
ಮಾರ್ಚ್ ತಿಂಗಳಿನಿಂದ 6.4 ಕಿ.ಮೀ.ಉದ್ದದ ಮಾರ್ಗದಲ್ಲಿ ಒಂದು ರೈಲನ್ನು ಪ್ರಾಯೋಗಿಕವಾಗಿ ಓಡಿಸಲಾಗುತ್ತಿದೆ. ಸದ್ಯ ಮತ್ತೊಂದು ರೈಲನ್ನು ಈ ಮಾರ್ಗದಲ್ಲಿ ಗರಿಷ್ಠ ವೇಗದಲ್ಲಿ ಓಡಿಸಿ ಪ್ರಾಯೋಗಿಕ ಸಂಚಾರವನ್ನು ನಡೆಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. [ಮೆಟ್ರೋ 2ನೇ ಹಂತದ ಕಾಮಗಾರಿ ವಿವರಗಳು]

ಮಾಗಡಿ ರಸ್ತೆ-ನಾಯಂಡನಹಳ್ಳಿ ಮಾರ್ಗದಲ್ಲಿ ಮಾಗಡಿ ರಸ್ತೆ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ, ಸೇರಿದಂತೆ ಆರು ನಿಲ್ದಾಣಗಳಿವೆ. ಮಾರ್ಗದಲ್ಲಿನ ನಿಲ್ದಾಣಗಳ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಈ ಕಟ್ಟಡಗಳ ಅಗ್ನಿ ಶಾಮಕ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕಗಳ ಬಗ್ಗೆ ವಿವಿಧ ಇಲಾಖೆಗಳಿಂದ ಅನುಮತಿ ಪತ್ರ ಪಡೆಯಬೇಕಾಗಿದೆ. [ಎಂಜಿ ರಸ್ತೆಯಿಂದ ಮಾಗಡಿ ರಸ್ತೆ ತಲುಪಿತು ಮೆಟ್ರೋ]
ಜೂನ್ 20ರೊಳಗೆ ರೈಲ್ವೆ ಇಲಾಖೆಗೆ ಪತ್ರ ಬರೆದು ಪರೀಕ್ಷಾರ್ಥ ಸಂಚಾರ ವೀಕ್ಷಿಸುವಂತೆ ಬಿಎಂಆರ್ ಸಿಎಲ್ ಮನವಿ ಮಾಡಲಿದೆ. ಜುಲೈ ಅಂತ್ಯದ ವೇಳೆಗೆ ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. [ನಾಗಸಂದ್ರ-ಪೀಣ್ಯ ಇಂಡಸ್ಟ್ರಿ ದರ ಪಟ್ಟಿ]
ಈ ಮಾರ್ಗ ನಮ್ಮ ಮೆಟ್ರೋ ಮೊದಲನೇ ಹಂತದ ಯೋಜನೆಗೆ ಸೇರಿದೆ. ಎಂ.ಜಿ.ರಸ್ತೆಯಿಂದ ಹೊರಟ ರೈಲು ಸುರಂಗ ಮಾರ್ಗದ ಮೂಲಕ ಮಾಗಡಿ ರಸ್ತೆ ತಲುಪಲಿದೆ. ಈ ಸುರಂಗ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಮಾರ್ಚ್ ತಿಂಗಳಿನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಮಾಗಡಿ ರಸ್ತೆಯಿಂದ ನಾಯಂಡಹಳ್ಳಿ ತನಕ ಫ್ಲೈ ಓವರ್ ಮೇಲೆ ರೈಲು ಸಾಗಲಿದೆ. ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯಲ್ಲಿ ಈ ಮಾರ್ಗವನ್ನು ಕೆಂಗೇರಿಯ ತನಕ ವಿಸ್ತರಣೆ ಮಾಡಲಾಗುತ್ತಿದ್ದು, ಈ ಕಾಮಗಾರಿಯೂ ಕೆಲವೇ ತಿಂಗಳಿನಲ್ಲಿ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications