ಲುಫ್ತಾನ್ಸಾದಿಂದ ಕನ್ನಡಿಗರಿಗಾಗಿ ಕನ್ನಡ ಸೇವೆ ಆರಂಭ
ಕನ್ನಡದ ಬಗ್ಗೆ ಹೇಳುವುದಾದರೆ ಇದು ಸ್ವಾಗತಾರ್ಹ ಬೆಳವಣಿಗೆ. ಕನ್ನಡಕ್ಕಾಗಿ ಆಗ್ರಹ ಹೆಚ್ಚಾಗಿ, ಪ್ರತಿಯೊಂದರಲ್ಲೂ ಕನ್ನಡ ಸೇವೆ ಬೇಕೇಬೇಕು ಎಂಬ ಒತ್ತಡ ಹೆಚ್ಚಾದಾಗ ಮಾತ್ರ ಇಂಥ ಸೇವೆಗಳು ಕನ್ನಡದಲ್ಲಿ ಸಿಗಲು ಸಾಧ್ಯ.
ಬೆಂಗಳೂರು, ಮೇ 09 : "ಹೃದಯಪೂರ್ವಕ 'ನಮಸ್ತೆ'ಯೊಂದಿಗೆ ಒಂದು ಪರ್ಫೆಕ್ಟ್ ಪ್ರಯಾಣ ಪ್ರಾರಂಭವಾಗುತ್ತೆ..." ಎಂಬ ಒಕ್ಕಣೆಯೊಂದಿಗೆ 1955ರಲ್ಲಿ ಸ್ಥಾಪಿತವಾದ ಜರ್ಮನಿ ಮೂಲದ ಲುಫ್ತಾನ್ಸಾ ಏರ್‌ಲೈನ್ಸ್ ಕಂಪನಿ ಕನ್ನಡಗರಿಗಾಗಿ ಕನ್ನಡದಲ್ಲಿ ಸೇವೆಯನ್ನು ಆರಂಭಿಸಿದೆ.
ಒಂದು ಅರ್ಥದಲ್ಲಿ ಇದು ಕನ್ನಡಿಗರ ಹೋರಾಟಕ್ಕೆ ಸಂದ ಫಲ. ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ ನಿರ್ಗಮನದ ವಿವರಗಳನ್ನು ಕನ್ನಡದಲ್ಲಿ ನೀಡಲು ಆರಂಭವಾಗಿರುವುದು ಈ ಹೋರಾಟದ ಒಂದು ಭಾಗವೆ. [ಇನ್ಮುಂದೆ ಕನ್ನಡದಲ್ಲೇ ವಿಮಾನ ಹಾರಾಟ ಮಾಹಿತಿ ಲಭ್ಯ!]
6 ಕೋಟಿ ಕನ್ನಡಿಗರನ್ನು ತಲುಪಲು ಕನ್ನಡವೇ ಮುಖ್ಯ ಎಂದು ಲುಫ್ತಾನ್ಸ ತಿಳಿದುಕೊಂಡಿರುವುದು ಒಳ್ಳೆಯ ನಡೆ. ಗೆಳೆಯರೆ, ನೀವು ಲುಫ್ತಾನ್ಸದಲ್ಲಿ ಸೇವೆ ಉಪಯೋಗಿಸುವಾಗ ಎಲ್ಲ ಸೇವೆಗಳು ಕನ್ನಡದಲ್ಲಿ ಇರದಿದ್ದರೆ ದೂರು ನೀಡುವುದನ್ನು ಮರೆಯದಿರಿ ಎಂದು 'ಅಂಗಡಿಯಲ್ಲಿ ಕನ್ನಡ ನುಡಿ' ಟ್ವಿಟ್ಟರ್ ತಾಣ ಲುಫ್ತಾನ್ಸಾವನ್ನು ಪ್ರಶಂಸಿಸುವುದರ ಜೊತೆ ಎಚ್ಚರಿಕೆಯನ್ನೂ ನೀಡಿದೆ.
ಕನ್ನಡದ ಬಗ್ಗೆ ಹೇಳುವುದಾದರೆ ಇದು ಸ್ವಾಗತಾರ್ಹ ಬೆಳವಣಿಗೆ. ಕನ್ನಡಕ್ಕಾಗಿ ಆಗ್ರಹ ಹೆಚ್ಚಾಗಿ, ಪ್ರತಿಯೊಂದರಲ್ಲೂ ಕನ್ನಡ ಸೇವೆ ಬೇಕೇಬೇಕು ಎಂಬ ಒತ್ತಡ ಹೆಚ್ಚಾದಾಗ ಮಾತ್ರ ಇಂಥ ಸೇವೆಗಳು ಕನ್ನಡದಲ್ಲಿ ಸಿಗಲು ಸಾಧ್ಯ. ರೈಲ್ವೆ ಇಲಾಖೆಯಲ್ಲಿ, ಮೆಟ್ರೋದಲ್ಲಿ, ಗ್ರಾಹಕರು ಬಳಸುವ ಎಲ್ಲಾ ಉತ್ಪನ್ನಗಳಲ್ಲಿಯೂ ಕನ್ನಡ ರಾರಾಜಿಸುವಂತಾಗಬೇಕು. ಇತರ ವಿಮಾನಯಾನ ಕಂಪನಿಗಳೂ ಲುಫ್ತಾನ್ಸಾವನ್ನು ಅನುಸರಿಸಬೇಕು. [ಕನ್ನಡದಲ್ಲೇ ಮಾಹಿತಿ ನೀಡಿದ್ರೆ ಮಾತ್ರ ಉತ್ಪನ್ನ ಕೊಳ್ತೇನೆ!]
ಇರಲಿ, ಕನ್ನಡಗರಿಗಾಗಿಯೇ ಕನ್ನಡ ಸೇವೆಯನ್ನು ಆರಂಭಿಸಿದ್ದಕ್ಕಾಗಿ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯನ್ನು ಕನ್ನಡಿಗರೆಲ್ಲರೂ ಅಭಿನಂದಿಸಲೇಬೇಕು. ಇದು ಕೇವಲ ಆರಂಭವಾಗಿರುವುದರಿಂದ, ಅಲ್ಲಲ್ಲಿ ಕಾಗುಣಿತ ದೋಷಗಳು ಕಂಡುಬರುತ್ತಿದ್ದರೂ, ಇದನ್ನೇ ವಿಷಯವನ್ನಾಗಿಸಿಕೊಂಡು ಲುಫ್ತಾನ್ಸಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳುವುದು ಬೇಡ. ಅವರಿಗೂ ಸಮಯಾವಕಾಶ ನೀಡೋಣ.
ವೆಬ್ ತಾಣದಲ್ಲಿ ಲುಫ್ತಾನ್ಸಾ ಕೆಲವೊಂದು ಆಸಕ್ತಿದಾಯಕ ಮತ್ತು ಆಕರ್ಷಕವಾದ ಸ್ಲೋಗನ್ ಗಳನ್ನು, ಸಂದೇಶಗಳನ್ನು, ಮಾಹಿತಿಯನ್ನು ಹಾಕಿದ್ದಾರೆ. 'ಅಮ್ಮನ ದಿನ' (ಮೇ 14) ಹತ್ತಿರ ಬರುತ್ತಿರುವುದರಿಂದ, ಹಲವಾರು ಸಂದೇಶಗಳು ಅಮ್ಮನ ಕುರಿತೇ ಇವೆ. ಅವೇನೆಂದು ನೋಡೋಣ. [ಮಕ್ಕಳ ಕಳೆದುಕೊಂಡ ಅಮ್ಮಂದಿರ ಗೋಳು ಕೇಳೋರ್ಯಾರು?]

ಅಮ್ಮನಿಗೆ ಅತ್ಯುತ್ತಮ ಯಾವುದೆಂದು ಗೊತ್ತಿದೆ
ಮೋಮ್‌ಗೆ ಬೆಸ್ಟ್ ಯಾವುದೆಂದು ಗೊತ್ತಿದೆ. ಆದ್ದರಿಂದಲೇ, ಆಕೆಯ ಅನುಮತಿ ಪಡೆಯಲು ನಾವು ಸ್ವಲ್ಪವೂ ತಡ ಮಾಡುವುದಿಲ್ಲ. ವಿಮಾನ ಹಾರಾಟ ಅನುಭವವನ್ನು ನೀವು ಯೋಚಿಸಿದ್ದಕ್ಕಿಂತಲೂ ಹೆಚ್ಚು ಇಂಡಿಯನ್ ಆಗಿ ಮಾಡುತ್ತೇವೆ - ಪ್ರತಿಯೊಬ್ಬ ಪ್ರಯಾಣಿಕನಿಗೂ ಮನೆಯ ಹೊರಗಡೆ ಮನೆಯ ಅನುಭವ ನೀಡುತ್ತೇವೆ.

ಪರಿಚಾರಕಿಯರೂ ಕನ್ನಡ ಮಾತಾಡುವಂತಿದ್ದರೆ...
ಭಾರತೀಯರಿಗಿಂತ ಹೆಚ್ಚು ಪ್ರೇರಣೆ ನೀಡುವವರು ಬೇರೆ ಇಲ್ಲ. ಆದ್ದರಿಂದಲೇ, ನಾವು ನಮ್ಮ 200 ಭಾರತೀಯ ಫ್ಲೈಟ್ ಅಟೆಂಡೆಂಟ್ ಗಳ ಬಗ್ಗೆ ತುಂಬಾ ಅಭಾಮಾನ ಹೊಂದಿದ್ದೇವೆ. ಇವರುಗಳು ಹಿಂದಿ ಭಾಷೆಯಲ್ಲಿ ಪರಿಣಿತರಾಗಿದ್ದಾರೆ (ಕನ್ನಡ ಭಾಷೆಯನ್ನೂ ಮಾತಾಡುವಂತಾಗಲಿ) ಹಾಗೂ ಭಾಷೆ ಮತ್ತು ಅತಿಥಿ ಸತ್ಕಾರಗಳಲ್ಲಿ ಸ್ಥಳೀಯರಾಗಿದ್ದಾರೆ.

ಭಾರತೀಯ ಊಟದ ಸೊಗಸು
ನಿಮ್ಮ ಸೀಟ್ ನಲ್ಲಿ ಕುಳಿತುಕೊಳ್ಳಿ ಮತ್ತು ಮನೆ ಆನಂದ ಪಡೆಯಿರಿ: ಬಿಸಿ ಬಿಸಿ ಚಹಾ ಮತ್ತು ಅತ್ಯಂತ ರುಚಿಕರವಾದ ಭಾರತೀಯ ಊಟದ ಜೊತೆಗೆ. ಎಕ್ಸ್ ಪರ್ಟ್ ಮಾಮ್ ಕೂಡಾ ಇದನ್ನು ಆನಂದಿಸುತ್ತಾರೆ.

ಮನರಂಜನೆಗಾಗಿ ಬಾಲಿವುಡ್ ಬ್ಲಾಕ್ ಬಸ್ಟರ್ ಸಿನೆಮಾ
ಉತ್ತಮ ಅತಿಥೇಯರು ತಮ್ಮ ಅತಿಥಿಗಳಿಗೆ ಸೂಕ್ತ ಮನರಂಜನೆ ನೀಡುತ್ತಾರೆ. ನಮ್ಮ ಬಾಲಿವುಡ್ ಬ್ಲಾಕ್ ಬಸ್ಟರ್ ಗಳು (ಕನ್ನಡ ಸಿನೆಮಾನೂ ಹಾಕಿ ಸ್ವಾಮೀ), ಭಾರತೀಯ ರೇಡಿಯೋ ಚ್ಯಾನೆಲ್ ಗಳು ಹಾಗೂ ಹಿಂದಿ ಸಮಾಚಾರ ಪತ್ರಿಕೆಗಳು ನಿಮ್ಮ ಪ್ರಯಾಣ ಸಮಯ ಆನಂದಕರವಾಗಿ ಸಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.












Click it and Unblock the Notifications