Bengaluru: ಜೂನ್ 04 ರಂದು ಮತ ಎಣಿಕೆ, ಬಿಬಿಎಂಪಿ ಸೂಚನೆಗಳು, ಕೇಂದ್ರಗಳ ಪಟ್ಟಿ
ಬೆಂಗಳೂರು, ಜೂನ್ 02: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜೂನ್ 4 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಮಾಹಿತಿ ನೀಡಿದರು.
ಭಾನುವಾರ ಲೋಕಸಭಾ ಚುನಾವಣೆಯ ಸಂಬಂಧ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ನಗರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ 3 ಲೋಕಸಭಾ ಕ್ಷೇತ್ರಗಳು ಬರಲಿವೆ. ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 3 ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬರಲಿದೆ ಎಂದು ಹೇಳಿದರು.

ಮತ ಎಣಿಕೆಗಾಗಿ ಸಿಬ್ಬಂದಿಯು 3 ವಿಧದಲ್ಲಿ ಇರಲಿದ್ದಾರೆ. ಪ್ರತಿ ಟೇಬಲ್ ಗೆ ಮೈಕ್ರೋ ಅಬ್ಸರ್ ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗುತ್ತದೆ. ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್ ಗಳನ್ನು ಬೆಳಗ್ಗೆ 6 ಗಂಟೆಗೆ ಬರಲು ತಿಳಿಸಲಾಗಿದೆ.
ಯಾರಿಗೆ ಗುರುತಿನ ಚೀಟಿ ನೀಡಲಾಗಿದೆ ಅಂತಹವರಿಗೆ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಪ್ರವೇಶ ಇರಲಿದೆ. ಒಂದು ಕೊಠಡಿಯಲ್ಲಿ 14 ಟೇಬಲ್ ಗಳನ್ನು ಹಾಕಲು ಅವಕಾಶವಿದೆ. ದೊಡ್ಡ ಕೊಠಡಿಗಳಿದ್ದರೆ ಹೆಚ್ಚಿನ ಟೇಬಲ್ ಗಳನ್ನು ಹಾಕಲಾಗುತ್ತದೆ.

ಅಂಚೆ ಮತದಾನವು ಈ ಬಾರಿ ಹೆಚ್ಚಾಗಿ ನಡೆದಿರುವುದರಿಂದ ಎಣಿಕೆಯು ನಿರಂತರವಾಗಿ ನಡೆಯುತ್ತಿರುತ್ತದೆ. ಕೊನೆಯ ರೌಂಡ್ ಮುಂಚಿತವಾಗಿ ಅಂಚೆ ಮತದಾನದ ಎಣಿಕೆಯನ್ನು ಮುಗಿಸಲಾಗುತ್ತದೆ. ಈ ಬಾರಿ ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅದರ ಜೊತೆಗೆ ಚುನಾವಣಾಧಿಕಾರಿ ನಿರ್ದೇಶನದ ಮೇರೆಗೆ ಇನ್ನಿತರ ಕಡೆ ಸಿಸಿ ಕ್ಯಾಮೆರಾ ಹಾಗೂ ವೀಡಿಯೋಗ್ರಾಫಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಮತ ಎಣಿಕೆ ಕೇಂದ್ರದಲ್ಲಿ ವೀಕ್ಷಕರಿಗಾಗಿ ಒಂದು ಕೊಠಡಿ, ಚುನಾವಣಾಧಿಕಾರಿಗಾಗಿ ಒಂದು ಕೊಠಡಿ ಹಾಗೂ ಮಾಧ್ಯಮದವರಿಗಾಗಿ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದಲ್ಲಿ ಮಾತ್ರ ಮೊಬೈಲ್ ಬಳಸಲು ಅವಕಾಶ ಇರುತ್ತದೆ. ಹೊರಗಡೆ ಮೊಬೈಲ್ ಬಳಸಲು ಅವಕಾಶ ಇಲ್ಲ ಎಂದರು.
ಮತ ಎಣಿಕೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಿಬ್ಬಂದಿ ಎಣಿಕೆ ಕೇಂದ್ರದಲ್ಲಿ ಮೊಬೈಲ್/ಬ್ಯಾಗ್ ತರುವ ಹಾಗಿಲ್ಲ. ಏಜೆಂಟ್ ಗಳು ಕೂಡ ತರಲು ಅವಕಾಶವಿಲ್ಲ. ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಿರುವ ಸಿಬ್ಬಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬರುವವರೆಗೆ ಯಾವ ಟೇಬಲ್ ನಲ್ಲಿ ಕೂರಲಿದ್ದೇವೆ ಎಂಬುದು ತಿಳಿದಿರುವುದಿಲ್ಲ.
ಜೂನ್ 4ರ ಬೆಳಗ್ಗೆ ಬಂದ ಬಳಿಕ ತಿಳಿಯಲಿದೆ. ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುತ್ತದೆ. 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್‌ಗಳ ಎಣಿಕೆ ಪ್ರಾರಂಭವಾದ ಬಳಿಕ ಇವಿಎಂ ಎಣಿಕೆ ಆರಂಭವಾಗಲಿದೆ ಎಂದು ತಿಳಿಸಿದರು.
ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ವಿವರ
1. ಬೆಂಗಳೂರು ಕೇಂದ್ರ: ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು.
ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8
ಮತಗಟ್ಟೆಗಳ ಸಂಖ್ಯೆ: 2125
ಮತ ಎಣಿಕೆ ಕೊಠಡಿಗಳ ಸಂಖ್ಯೆ: 10
ಒಟ್ಟು ಟೇಬಲ್ ಗಳ ಸಂಖ್ಯೆ: 135
ಒಟ್ಟು ಸಿಬ್ಬಂದಿಯ ಸಂಖ್ಯೆ: 416
2. ಬೆಂಗಳೂರು ಉತ್ತರ: ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು.
ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8
ಮತಗಟ್ಟೆಗಳ ಸಂಖ್ಯೆ: 2911
ಮತ ಎಣಿಕೆ ಕೊಠಡಿಗಳ ಸಂಖ್ಯೆ: 19
ಒಟ್ಟು ಟೇಬಲ್ ಗಳ ಸಂಖ್ಯೆ: 130
ಒಟ್ಟು ಸಿಬ್ಬಂದಿಯ ಸಂಖ್ಯೆ: 390
3. ಬೆಂಗಳೂರು ದಕ್ಷಿಣ: ಎಸ್.ಎಸ್.ಎಂ.ಆರ್.ವಿ ಕಾಲೇಜು, 9ನೇ ಬ್ಲಾಕ್, ಜಯನಗರ, ಬೆಂಗಳೂರು.
ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8
ಮತಗಟ್ಟೆಗಳ ಸಂಖ್ಯೆ: 2120
ಮತ ಎಣಿಕೆ ಕೊಠಡಿಗಳ ಸಂಖ್ಯೆ: 9
ಒಟ್ಟು ಟೇಬಲ್ ಗಳ ಸಂಖ್ಯೆ: 118
ಒಟ್ಟು ಸಿಬ್ಬಂದಿಯ ಸಂಖ್ಯೆ: 354
ಪರೀಕ್ಷಣೆ ಚುನಾವಣಾಧಿಕಾರಿಗಳಾದ ಡಾ. ಕೆ.ಹರೀಶ್ ಕುಮಾರ್, ದಯಾನಂದ್, ವಿನೋತ್ ಪ್ರಿಯಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications