ಮಹಿಳೆಯ ಕಿವಿಯೊಳಗೆ ಹೊಕ್ಕಿದ್ದ ಜೇಡ ಹೊರತೆಗೆದ ಬೆಂಗಳೂರು ವೈದ್ಯರು
ಬೆಂಗಳೂರು, ಜೂನ್ 13: ಬೆಂಗಳೂರಿನ ಹೆಬ್ಬಾಳದ ಈ ಮಹಿಳೆಯ ಸುದ್ದಿಯನ್ನು ಓದಿದರೆ ಮೈ ಮರೆಯುವಂಥ ನಿದ್ದೆ ಮಾಡಬಾರದು ಎಂದು ಅನಿಸದಿದ್ದರೆ ಹೇಳಿ. ಆಕೆ ಹೆಸರು ಲಕ್ಷ್ಮಿ. ತಮ್ಮ ಮನೆಯ ವರಾಂಡದಲ್ಲಿ ಒಂದೊಳ್ಳೆ ನಿದ್ದೆ ಮಾಡಿದ್ದಾರೆ. ಎಚ್ಚರವಾದ ಕೂಡಲೇ ಬಲಗಿವಿಯಲ್ಲಿ ಎಂಥದೋ ಕಿರಿಕಿರಿ ಶುರುವಾಗಿದೆ.
ತಲೆನೋವು, ಕಿವಿಯಲ್ಲಿ ಏನೋ ಓಡಾಡಿದ ಅನುಭವ. ಅದೇನೋ ನೋಡೇ ಬಿಡೋಣ ಅಂತ ಕಿವಿಯೊಳಗೆ ಬೆರಳು, ಕಡ್ಡಿ ಅಂಥದ್ದನ್ನೂ ಹಾಕಿ ನೋಡಿದ್ದಾರೆ ಆದರೆ ಏನೂ ಗೊತ್ತಾಗಿಲ್ಲ. ಇನ್ನು ತಡೆಯೋದಿಕ್ಕೆ ಆಗಲ್ಲ ಅನಿಸಿದಾಗ ಮನೆಗೆ ಹತ್ತಿರ ಇರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ತೆರಳಿ, ಇಎನ್ ಟಿ (ಕಿವಿ, ಮೂಗು, ಗಂಟಲು) ತಜ್ಞರ ಬಳಿ ಹೇಳಿಕೊಂಡಿದ್ದಾರೆ.

ಪರಿಶೀಲಿಸಿದಾಗ ಕಿವಿಯೊಳಗೆ ಜೀವಂತ ಜೇಡ ಇರುವುದು ಪತ್ತೆಯಾಗಿದೆ. ಜೇಡದ ಕಣ್ಣು, ದೇಹದ ವಿನ್ಯಾಸ ಹಾಗೂ ಕಿವಿಯೊಳಗೆ ಅದು ಇದ್ದ ರೀತಿ ಕಂಡು ವೈದ್ಯರೇ ಆಶ್ಚರ್ಯ ಪಟ್ಟಿದ್ದಾರೆ. ಒಂದಿಷ್ಟು ಕಷ್ಟಪಟ್ಟೇ ಆ ಜೇಡವನ್ನು ಹೊರ ತೆಗೆದಿದ್ದಾರೆ. ಇದು ಸಂದರ್ಭ ಅನ್ನೋ ಕಾರಣಕ್ಕೆ ನಿಮಗೆ ಇನ್ನೊಂದು ಉದಾಹರಣೆ ಹೇಳಬೇಕಾಗಿದೆ.
ಕೇರಳದ ಎರ್ನಾಕುಲಂ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಕಣ್ಣೊಳಗಿನಿಂದ ಎಪ್ಪತ್ತು ಮಿಲಿಮೀಟರ್ ಹುಳವೊಂದನ್ನು ಇತ್ತೀಚೆಗೆ ತೆಗೆದಿದ್ದರು.












Click it and Unblock the Notifications