Breaking: ಬೆಂಗಳೂರಲ್ಲಿ ಮದ್ಯ ಮಾರಾಟ ಬ್ಯಾನ್: ಹೈಕೋರ್ಟ್ ಇಂದು ಅರ್ಜಿ ವಿಚಾರಣೆ: ತೀರ್ಪು ನಿರೀಕ್ಷೆಯಲ್ಲಿ ಹೋಟೆಲ್ ಸಂಘ
ಬೆಂಗಳೂರು, ಫೆಬ್ರವರಿ 14: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಸಂಬಂಧ ನಾಲ್ಕು ದಿನ ಮದ್ಯ ಮಾರಾಟ ಮಾಡಲಾಗಿದೆ. ಇದರ ವಿರುದ್ಧ ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್‌ನಲ್ಲಿ ಧಾವೆ ಹೂಡಿದ್ದು, ಇಂದು ಗುರುವಾರ ಫೆಬ್ರವರಿ 14ರಂದು ತೀರ್ಪು ಬರುವ ಸಾಧ್ಯತೆ ಇದೆ ಎಂದು ಸಂಘ ತಿಳಿಸಿದೆ.
ಉಪಚುನಾವಣೆ ಪ್ರಯುಕ್ತ ಚುನಾವಣಾಧಿಕಾರಿಗಳು ಫೆಬ್ರವರಿ 14 ರಿಂದ 16 ಹಾಗೂ ಫೆ.20ರಂದು ಒಟ್ಟು ನಾಲ್ಕು ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಈ ನಿರ್ಧಾರ ಪುನರ್ ಪರಿಶೀಲಿಸುವಂತೆ ಬೆಂಗಳೂರು ಹೋಟೆಲುಗಳ ಮಾಲೀಕರ ಸಂಘ ಮನವಿ ಮಾಡಿತ್ತು. ಇದಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದೆ.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೇ 16ರಂದು ನಡೆಯಲಿರುವ ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ಸಂಬಂಧ ಮತದಾನಕ್ಕೂ ಮೊದಲು 48 ಗಂಟೆಗಳ ಮದ್ಯ ಮಾರಾಟ ನಿಷೇಧ ಬೇಕೆ? ಎಂದು ಕೇಳಿದೆ. ಮೇಲ್ನೋಟಕ್ಕೆ ಇದು ಅಷ್ಟೋಂದು ಸೂಕ್ತವಲ್ಲ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಇಂದು ಮತ್ತೆ ವಿಚಾರಣೆ
ವಾದ ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮೂಂದೂಡಿತು. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಬುಧವಾರ ಹೆಚ್ಚು ವಹಿವಾಟು ಆಗಲಿದೆ. ಈ ನಿಷೇಧದಿಂದ ಅಬಕಾರಿ ಇಲಾಖೆಗೆ ಮಾತ್ರವಲ್ಲದೇ ಹೋಟೆಲ್‌ಗಳಿಗೂ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಲಿದೆ ಎಂದು ಹೋಟೆಲ್ ಸಂಘ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿತ್ತು.
ಮದ್ಯಪಾನ ನಿಷೇಧ ಜಾರಿಗೊಳಿಸಿ ಪೋಲಿಸ್ ಇಲಾಖೆಯವರು ಆದೇಶ ಹೊರಡಿಸಿರುವುದು ಅವೈಜ್ಞಾನಿಕ. ಆದರೂ ಇದನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಲು ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಗೆ ಪುರಸ್ಕಾರ ಸಿಗದ ಕಾರಣ ನಾವು ಉಚ್ಚ ನ್ಯಾಯಾಲಯದಲ್ಲಿ ದಾವೆ ಹಾಕಿದ್ದೇವೆ.
ನಮ್ಮ ಪರವಾಗಿ ಹಿರಿಯ ವಕೀಲರಾದ ಅರುಣ ಶ್ಯಾಮ್ ವಾದ ಮಂಡಿಸಿದ್ದರು. ಇಂದು ಬೆಳಗ್ಗೆ 10.30 ಗಂಟೆಗೆ ತೀರ್ಪು ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೋಟೆಲುಗಳ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.












Click it and Unblock the Notifications