Rain Alert: ಇಂದಿನಿಂದ ಗುಡುಗು ಸಹಿತ ಜೋರು ಮಳೆ: ಹವಾಮಾನ ಮುನ್ಸೂಚನೆ
ಬೆಂಗಳೂರು, ಮೇ 24: ಮಬ್ಬು ವಾತಾವರಣ, ಎಲ್ಲೆಡೆ ತಂಪು, ಚಳಿ...ಚಳಿ...ಅನುಭವ. ಇದು ಬೆಂಗಳೂರಿನ ಪರಿಸ್ಥಿತಿ. ಕೆಲವು ದಿನಗಳ ಹಿಂದಷ್ಟೇ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಕಳೆದ ಶನಿವಾರದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಜನರು ತತ್ತರಿಸಿದ್ದಾರೆ. ಇಂದಿನಿಂದ ಮುಂದಿನ 05 ದಿನಗಳ ಕಾಲ ಬೆಂಗಳೂರಿನಾದ್ಯಂತ ಗುಡುಗು ಸಹಿತ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಬಿಟ್ಟು ಬಿಡದೇ ಸುರಿದಿದ್ದ ಮಳೆ ಅಬ್ಬರ ತಣ್ಣಗಾಗಿದೆ. ಕೆಲವೆಡೆ ದರ್ಶನ ನೀಡುತ್ತಿರುವ ಪೂರ್ವ ಮುಂಗಾರು ಮಳೆ ಶೀಘ್ರವೇ ಮತ್ತೆ ಆರ್ಭಟಿಸುವ ಸಾಧ್ಯತೆ ಇದೆ. ತಾಪಮಾನದಲ್ಲಿ ತೀವ್ರ ರೂಪದಲ್ಲಿ ಬದಲಾವಣೆ ಆಗಿದೆ. ಈ ಬಾರಿ ಉತ್ತಮ ಮಳೆ ನಿರೀಕ್ಷೆ ಇದ್ದು, ಅದಕ್ಕೆ ಪೂರಕವಾಗಿಯೇ ಮೇ ತಿಂಗಳ ಅಂತ್ಯದ ಹೊತ್ತಿಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜೋರು ಮಳೆ ದಾಖಲಾಗಿದೆ.

ಶುಕ್ರವಾರ ಸಂಜೆ ನಗರ ಒಂದೆರಡು ಕಡೆ ಲಘು ಮಳೆ ಆಗಿದೆ. ಬೆಂಗಳೂರು ಕೆಲವೆಡೆ 01 ಮಿಲಿ ಮೀಟರ್ ಮಳೆ ಆಗಿದೆ. ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್, ಎಚ್‌ಎಎಲ್ ವಿಮಾನ ನಿಲ್ದಾಣ, ಯಲಹಂಕ, ಚೌಡೇಶ್ವರಿ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು ಸೇರಿದಂತೆ ಒಂದಷ್ಟು ಕಡೆ ಸೋನೆ ಮಳೆ ಆಗಿದೆ. ಇದರ ಹೊರತು ಎಲ್ಲಿಯೂ ಮಳೆ ಅಬ್ಬರಿಸಿಲ್ಲ. ಮೋಡ ಕವಿದ ತಂಪು ವಾತಾವರಣವೇ ಕಂಡು ಬಂದಿದೆ.
ಪ್ರತಿ ಗಂಟೆಗೆ ಗಾಳಿಯ ವೇಗ 30-40 ಕಿಲೋ ಮೀಟರ್ ಇರಲಿದ್ದು, ಕೆಲವೊಮ್ಮೆ ಇದರ ವೇಗ ಹೆಚ್ಚಾಗುವ ಸಾಧ್ಯತೆ ಇದೆ. ಗರಿಷ್ಠ 30 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ. ನಿರಂತರ ಜಿಟಿ ಜಿಟಿ ಮಳೆಗೆ ನೆಗಡಿ, ಶೀತ, ಚಳಿ ಜ್ವರ ದಂತಹ ಸಮಸ್ಯೆಗಳು, ಆರೋಗ್ಯದಲ್ಲಿ ಏರು ಪೇರಾದರೆ ಕೂಡಲೇ ಸ್ಥಳೀಯ ಆಸ್ಪತ್ರೆ ಸಂಪರ್ಕಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜೋರು ಮಳೆ
ರಾಜ್ಯದ ಕರಾವಳಿ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಜೋರು ಮಳೆ ಆಗಿದೆ. ಇಂದು ಬೆಳಗ್ಗೆವರೆಗೆ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 167 ಮಿ.ಮೀ, ಬೆಳಗಾವಿ 146 ಮಿ.ಮೀ, ಉಡುಪಿ 144ಮಿ.ಮೀ, ಚಿಕ್ಕಮಗಳೂರು 138ಮಿ.ಮೀ, ಉತ್ತರ ಕನ್ನಡ 100 ಮಿ.ಮೀ, ಕೊಡಗು 74 ಮಿಮೀ (ಬೆಳಗ್ಗೆ 03 ರವರೆಗೆ) ಹಾಗೂ ಶಿವಮೊಗ್ಗ 71 ಮಿಲಿ ಮೀಟರ್ ಮಳೆ ದಾಖಲಾಗಿದೆ. ಈ ಜಿಲ್ಲೆಗಳು ಹೊರತುಪಡಿಸಿದರೆ, ಹಾವೇರಿ, ಬೆಳಗಾವಿ, ತುಮಕೂರು, ಹಾಸನ, ಗದಗ ಭಾಗಗಳಲ್ಲಿ ತುಂತುರು ಮಳೆ ಆಗಿದೆ. ಎಲ್ಲೆಡೆ ಮಬ್ಬು ವಾತಾವರಣವೇ ದಾಖಲಾಗಿದ್ದು, ಬಿಸಿಲು ಮರೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications