Bengaluru Rains : ಬೆಂಗಳೂರು ಕೆಲವೆಡೆ ಮುಂದಿನ 3 ದಿನ ಮಳೆ, ತಾಪಮಾನದಲ್ಲಿ ತುಸು ಇಳಿಕೆ
ಹವಾಮಾನ ವೈಪರಿತ್ಯಗಳ ಪರಿಣಾಮವಾಗಿ ಸಿಲಿಕಾನ್ ಸಿಟಿಬೆಂಗಳೂರಲ್ಲಿ ಮುಂದಿನ ಮೂರು ದಿನ ಮಳೆ ಬರುವ ಮುನ್ಸೂಚನೆ ಇದೆ, ಎಲ್ಲಿ ಮಳೆ ಬರಲಿದೆ, ಉಷ್ಣಾಂಶ ದಾಖಲಾತಿ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 15: ಹವಾಮಾನ ವೈಪರಿತ್ಯಗಳ ಪರಿಣಾಮವಾಗಿ ಸಿಲಿಕಾನ್ ಸಿಟಿಬೆಂಗಳೂರಲ್ಲಿ ಮುಂದಿನ ಮೂರು ದಿನ ಮಳೆ ಬರುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕರ್ನಾಟಕ ಹಾಗೂ ಕರಾವಳಿಯ ಭಾಗದಲ್ಲಿ ಸಮುದ್ರ ಮಟ್ಟದಿಂದ 1.5 ಕಿಲೋ ಮೀಟರ್ ಎತ್ತರವರೆಗೆ ಸುಳಿಗಾಳಿ ನಿರ್ಮಾಣವಾಗಿದೆ. ಎಲ್ಲೆಡೆ ಹೆಚ್ಚಾಗಿದ್ದ ತಾಪಮಾನ ತುಸು ಕಡಿಮೆ ಆಗಿದೆ. ಈ ಅಕಾಲಿಕ ಹವಾಮಾನ ಬದಲಾವಣೆಗಳ ಪರಿಣಾಮ ಮಾರ್ಚ್ 16 ರಿಂದ ಮೂರು ಬೆಂಗಳೂರಿನಲ್ಲಿ ಒಂದೆರಡು ಕಡೆಗಳಲ್ಲಿ ಹಗುರ ಮಳೆ ನಿರೀಕ್ಷೆ ಇದೆ.

ನಗರದಲ್ಲಿ ಎರಡು ದಿನದಿಂದ ಮಧ್ಯಾಹ್ನ ಹೊರತುಪಡಿಸಿದರೆ ಉಳಿದ ಸಮಯದಲ್ಲಿ ತಪಮಾನ ದಾಖಲಾತಿಯಲ್ಲಿ ಇಳಿಕೆ ಕಂಡು ಬಂದಿದೆ. ಇದು ಮಳೆಯ ಮುನ್ಸೂಚನೆ ಎಂದು ಅಂದಾಜಿಸಲಾಗಿದೆ. ತುಂತುರು ಮಳೆ ಸುರಿಯುವ ಸಾಧ್ಯತೆ ಇದೆ.
ಬುಧವಾರ ಬೆಂಗಳೂರು ನಗರದಲ್ಲಿ ಗರಿಷ್ಠ 33.6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಗದಲ್ಲಿ ಗರಿಷ್ಠ 33.1 ಡಿಗ್ರಿ ಸೆಲ್ಸಿಯಸ್- ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ 32.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಕರ್ನಾಟಕದಲ್ಲಿ ಸಾಧಾರಣ ಮಳೆ, ಎಲ್ಲೆಲ್ಲಿ
ಕರ್ನಾಟಕದ ಬಹುತೇಕ ಕಡೆ ಬಿಸಿಲಿನ ಧಗೆ ಹೆಚ್ಚುತ್ತಿರುವ ಮಧ್ಯೆಯು ಗುಡುಗ ಸಹಿತ ಮಳೆ ಸುರಿಯಲಿದೆ. ಮಂಗಳವಾರ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಆಗುಂಬೆ ಸೇರಿದಂತೆ ಕೆಲವು ಕಡೆಗಳಲ್ಲಿ ಜೋರು ಮಳೆ ಬಿದ್ದಿದೆ. ಇದೆ ರೀತಿ ಮಾರ್ಚ್ 19ರವರೆಗೆ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕಲುಬುರಗಿಯಲ್ಲಿ ಅತ್ಯಧಿಕ ತಾಪಮಾನ ಕಂಡು ಬಂದಿದೆ. ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರಲ್ಲಿ ಗರಿಷ್ಠ 36.4 ಡಿಗ್ರಿ ಸೆಲ್ಸಿಯಸ್, ಬಳ್ಳಾರಿಯಲ್ಲಿ 36 ಡಿಗ್ರಿ ಸೆಲ್ಸಿಯಸ್, ಶಿರಾಲಿಯಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.












Click it and Unblock the Notifications