Lemon Prices: ಬಿಸಿಲಿನ ಬೇಗೆಯಲ್ಲಿ ನಿಂಬೆ ಶರಬತ್ತು ಕೂಡ ಕುಡಿಯೋ ಹಂಗಿಲ್ಲ.. ಹಾಗಿದೆ ನಿಂಬೆಹಣ್ಣಿನ ಬೆಲೆ!
ಬೆಂಗಳೂರು, ಮಾರ್ಚ್. 26: ಈ ಬೇಸಿಗೆಯಲ್ಲಿ ಹೊರ ಹೋಗಿ ಬಂದರೆ ಸಾಕು ಫುಲ್ ಸುಸ್ತು. ಮನೆಗೆ ಬಮದ ಕೂಡಲೆ ತಣ್ಣಗೆ ನಿಂಬೆ ಹಣ್ಣಿನ ಶರಬತ್ತು ಕುಡಿಯಬೇಕು ಎನಿಸಿದರೇ ಈಗ ಅದೂ ಕೂಡ ಆಗುವುದಿಲ್ಲ!. ಏಕೆಂದರೆ ದಿನ ದಿನಕ್ಕೂ ಗಗನಕ್ಕೆ ಏರುತ್ತಿದೆ ನಿಂಬೆ ಹಣ್ಣಿನ ಬೆಲೆ.
ಸದ್ಯ ಬೆಂಗಳೂರಿನಲ್ಲಿ ನಿಂಬೆ ಹಣ್ಣಿನ ಬೆಲೆ ಇವತ್ತು ಇದ್ದಂತೆ ನಾಳೆ ಇರುವುದಿಲ್ಲ. ಶರಬತ್ತು, ಲೈಮ್ ಸೋಡಾ ಕುಡಿಯುವುದು ಅಂದುಕೊಂಡಷ್ಟು ಸುಲಭವಲ್ಲ. ಒಂದು ಕೆಜಿ ಟೊಮೆಟೋ ಬೆಲೆಗೆ ಒಂದೇ ಒಂದು ನಿಂಬೆ ಹಣ್ಣು ಸಿಗುವಂತಾಗಿದೆ ಪರಿಸ್ಥಿತಿ. ಒಂದು ಕೆಜಿ ಟೊಮೆಟೋ ಬೆಲೆ 10 ರಿಂದ 12 ರೂಪಾಯಿಯಿದೆ. ಹಾಗೆ ಒಂದು ನಿಂಬೆ ಹಣ್ಣಿನ ಬೆಲೆ ಕೂಡ 12 ರೂಪಾಯಿಯಾಗಿದೆ.

ಕೆಜಿ ಟೊಮೆಟೋಗೂ, ಒಂದು ನಿಂಬೆ ಹಣ್ಣು ಒಂದೇ ಬೆಲೆ!
ಮಾರುಕಟ್ಟೆಯಲ್ಲಿ ಒಂದು ಕಿಲೋಗ್ರಾಂ ಟೊಮೆಟೊವನ್ನು 10 ರೂಪಾಯಿಗೆ ಸಿಗುತ್ತಿದೆ. ಆದರೆ ಈಗ ಪ್ರತಿ ನಿಂಬೆ ಹಣ್ಣಿನ ಬೆಲೆ 8 ರಿಂದ 12 ರೂ.ಗಳ ನಡುವೆ ಇದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ನಿಂಬೆಹಣ್ಣಿನ ಗಮನಾರ್ಹ ಕೊರತೆ ಉಂಟಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಹಣ್ಣು ದೊರಕದೆ ಇರುವುದು ಕೂಡ ಬೆಲೆ ಹೆಚ್ಚಾಗಲು ಕಾರಣವಾಗಿದೆ.
ಮೊದಲು ಎರಡು ರೂಪಾಯಿಗೆ ಹತ್ತು ರೂಪಾಯಿಗೆ ನಾಲ್ಕು ಸಿಗುತ್ತಿದ್ದ ನಿಂಬೆಹಣ್ಣುಗಳು ಈಗ 8, 9, 10 ಮತ್ತು 12 ರೂಪಾಯಿಗೆ ತಲುಪಿದೆ. ಸಣ್ಣ ಸೈಜಿನ ನಿಂಬೆ ಹಣ್ಣಿಗೆ 8 ರೂಪಾಯಿಯಿದ್ದರೇ, ದೊಡ್ಡ ಗಾತ್ರದ ನಿಂಬೆಹಣ್ಣಿಗೆ 12 ರೂಪಾಯಿಯಾಗುತ್ತಿದೆ. ಬೇಸಿಗೆಯಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಕೂಡ ಹೆಚ್ಚಾಗಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲ.

ಕಳೆದ ಕೆಲವು ದಿನಗಳಿಂದ ನಿಂಬೆ ಹಣ್ಣಿನ ಕೊರತೆ ತೀವ್ರವಾಗಿದ್ದು, ಉತ್ತರ ಕರ್ನಾಟಕ ಮತ್ತು ಇತರ ಪ್ರದೇಶಗಳಿಂದ ಸಣ್ಣ ಪ್ರಮಾಣದಲ್ಲಿ ನಿಂಬೆ ಹಣ್ಣು ಮಾರುಕಟ್ಟೆಗೆ ಬರುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ದಾಸ್ತಾನು ಬೇಗನೇ ಖಾಲಿಯಾಗುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ. ಕಡಿಮೆ ಇಳುವರಿಯಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ನಿಂಬೆ ಇಳುವರಿ ಕ್ಷೀಣಿಸಿದೆ. ವಿಜಯಪುರ ನಿಂಬೆ ಹಣ್ಣಿನ ಪ್ರಾಥಮಿಕ ಮೂಲವಾಗಿದ್ದು, ಅಲ್ಲಿಂದ ಪೂರೈಕೆ ಕಡಿಮೆಯಾಗಿರುವುದು ಕೂಡ ಇದಕ್ಕೆ ಕಾರಣ.
ಬೇಸಿಗೆಯಲ್ಲಿ ನಿಂಬೆ ಹಣ್ಣು ಬೆಲೆ ಹೆಚ್ಚಳ ಸಾಮಾನ್ಯ!
ಇನ್ನು, ಪ್ರತಿ ಬೇಸಿಗೆಯಲ್ಲೂ ನಿಂಬೆ ಹಣ್ಣು ಬೆಲೆ ಏರಿಕೆಯಾಗುವುದು ಸಾಮಾನ್ಯ ಎನ್ನುತ್ತಾರೆ ವ್ಯಾಪಾರಿಗಳು. ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಪೂರೈಕೆಯು ಬೇಡಿಕೆಗೆ ಹೊಂದಿಕೆಯಾಗುತ್ತಿಲ್ಲ. ಈ ಹಿಂದೆ ಸಗಟು ಮಾರುಕಟ್ಟೆಯಲ್ಲಿ 250 ರಿಂದ 300 ರೂ.ಗೆ 100 ನಿಂಬೆ ಹಣ್ಣು ಖರೀದಿಸಬಹುದಿತ್ತು. ಆಗ ಒಂದು ಹಣ್ಣಿಗೆ 4 ರಿಂದ 5 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.
ಆದರೆ, ಈಗ ಸಗಟು ಮಾರುಕಟ್ಟೆಯಲ್ಲಿ 100 ನಿಂಬೆ ಹಣ್ಣಿಗೆ 700 ರಿಂದ 800 ರೂಪಾಯಿಯಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಾಮಾನ್ಯವಾಗಿ ವಿಜಯಪುರ ಜಿಲ್ಲೆಯಿಂದ ಮತ್ತು ಆಂಧ್ರಪ್ರದೇಶದ ಕಡಪ ಮತ್ತು ಅನಂತಪುರ ಜಿಲ್ಲೆಗಳಿಂದ ನಿಂಬೆ ಹಣ್ಣಿನ ದಾಸ್ತಾನು ಬರುತ್ತದೆ. ಸದ್ಯ ಅಲ್ಲಿಂದ ಬರುವ ದಾಸ್ತಾನು ಕೂಡ ಕಡಿಮೆಯಾಗಿದೆ.
ಹೆಚ್ಚಾಗಿದೆ ಚಿಕನ್ ಬೆಲೆ!
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಕೋಳಿ (ಚಿಕನ್) ಬೆಲೆ ವೇಗವಾಗಿ ಏರಿಕೆಯಾಗುತ್ತಿದೆ. ಸ್ಕಿನ್ ಇರುವ ಚಿಕನ್ ಬೆಲೆ 240 ರಿಂದ 260 ರೂ.ಗೆ ಏರಿಕೆಯಾಗಿದ್ದು, ಸ್ಕಿನ್ ಲೆಸ್ ಚಿಕನ್ ಈಗ 300 ರೂಪಾಯಿಯಾಗಿದೆ. ಸಾಮಾನ್ಯವಾಗಿ ಬೇಸಿಗೆಯ ತಿಂಗಳುಗಳಲ್ಲಿ ಕೋಳಿ ಬೆಲೆ ಕಡಿಮೆಯಾಗುತ್ತದೆ. ಆದರೆ ಈ ವರ್ಷ ಅನಿರೀಕ್ಷಿತವಾಗಿ ಅದು ಏರಿಕೆಯಾಗುತ್ತಿದೆ.












Click it and Unblock the Notifications