Lalbagh Flower Show: ಕೋಟಿ ಕೋಟಿ ಆದಾಯ ದೋಚಿದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ
ಬೆಂಗಳೂರು, ಜನವರಿ 29: 75ನೇ ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಫಲಪುಷ್ಪ ಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿದ್ದು, ಐದು ಲಕ್ಷಕ್ಕೂ ಹೆಚ್ಚು ಜನರು ಹೂವಿನ ಅಲಂಕಾರವನ್ನು ಕಣ್ತುಂಬಿಕೊಂಡಿದ್ದಾರೆ.
ತೋಟಗಾರಿಕಾ ಇಲಾಖೆ ನೇತೃತ್ವದಲ್ಲಿ ಜನವರಿ 18ರಿಂದ ಆರಂಭವಾದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಹತ್ತು ದಿನಗಳ ಭರ್ಜರಿ ಪ್ರದರ್ಶನ ಮೂಲಕ ನಿನ್ನೆ(ಜನವರಿ 28) ಭಾನುವಾರ ಅಂತ್ಯವಾಗಿದೆ. ಕೊನೆಯ ದಿನವಾದ ನಿನ್ನೆ ಒಂದೇ ದಿನ 75,000ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನವನ್ನು 12ನೇ ಶತಮಾನದ ದಾರ್ಶನಿಕ ಮತ್ತು ಸಮಾಜ ಸುಧಾರಕ ಬಸವಣ್ಣನವರ ಜೀವನ ಮತ್ತು ಆದರ್ಶಗಳ ಥೀಮ್‌ನಲ್ಲಿ ಆಯೋಜಿಸಲಾಗಿತ್ತು. ಬಸವಣ್ಣನವರ ಬೋಧನೆಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸುವ ಸಲುವಾಗಿ ಲಾಲ್‌ಬಾಗ್‌ನ ವಿವಿಧ ಭಾಗಗಳಲ್ಲಿ ಫಲಕಗಳನ್ನು ಹಾಕಲಾಗಿತ್ತು.
ಈ ಬಾರಿ ಲಾಲ್‌ಬಾಗ್‌ನಲ್ಲಿ ಬಸವಣ್ಣನವರ ಜೀವನ, ತತ್ವಜ್ಞಾನ ಮತ್ತು ಅವರ ಒಡನಾಡಿಗಳು ಹಾಗೂ ವಚನ ಸಾಹಿತ್ಯದ ಪ್ರಮುಖರಾದ ಅಲ್ಲಮ ಪ್ರಭು, ಅಕ್ಕ ಮಹಾದೇವಿ ಹಾಗೂ ಇತರರ ಪುಷ್ಪ ಶಿಲ್ಪಗಳನ್ನು ರಚಿಸಲಾಗಿದ್ದು, ಗುಲಾಬಿ ಮತ್ತು ಸೇವಂತಿಗೆ ಬಳಸಿ ರಚಿಸಿದ ಅನುಭವ ಮಂಟಪ ಜನರ ಗಮನ ಸೆಳೆಯಿತು. ಬಸವಣ್ಣ ಕುರಿತಾದ ಫಲಪುಷ್ಪ ಪ್ರದರ್ಶನದಲ್ಲಿ ಪುಷ್ಪ ಸೊಬಗನ್ನು ವೀಕ್ಷಿಸಲು ನಗರದ ನಾನಾ ಭಾಗಗಳಿಂದ ಮಾತ್ರವಲ್ಲದೆ, ರಾಜ್ಯದ ಹೊರ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಜನರು ಆಗಮಿಸಿದ್ದರು.
ನಿನ್ನೆ ಭಾನುವಾರ ಶಾಲಾ-ಕಾಲೇಜು, ಕಚೇರಿಗಳಿಗೆ ರಜೆ ಹಿನ್ನೆಲೆಯಲ್ಲಿ 75,000ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು, 37.5 ಲಕ್ಷ ರೂಪಾಯಿ ಪ್ರವೇಶ ಶುಲ್ಕ ಒಂದೇ ದಿನದಲ್ಲಿ ಸಂಗ್ರಹವಾಗಿದೆ ಎನ್ನಲಾಗಿದೆ. ಹೆಚ್ಚು ಜನರು ಒಂದೇ ದಿನದಲ್ಲಿ ಭೇಟಿ ನೀಡಿದ ಕಾರಣ ಲಾಲ್‌ಬಾಗ್‌ನ ನಾಲ್ಕು ಪ್ರವೇಶ ದ್ವಾರಗಳು ಜನಸಂದಣಿಯಿಂದ ತುಂಬಿ ತುಳುಕುತ್ತಿತ್ತು. ಪ್ರವೇಶ ಟಿಕೆಟ್ ಪಡೆಯಲು ಜನ ಪರದಾಡಿದ್ದು, ಲಾಲ್‌ಬಾಗ್ ನಿಲ್ದಾಣ, ಸೌತ್ ಎಂಡ್ ಮೆಟ್ರೊ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಿತ್ತು.

ಇನ್ನು ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗೆ ಕೊನೆಯ ಎರಡು ದಿನ ಪ್ರವೇಶ ಶುಲ್ಕ ವಯಸ್ಕರಿಗೆ ತಲಾ 100 ರೂಪಾಯಿ, 12 ವರ್ಷದೊಳಗಿನ ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗಿತ್ತು. ಅಲ್ಲದೇ ಪಾರ್ಕಿಂಗ್ ತಾಣಗಳು ದುಬಾರಿಯಾಗಿದ್ದು, ಕಾರಿಗೆ ಕನಿಷ್ಠ 4 ಗಂಟೆಗೆ 200 ರೂಪಾಯಿ, ಹಾಗೂ ದ್ವಿಚಕ್ರ ವಾಹನಕ್ಕೆ 100 ರೂಪಾಯಿ ದರ ನಿಗದಿ ಪಡಿಸಲಾಗಿತ್ತು. ಇನ್ನು 'ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಜನವರಿ 18ರಿಂದ 28ರವರೆಗೆ ಒಟ್ಟು 5.61 ಲಕ್ಷ ಜನ ಭೇಟಿ ನೀಡಿದ್ದು, ಒಟ್ಟು ₹2.59 ಕೋಟಿ ಪ್ರವೇಶ ಶುಲ್ಕ ಸಂಗ್ರಹವಾಗಿದೆ' ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications