Bengaluru Flower Show 2025: ಪ್ರದರ್ಶನಕ್ಕೆ ಭಾರೀ ಸ್ಪಂದನೆ, ಲಾಲ್‌ಬಾಗ್‌ಗೆ 1.50 ಲಕ್ಷ ಜನ ಭೇಟಿ, ಆದಾಯ ಎಷ್ಟು?
ಬೆಂಗಳೂರು, ಜನವರಿ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಸಸ್ಯಕಾಶಿ ಲಾಲ್‌ಬಾಗ್ ಉದ್ಯಾನದಲ್ಲಿ ಗಣರಾಜ್ಯೋತ್ಸವ 2025 ಪ್ರಯುಕ್ತ ಹಮ್ಮಿಕೊಳ್ಳಲಾದ 'ಫಲಪುಷ್ಪ ಪ್ರದರ್ಶನ 2025'ಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಮಾಯಣ ಕೃತಿ ರಚನೆಕಾರ, ಮಹರ್ಷಿ ವಾಲ್ಮಿಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಇದಾಗಿದ್ದು, ಈವರೆಗೆ ಒಟ್ಟು 1.50 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ.
ಲಾಲ್‌ಬಾಗ್‌ನಲ್ಲಿ ಲಕ್ಷಾಂತರ ಹೂಗಳಲ್ಲಿ ಮಹರ್ಷಿ ವಾಲ್ಮಿಕಿ ಥೀಮ್ ಅರಳಿದೆ. ಜನವರಿ 16ರಿಂದ 217ನೇ 'ಫಲಪುಷ್ಪ ಪ್ರದರ್ಶನ 2025' ಆರಂಭವಾಗಿದ್ದು, ನೆನ್ನೆ ಬುಧವಾರದವರೆಗೆ (ಜನವರಿ 22) ಒಟ್ಟು 1.50.ಲಕ್ಷ ಮಂದಿ ಭೇಟಿ ನೀಡಿ ಪ್ರದರ್ಶನ ಕಣ್ತುಂಬಿಕೊಂಡಿದ್ದಾರೆ. ಈ ಪುಷ್ಪ ಪ್ರದರ್ಶನವು ಜನವರಿ 27ರ ಸಂಜೆವರೆಗೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶನಕ್ಕೆ ಕಳೆದ ವಾರ ಚಾಲನೆ ನೀಡಿದ್ದರು.

ಜನವರಿ 26ರಂದು ಗಣರಾಜ್ಯೋತ್ಸವ ನಡೆಯಲಿದ್ದು, ಅಂದು ರಜಾ ದಿನವಾಗಿದ್ದರಿಂದ ಫಲಪುಷ್ಪ ಪ್ರದರ್ಶನ ಮುಗಿಯುವ ಹೊತ್ತಿಗೆ ಇನ್ನೂ ಸುಮಾರು 3ರಿಂದ 3.5.ಲಕ್ಷ ಮಂದಿ ಲಾಲ್‌ಬಾಗ್ ಗೆ ಭೇಟಿನೀಡುವ ನಿರೀಕ್ಷೆಗಳು ಇವೆ. ಇದರಿಂದ ಒಂದೂ ಕೋಟಿಗೂ ಹೆಚ್ಚು ಆದಾಯ ನಿರೀಕ್ಷೆ ಇದೆ.
ದೇಶ - ವಿದೇಶಗಳಿಂದ ಮೂರು ಲಕ್ಷಕ್ಕೂ ಅಧಿಕ ತರಹೇವಾರಿ ಬಣ್ಣ ಬಣ್ಣದ ಹೂಗಳಿಂದ ವಿವಿಧ ಕಲಾಕೃತಿ ನಿರ್ಮಿಸಲಾಗಿದೆ. ನೋಡಗರನ್ನು ಕಣ್ಮನ ಸೆಳೆಯುವಂತಹ ಚಿತ್ತಾಕರ್ಷಣೆಗಳು ಇಲ್ಲಿವೆ. ಅವೆಲ್ಲವು ಮಹರ್ಷಿ ವಾಲ್ಮಿಕಿ ಅವರ ಜೀವನ, ವಿಷಯಗಳನ್ನು ಸಾರುತ್ತಿವೆ.

ಲಾಲ್ ಬಾಗ್ ಗಾಜಿನ ಮನೆಯಲ್ಲಿ ನೇಪಾಳದ ತ್ರಿವೇಣಿ ಸಂಗಮದ ವಾಲ್ಮಿಕಿ ಆಶ್ರಮ ದೇವಾಲಯವನ್ನು ಅನೇಕ ಬಗೆಯ ಪುಷ್ಪಗಳಿಂದ ನಿರ್ಮಿಸಿದ್ದಾರೆ. ಇದು ಸಹ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಆ ಆಶ್ರಮವು ಒಟ್ಟು 14 ಅಗಲ ಮತ್ತು 24 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಈ ಆಶ್ರಮದಲ್ಲಿನ ಹೂಗಳು ಬಾಡಿದ್ದರಿಂದ ಬುಧವಾರ ಕಲಾವಿದರ ಹೊಸ ಹೂವುಗಳನ್ನು ಜೋಡಿಸಿದರು. ಕೆಂಪು, ಹಳದಿ ಬಣ್ಣ ಈ ಕಲಾಕೃತಿಯ ಮೆರೆಗು ಹೆಚ್ಚಿಸಿದೆ.
ಇನ್ನೂ ಲಾಲ್‌ಬಾಗ್ ಚಿಕ್ಕಕೆರೆಯ ಬಳಿ ಇರುವ ಆಕರ್ಷಕ ಜಲಪಾತದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ಆರಂಭವಾಗುತ್ತದೆ. 7 ಗಂಟೆಯಿಂದ 7.20 ರವರೆಗೆ, 8 ಗಂಟೆಯಿಂದ 8.20 ರವರೆಗೆ ಹೀಗೆ 20 ನಿಮಿಷ ಜಲಪಾತ ವೀಕ್ಷಣೆಗೆ ಅವಕಾಶ ಇರುತ್ತದೆ.
1-10 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಒಂದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ. ರಜಾ ದಿನ ಹೊರತುಪಡಿಸಿ ಉಳಿದ ದಿನ ಉಚಿತ ಪ್ರವೇಶ ಇರಲಿದೆ. ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಬರಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಸಾರಿಗೆ ಬಳಸುವಂತೆ ಕೋರಿಕೆ
ಲಕ್ಷಾಂತರ ಜನರು ಲಾಲ್‌ಬಾಗ್‌ಗೆ ಬರುವ ಹಿನ್ನೆಲೆಯಲ್ಲಿ ಸೂಕ್ತ ಬಿಗಿ ಭದ್ರತೆ ಕೈಗೊಳ್ಳಳಾಗಿದೆ. ಈಗಾಗಲೇ ಸಂಚಾರ ಸಲಹೆ, ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ. ಶೌಚಾಲಯ, ತ್ಯಾಜ್ಯ ಹಾಕಲು ಪ್ರತ್ಯೇಕ ವ್ಯವಸ್ಥೆ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಲಾಲ್ ಬಾಗ್‌ಗೆ ಬರುವವರು ಆದಷ್ಟು ಸಾರ್ವಜನಿಕ ಸಾರಿಗೆಗಳಾದ ಬಿಎಂಟಿಸಿ ಬಸ್, ನಮ್ಮ ಮೆಟ್ರೋ ಬಳಕೆ ಮಾಡುವುದಂತೆ ಕೋರಲಾಗಿದೆ.












Click it and Unblock the Notifications