ಬೆಂಗಳೂರು ವಿಮಾನ ನಿಲ್ದಾಣದಿಂದ ಈ ಜಿಲ್ಲೆಗಳಿಗೆ KSRTC ಬಸ್ ಸೇವೆ, ಮಾಹಿತಿ ವಿವರ
ಬೆಂಗಳೂರು, ಡಿಸೆಂಬರ್ 30: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎರಡನೇ ಟರ್ಮಿನಲ್‌ನಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನಿಗಮದ ಫ್ಲೈಬಸ್, ವಾಯುವಜ್ರ ಬಸ್ ಸೇವೆಗೆ ಶುಕ್ರವಾರ ಚಾಲನೆ ನೀಡಿ ನೂತನ ಸಹಾಯ ಕೇಂದ್ರವನ್ನು ಉದ್ಘಾಟಿಸಲಾಗಿದೆ.
ಪ್ರಯಾಣಿಕರಿಗಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಬೆಸ್ ಮೆಂಟ್‌ನಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಆಹಾರ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪನ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ.

ಟರ್ಮಿನಲ್ 1ರಲ್ಲಿ ಈ ಹಿಂದೆ ಸುಸಜ್ಜಿತ ಬಸ್ ನಿಲ್ದಾಣವಿದ್ದು, ಟರ್ಮಿನಲ್ 2ರಲ್ಲಿ ನಿಲ್ದಾಣ ಇರಲಿಲ್ಲ. ಹೀಗಾಗಿ ಪ್ರಯಾಣಿಕರು ಟರ್ಮಿನಲ್ 2 ರಿಂದ ಟರ್ಮಿನಲ್ 1ಗೆ ಬೇರೆ ಬಸ್ ಮೂಲಕ ಆಗಮಿಸಿ ನಂತರ ವಾಯುವಜ್ರ ಬಸ್ ಏರಬೇಕಿತ್ತು. ಆದರೆ ಈಗ ಟರ್ಮಿನಲ್ 2ರಲ್ಲೇ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಪ್ರಯಾಣಿಕರಿಗೆ ಅನೂಕೂಲಕರವಾಗಿದೆ.
ವಿಐಪಿ ಲಾಂಜ್, ಎಸಿ ಲಾಂಜ್, ನೀರಿನ ವ್ಯವಸ್ಥೆ, ಶೌಚಾಲಯ, ಸಹಾಯವಾಣಿ ಕೇಂದ್ರ, ವಾಹನಗಳ ಕಾರ್ಯಾಚರಣೆಯ ಸಮಯ, ಡಿಜಿಟಲ್ ಫಲಕಗಳು, ಸಾರ್ವಜನಿಕ ಉದ್ಘೋಶಣ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಬಸ್ ನಿಲ್ದಾಣದಲ್ಲಿ 40 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ನಿಲ್ದಾಣದಿಂದ ಪ್ರತಿನಿತ್ಯ ಬೆಂಗಳೂರಿನ ವಿವಿಧೆಡೆಗೆ ಬಿಎಂಟಿಸಿ ವಾಯು ವಜ್ರ ಬಸ್‌ಗಳು ಸಂಚರಿಸಲಿದೆ. ಪ್ರಸ್ತುತ ವಿಮಾನ ನಿಲ್ದಾಣದಿಂದ ಕ.ರಾ.ರ.ಸಾ ನಿಗಮದ ಒಟ್ಟು 13 ಫ್ಲೈಬಸ್ ಸೇವೆಗಳನ್ನು 42 ಟ್ರಿಪ್‌ಗಳ ಮುಖಾಂತರ ಪ್ರತಿನಿತ್ಯ ಮೈಸೂರು, ಕುಂದಾಪುರ ಹಾಗೂ ಮಡಿಕೇರಿ ಮಾರ್ಗಗಳಲ್ಲಿ ಸಂಚಾರಗೊಳಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಇನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಇದು ಎಲ್ಲಾ ವಿಮಾನ ನಿಲ್ದಾಣಗಳಿಗಿಂತ ವಿಭಿನ್ನವಾಗಿದೆ ಮತ್ತು ಅತಿ ದೊಡ್ದ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಸಂಚಾರ ಮಾಡಲು ಬಿಎಂಟಿಸಿ ಮತ್ತು ವಾಯುವಜ್ರದ ಎಲೆಕ್ಟ್ರಿಕ್ ಬಸ್‌ಗಳ ಸೇವೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಸ್‌ಗಳನ್ನು ನೀಡಲು ಸಚಿವರು ಈ ವೇಳೆ ಒಪ್ಪಿಗೆಯನ್ನು ನೀಡಿದರು.

ಇನ್ನು ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಬಳಿ ಬಹು-ಮಾದರಿ ಸಾರಿಗೆ ಕೇಂದ್ರದ (ಎಂಎಂಟಿಎಚ್) ಹಂತ-1 ಶುಕ್ರವಾರ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಒಂದೇ ಸೂರಿನಡಿ ಬಸ್, ಕ್ಯಾಬ್ ಮತ್ತು ಮೆಟ್ರೋ ರೈಲುಗಳಂತಹ ಅನೇಕ ಸಾರಿಗೆ ವಿಧಾನಗಳನ್ನು ಸಂಯೋಜಿಸಲು ಎಂಎಂಟಿಎಚ್ ಹಬ್ ಸ್ಥಾಪಿಸಲಾಗಿದೆ. ಎಂಎಂಟಿಎಚ್ ಬಹು-ಹಂತದ ಪಾರ್ಕಿಂಗ್ ವ್ಯವಸ್ಥೆಯಾಗಿದ್ದು, ಪ್ರಯಾಣಿಕರಿಗೆ ನೆರವಾಗುವ ದೃಷ್ಟಿಯಿಂದ ಇದನ್ನು ಆರಂಭಿಸಲಾಗಿದೆ.












Click it and Unblock the Notifications