ಮೈಸೂರು-ಬೆಂಗಳೂರು ಪ್ರಯಾಣ ದರ ಹೆಚ್ಚಳ: ಕೆಎಸ್‌ಆರ್‌ಟಿಸಿ ಸ್ಪಷ್ಟನೆ
ಬೆಂಗಳೂರು, ನವೆಂಬರ್ 21: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಆರಂಭದ ಬಳಿಕ ಸಾರಿಗೆ ಬಸ್‌ಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಮೈಸೂರು ದಸರಾ, ಹಾಸನಾಂಬ ಉತ್ಸವ ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ಕಾರ್ಯಕ್ರಮಗಳಿಗೆ ಈ ಬಾರಿ ಜನ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ದೇವಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಮಹಿಳೆಯರು ಉಚಿತ ಪ್ರಯಾಣವನ್ನು ಸದ್ಭಳಕೆ ಮಾಡಿಕೊಳ್ಳುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ ಮೈಸೂರು ದಸರಾ ಸಂದರ್ಭದಲ್ಲಿಯೂ ಕೂಡ ಲಕ್ಷಾಂತರ ಮಹಿಳೆಯರು ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸಿದ್ದರು.

ಈ ಮಧ್ಯೆ ಮೈಸೂರು-ಬೆಂಗಳೂರು ಸಾರಿಗೆ ಬಸ್‌ಗಳ ದರ ಏರಿಕೆಯಾಗಿರುವುದು ಕಂಡು ಬಂದಿತ್ತು. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ದರ ಏರಿಕೆ ಮಾಡಿರುವ ಆರೋಪ ಕೂಡ ಕೇಳಿಬಂದಿತ್ತು. ಹೀಗಾಗಿ ದಸರಾ ಸಂದರ್ಭದಲ್ಲಿ ದರ ಏರಿಕೆಯ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಪಷ್ಟನೆ ನೀಡಿದೆ.
ಸಾರ್ವಜನಿಕರ ಆರೋಪವೇನು..?
ಬಯಲಾಯ್ತು ಶಕ್ತಿ ಯೋಜನೆ ಅಸಲಿಯತ್ತು. ಉಚಿತ ಬಸ್ ಟಿಕೆಟ್ ಅಂತಾ ನಂಬಿಸಿ 3 ಬಾರಿ ಬಸ್ ಟಿಕೆಟ್ ದರ ಏರಿಸಲಾಗಿದೆ. ಮೈಸೂರು-ಬೆಂಗಳೂರಿಗೆ 160 ರೂಪಾಯಿ ಇದ್ದ ಟಿಕೆಟ್ ದರ ಈಗ 200 ರೂಪಾಯಿ ಆಗಿದೆ. ಒಂದು ಕಡೆ ಸುಲಿಗೆ ಇನ್ನೊಂದು ಕಡೆ ಉಚಿತ, ಇದು ಫ್ರೀ ಭಾಗ್ಯವಲ್ಲ, ಹಗಲು ದರೋಡೆ ಎಂದು ಹಲವರು ಆರೋಪಿಸಿದ್ದರು. ಈ ರೀತಿ ಬರೆಯಲಾಗಿದ್ದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.
ಅಲ್ಲದೇ ಶಕ್ತಿ ಯೋಜನೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ಟಿಕೆಟ್ ದರ ಏರಿಸಿ ಹಗಲು ದರೋಡೆ ಮಾಡುತ್ತಿದೆ ಎನ್ನುವ ಆರೋಪದ ಪೋಸ್ಟರ್‌ಗಳನ್ನು ರಾಜ್ಯದ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗಿತ್ತು ಈ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆಯೇ ಸಾರಿಗೆ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ಇಂದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ.
ಟಿಕೆಟ್ ದರ ಏರಿಕೆಯ ಬಗ್ಗೆ ಅಸಲಿ ವಿಚಾರವೇನು..?
ಮೈಸೂರು ದಸರಾ 2023ರ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ ಮಾಡಲಾಗಿತ್ತು. ಈ ಬಗ್ಗೆ ನಿಗಮ ಸ್ಪಷ್ಟನೆ ನೀಡಿದೆ. ದಸರಾ ನಿಮಿತ್ತ 10 ದಿನ ಅಥವಾ ಸೀಮಿತ ಅವಧಿಗೆ ಅನ್ವಯವಾಗುವಂತೆ ಕಳೆದ 4 ದಶಕಗಳಿಂದಲೂ ಪ್ರತಿ ವರ್ಷ ಮೈಸೂರು- ಬೆಂಗಳೂರು ಬಸ್ ಪ್ರಯಾಣ ದರವನ್ನು ಶೇ 20 ರಷ್ಟು ಏರಿಸಲಾಗುತ್ತದೆ. ಆದರೆ ಈ ದರ ಏರಿಕೆಯು ಅಕ್ಟೋಬರ್ 30ಕ್ಕೆ ಅಂತ್ಯಗೊಂಡಿದ್ದು, ಈಗ ಹಿಂದಿನ ಟಿಕೆಟ್ ದರವೇ ಚಾಲ್ತಿಯಲ್ಲಿದೆ.
ಪೋಸ್ಟರ್‌ನಲ್ಲಿರುವ ಟಿಕೆಟ್‌ನಲ್ಲಿ ಅಕ್ಟೋಬರ್ 23ರಂದು ಪ್ರಯಾಣಿಸಿದ ಮಾಹಿತಿ ಇದೆ. ಬೆಂಗಳೂರಿನಿಂದ ಬಸ್‌ಗಳಲ್ಲಿ ಜನಸಂದಣಿ ಇದ್ದು, ಮೈಸೂರಿನಿಂದ ವಾಪಸ್ ಬರುವಾಗ ಖಾಲಿ ಬರಬೇಕಾಗಿರುವ ಕಾರಣದಿಂದ ಈ ಏರಿಕೆಯನ್ನು ಮಾಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಆದ್ದರಿಂದ, ಶಕ್ತಿ ಯೋಜನೆಗೂ ಬಸ್ ಪ್ರಯಾಣ ದರ ಹೆಚ್ಚಳಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಬಹಿರಂಗವಾಗಿದೆ.












Click it and Unblock the Notifications