ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಪ್ರತಿಭಟನೆ, ಬೇಡಿಕೆಗಳೇನು?
ಬೆಂಗಳೂರು, ಡಿಸೆಂಬರ್ 10: ಬೆಂಗಳೂರಲ್ಲಿ ಒಂದೆಡೆ ರೈತರ ಪ್ರತಿಭಟನೆಯಾದರೆ ಮತ್ತೊಂದೆಡೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರು ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಸಾರಿಗೆ ಸಿಬ್ಬಂದಿಯ ಪ್ರತಿಭಟನೆಯಿಂದ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಬಸ್‍ಗಳ ಓಡಾಟದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಆದರೆ ಸಾರಿಗೆ ಇಲಾಖೆಯಲ್ಲಿ 1 ಲಕ್ಷದ 30 ಸಾವಿರ ಸಿಬ್ಬಂದಿ ಇದ್ದು, ಬಸ್‍ಗಳ ಓಡಾಟದಲ್ಲಿ ಯಾವುದೇ ವ್ಯತ್ಯಯ ಆಗಲ್ಲ ಎಂದು ಕೆಎಸ್‍ಆರ್‍ಟಿಸಿ ಸಿಬ್ಬಂದಿಯ ಯೂನಿಯನ್ ಮುಖಂಡ ಅನಂತ ಸುಬ್ಬರಾವ್ ತಿಳಿಸಿದ್ದಾರೆ.
10 ಸಾವಿರಕ್ಕೂ ಅಧಿಕ ಸಿಬ್ಬಂದಿ ರೈತರ ಜೊತೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡ್ಬೇಕು, ಸಿಬ್ಬಂದಿ ಮೃತಪಟ್ಟರೆ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ 30 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.

ಈ ಸಾರಿಗೆ ನೌಕರರ ಜಾಥಾ ಇಂದು ಬೆಳಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾಗಲಿದೆ. ಅಲ್ಲಿಂದ ವಿಧಾನಸೌಧಧವರೆಗೆ ಸಾರಿಗೆ ನೌಕರರು ಜಾಥಾ ಹೊರಡಲಿದ್ದಾರೆ. ಸಾರಿಗೆ ನೌಕರರ ನಡಿಗೆ- ಸರ್ಕಾರಿ ನೌಕರರಾಗುವ ಕಡೆಗೆ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಲಿದ್ದಾರೆ. ಈ ಕಾಲ್ನಡಿಗೆ ಜಾಥಾದಲ್ಲಿ ಸಾರಿಗೆ ನೌಕರರು ಅವರ ಹೆಂಡತಿ ಮಕ್ಕಳೊಂದಿಗೆ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು, ಕೆಎಸ್ಆರ್ಟಿಸಿ, ಬಿಎಂಟಿಸಿ ಹಾಗೂ ಎನ್ಇಕೆಆರ್ಟಿಸಿ ಸೇರಿ ರಾಜ್ಯದಲ್ಲಿ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಸಾರಿಗೆ ನೌಕರರು ಇದ್ದಾರೆ. ಈ ಜಾಥಾದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಂಜಾವಧೂತ ಸ್ವಾಮೀಜಿ ಹಾಗೂ ಚಂದ್ರಶೇಖರ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಸಾರಿಗೆ ನೌಕರರ ಬೇಡಿಕೆಗಳೇನು?:
* ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಬೇಕು.
* ಕೊರೋನಾ ವಾರಿಯರ್ಸ್ ಆಗಿ ಸಾರಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.
* ಸಾರಿಗೆ ನೌಕರರು ಕೊರೊನಾದಿಂದ ಮೃತಪಟ್ಟರೆ 30 ಲಕ್ಷ ಪರಿಹಾರ ನೀಡುವುದಾಗಿ ಸಾರಿಗೆ ಸಚಿವರು ಹೇಳಿದ್ದರು, ಆ ಆದೇಶವನಗನು ಅಧಿಕೃತವಾಗಿ ಜಾರಿಗೆ ತರಬೇಕು.
* ಸಾಕಷ್ಟು ನೌಕರರಿಗೆ ಡ್ಯೂಟಿ ಸಿಗುತ್ತಿಲ್ಲ, ಡ್ಯೂಟಿ ಸಿಗದೆ ಇದ್ದರೂ ಹಾಜರಾತಿ ನೀಡಬೇಕು.












Click it and Unblock the Notifications