Bengaluru Business Corridor: ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣದಿಂದ ಏನೆಲ್ಲಾ ಪ್ರಯೋಜನೆಗಳಿವೆ ಗೊತ್ತಾ?
Bengaluru Business Corridor: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಲವೆಡೆ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇನ್ನು ಇದೀಗ ಬೆಂಗಳೂರು ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ವಸತಿ ಮತ್ತು ನಗರಾಭಿವೃದ್ಧಿ ಕಾರ್ಪೊರೇಷನ್ 27 ಸಾವಿರ ಕೋಟಿ ರೂಪಾಯಿ ಸಾಲ ನೀಡಲು ಸಮ್ಮತಿ ಸೂಚಿಸಿದೆ. ಶೀಘ್ರದಲ್ಲೇ ಎರಡೂ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳಲಿವೆ. ಹಾಗಾದರೆ ಇದು ಯಾವೆಲ್ಲ ಮಾರ್ಗಗಳನ್ನು ಸಂಪರ್ಕಿಸಲಿದೆ ಹಾಗೂ ಯಾವಾಗ ಪೂರ್ಣಗೊಳ್ಳಲಿದೆ ಎಂದು ಇಲ್ಲಿ ತಿಳಿಯಿರಿ.
ಬಿಡಿಎ ಕಾಯಿದೆ ಹಾಗೂ ಭೂಸ್ವಾಧಿಧೀನ ಪರಿಹಾರ ಕಾಯ್ದೆ ಅನ್ವಯ ಭೂಮಿ ಬಿಟ್ಟುಕೊಟ್ಟ ರೈತರಿಗೆ ಪರಿಹಾರ ನಿಗದಿಪಡಿಸಲು ನಿರ್ಧಾರ ಮಾಡಲಾಗಿದೆ. ಕಳೆದ ಎರಡು ದಶಕಗಳಿಂದ ಹಳ್ಳ ಹಿಡಿದಿದ್ದ ಬೆಂಗಳೂರು ಬಿಸಿನೆಸ್ ಕಾರಿಡರ್ ಯೋಜನೆಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಮುಕ್ತಿ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಬಿಸಿನೆಸ್ ಕಾರಿಡರ್ ಯೋಜನೆಗೆ 2,560 ಹೆಕ್ಟೇರ್‌ನಷ್ಟು ಭೂಮಿಯನ್ನು ಸ್ವಾಧೀನ ಮಾಡಿಸಿಕೊಳ್ಳಬೇಕಿದೆ. ಈ ಕುರಿತು ಭೂಮಾಲೀಕರೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರ ನಿಗದಿ ಮಾಡಲಾಗುವುದು. ನಂತರ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಸರ್ಕಾರ ಖಾತರಿ ಮೂಲಕ ಸಾಲ ಪಡೆಯಲಾಗಿದೆ. 27,000 ಕೋಟಿ ರೂಪಾಯಿ ಸಾಲ ಕೊಡಲು ಹುಡ್ಕೊ ಒಪ್ಪಿಗೆ ನೀಡಿದೆ. ಇದರಲ್ಲಿ ಭೂ ಪರಿಹಾರಕ್ಕೆ 21,000 ಕೋಟಿ ರೂಪಾಯಿ ಹಾಗೂ ರಸ್ತೆ ನಿರ್ಮಾಣಕ್ಕೆ 6,000 ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
100 ಮೀಟರ್ ಅಗಲದ ಕಾರಿಡಾರ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆಯೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಕಾರಿಡಾರ್‌ನ ಎರಡೂ ಭಾಗಗಳ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. 50 ಮೀಟರ್ ಅಗಲದಲ್ಲಿ6 ಪಥಗಳ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇನ್ನುಳಿದ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುಕೊಳ್ಳಲು ನಿರ್ಧರಿಸಲಾಗಿದೆ. ಕೇಲವ ಟೋಲ್ ಸಂಗ್ರಹದ ಮೂಲಕ ಸಾಲ ಮರುಪಾವತಿ ಕಷ್ಟವಾಗಿದ್ದು, ಈ ಹಿನ್ನೆಲೆ ಕಾರಿಡಾರ್‌ನ ಎರಡೂ ಭಾಗದ ಜಾಗವನ್ನು ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ.
ಇನ್ನು ಈ ಯೋಜನೆ ಪೂರ್ಣಗೊಳ್ಳಲು 3 ವರ್ಷ ಸಮಯ ಬೇಕಾಗಲಿದೆ. ನಾವು ಪಡೆದ ಸಾಲದ ಬಡ್ಡಿಯನ್ನು ಸರ್ಕಾರವೇ ನಾಲ್ಕು ವರ್ಷಗಳ ಕಾಲ ಭರಿಸಲಿದೆ. ಆ ಸಮಯದೊಳಗೆ ಸಾಲ ಮರುಪಾವತಿ ಮಾಡಬೇಕು. ಇಲ್ಲವಾದರೆ, ಸಾಲ ಮತ್ತು ಉಳಿದ ಬಡ್ಡಿಯನ್ನು ಪ್ರಾಧಿಕಾರವೇ ಪಾವತಿ ಮಾಡಬೇಕಾಗುತ್ತದೆ. ಹೊಸ ಬಡಾವಣೆಗಳ ನಿರ್ಮಾಣ, ವಾಣಿಜ್ಯ ಉದ್ದೇಶಗಳಿಗೆ ಭೂಮಿ ಮೀಸಲಿಡುವ ಮೂಲಕ ಆದಾಯ ಮೂಲಗಳನ್ನು ಕಂಡುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ.
ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 73 ಕಿಲೋ ಮೀಟರ್ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದು 77 ಗ್ರಾಮಗಳ ನಡುವೆ ಹಾದುಹೋಗಲಿದೆ. ತುಮಕೂರು ರಸ್ತೆಯ ಮಾದನಾಯಕಹಳ್ಳಿ ಬಳಿಯ ನೈಸ್ ಜಂಕ್ಷನ್‌ನಿಂದ ಪ್ರಾರಂಭ ಆಗುವ ಕಾರಿಡಾರ್ ಹೆಸರುಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ಹಳೇ ಮದ್ರಾಸ್ ರಸ್ತೆ, ವೈಟ್‌ಫೀಲ್ಡ್, ಚನ್ನಸಂದ್ರ, ಸರ್ಜಾಪುರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ತಲುಪಲಿದೆ. ಹೆಸರಘಟ್ಟ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ವೈಟ್‌ಫೀಲ್ಡ್, ಹೊಸೂರು ರಸ್ತೆಗಳನ್ನು ಇದು ಸಂಪರ್ಕಿಸಲಿದೆ ಎಂದು ತಿಳಿದುಬಂದಿದೆ.












Click it and Unblock the Notifications