ಪ್ಯಾಕೇಟ್ ಹಾಲಿನ ಮಾರಾಟಕ್ಕೆ ನಾಣ್ಯಗಳ ಸಮಸ್ಯೆ: ಕೆಎಂಎಫ್ ಕೈಗೊಂಡ ಪರಿಹಾರ?
ಬೆಂಗಳೂರು, ಆಗಸ್ಟ್ 06: ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಹಾಲು ಮಹಾಮಂಡಳ (KMF) ನಂದಿನಿ ಹಾಲಿನ ದರವನ್ನು ಪರಿಷ್ಕರಿಸಿತ್ತು. ಇದರಿಂದಾಗಿ ಗ್ರಾಹಕರಿಗೆ ನಾಣ್ಯಗಳ ತೀವ್ರ ಅಭಾವ ಎದುರಾಗಿತ್ತು, ಹೀಗಾಗಿ ಚಿಲ್ಲರೆಯ ಸಮಸ್ಯೆ ಸೃಷ್ಟಿಯಾಗದಂತೆ ಹಾಲಿನ ದರ ರೌಂಡ್ ಆಫ್ ಮಾಡಲಾಗಿದೆ. ಇದರಿಂದ ಪ್ಯಾಕೇಟ್ ಹಾಲಿನಲ್ಲಿ 10 ಮಿಲಿ ಹಾಲು ಗ್ರಾಹಕರಿಗೆ ಅಧಿಕವಾಗಿ ಸಿಗುತ್ತಿದೆ.
ಕರ್ನಾಟಕ ಹಾಲು ಮಹಾಮಂಡಳ (KMF) ಇತ್ತೀಚೆಗೆ ಎಲ್ಲಾ ವಿಧದ ಹಾಲಿನ ಬೆಲೆಯನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲಾಗಿದೆ. ಆದರೆ ನಾಣ್ಯದ ಕೊರತೆಯು ಅರ್ಧ ಲೀಟರ್ (500 ಮಿಲಿ) ಪ್ಯಾಕೆಟ್‌ಗಳ ಮಾರಾಟಕ್ಕೆ ಸಂಬಂಧಿಸಿದ್ದಾಗಿದೆ. ಹಾಲಿನ ದರಗಳು ರೂ 1.5 (ಒಂದೂವರೆ ರೂಪಾಯಿ) ರಷ್ಟು ಹೆಚ್ಚಾಗಿದೆ.

ವಿಶೇಷವಾಗಿ ಈ 50 ಪೈಸೆ ಮತ್ತು 1 ಮುಖಬೆಲೆಯ ನಾಣ್ಯಗಳ ಕೊರತೆಯನ್ನು ಗ್ರಾಹಕರು ಎದುರಿಸಿದ್ದಾರೆ. ಹೀಗಾಗಿ ಸಹಕಾರಿ ಒಕ್ಕೂಟ ಪ್ರಮುಖರು ಅರ್ಧ ಲೀಟರ್ ಪ್ಯಾಕೆಟ್‌ಗಳ ಬೆಲೆಯನ್ನು ಪೂರ್ಣಗೊಳಿಸಲು ಮತ್ತು 10 ಮಿಲಿ ಹೆಚ್ಚುವರಿ ಹಾಲನ್ನು ನೀಡಲು ನಿರ್ಧರಿಸುವ ಮೂಲಕ ಚಿಲ್ಲರೆ ಸಮಸ್ಯೆಗೆ ಮುಕ್ತಿ ಹಾಡಿದ್ದಾರೆ. ಉದಾಹರಣೆಗೆ 21.5ರೂ.ಗೆ ಅರ್ಧ ಲೀಟರ್ ಹಾಲಿನ ಬೆಲೆ 22ರೂ. ಮಾಡಿದ್ದಾರೆ.
ಪ್ಯಾಕೆಟ್ ಹಾಲಿನ ಮೇಲೆ ನಾಣ್ಯ ಕೊರತೆ ದುಷ್ಪರಿಣಾಮ
KMF ಅಧಿಕಾರಿಗಳ ಪ್ರಕಾರ, ಬೆಲೆ ಪರಿಷ್ಕರಣೆಯ ಮುಂಚಿತವಾಗಿನಿಂದಲೂ ನಾಣ್ಯಗಳ ಕೊರತೆ ಸೃಷ್ಟಿಯಾಗಿದೆ. ಅರ್ಧ ಲೀಟರ್ ಪ್ಯಾಕೆಟ್‌ಗಳ ಮಾರಾಟದ ಮೇಲೆ ಸಹ ದುಷ್ಪರಿಣಾಮ ಬೀರಿತ್ತು. ಇತ್ತೀಚೆಗೆ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಾಗಿದ್ದರಿಂದ ಸಮಸ್ಯೆ ಇನ್ನಷ್ಟು ತೀವ್ರಗೊಂಡಿತ್ತು.
ಒಂದು ಲೀಟರ್ ಪ್ಯಾಕೆಟ್‌ಗಳ ಮಾರಾಟವು ಕಡಿಮೆ ಸಂಖ್ಯೆಗಳಿಗೆ ಸೀಮಿತವಾಗಿರುವುದರಿಂದ ವಿಭಿನ್ನ ಬೆಲೆಗಳ ಹೊರತಾಗಿಯೂ ಪರಿಷ್ಕರಣೆಯು ಅದರ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿದು ಬಂದಿದೆ.

ಅರ್ಧ ಲೀಟರ್ (500 ಮಿಲಿ) ಹಾಲಿನ ದರದಲ್ಲಿ 1.5 ರೂ. ಪ್ಯಾಕೆಟ್ ಸಮಸ್ಯೆ ಉಲ್ಬಣಗೊಳಿಸಿತು. ಲೀಟರ್ ಗೆ 3 ರೂ ಹೆಚ್ಚಾಗಿದೆ, ಅರ್ಧ ಲೀಟರ್‌ಗೆ ಮಾರಾಟಗಾರರು 50 ಪೈಸೆ ಮತ್ತು ರೂ 1 ನಾಣ್ಯಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರ್ಧ ಲೀಟರ್ ಹಾಲು ಖರೀದಿ ಬಳಿಕ ಇನ್ನಿತರ ಮಿಠಾಯಿ, ಚಿಲ್ಲರೆ ವಸ್ತು ನೀಡಿ ನಾಣ್ಯ ಸಮಸ್ಯೆ ಬಗೆಹರಿಸಲಾಗುತ್ತಿತ್ತು. ಇದೀಗ ಆ ಹಣವನ್ನು ಪ್ಯಾಕೆಟ್ ಹಾಲಿನ ದರಕ್ಕೆ ರೌಂಡ್ ಆಫ್ ಮಾಡಲಾಗಿದೆ. ಇದರಿಂದ ವ್ಯಾಪಾರಿಗಳು- ಗ್ರಾಹಕರ ಮಧ್ಯೆ ಜಟಾಪಟಿ ನಡೆಯದಂತೆ ತಡೆಯಲಾಗಿದೆ ಎಂದು ತಿಳಿದು ಬಂದಿದೆ.
ಹಣಕ್ಕೆ 10 ಮಿಲಿ ಹೆಚ್ಚುವರಿ ಹಾಲು ಮಾರಾಟ
ಹಾಲಿನ ದರ ಪರಿಷ್ಕರಣೆಯಿಂದ ಅರ್ಧ ಲೀಟರ್ ಟೋನ್ಡ್ ಹಾಲಿನ (ನೀಲಿ ಪ್ಯಾಕೆಟ್) 21.5 ರೂ.ಗೆ ನಿಗದಿ ಆಗಬೇಕಿತ್ತು. ಆದರೆ 10 ಮಿಲಿ ಹೆಚ್ಚುವರಿ ಹಾಲಿನ ಜತೆ 22 ರೂಪಾಯಿಗೆ ನೀಡಲಾಗುತ್ತಿದೆ. ವಿಶೇಷವಾದ ಶುಭಂ ಹಾಲು (ಕಿತ್ತಳೆ) 24 ರೂಪಾಯಿಗೆ ನಿಗದಿಯಾಗಬೇಕಿತ್ತು ಆದರೆ 10 ಮಿಲಿ ಹೆಚ್ಚುವರಿ ಹಾಲಿನೊಂದಿಗೆ 25 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವ್ಯಾಪಾರಿಗಳು ಮತ್ತು ಗ್ರಾಹಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅಂಗಡಿಗಳಲ್ಲಿ ವಾದ ವಿವಾದಗಳನ್ನು ತಪ್ಪಿಸಲು ಕೆಎಂಎಫ್ ಹೀಗೆ ನಿರ್ಧರಿಸಿದೆ. ಪ್ರತಿ ಅರ್ಧ ಲೀಟರ್ (500 ಮಿಲಿ) ಪ್ಯಾಕೆಟ್‌ನಲ್ಲಿ ಹೆಚ್ಚುವರಿ ಹಾಲು ಒದಗಿಸುವ ಮೂಲಕ ಬೆಲೆಗೆ ತಕ್ಕ ಹಾಲು ಒದಗಿಸಲಾಗುತ್ತಿದೆ. ಪ್ಯಾಕೆಟ್‌ಗಳ ಮೇಲೆ 'ಹೆಚ್ಚುವರಿ 10 ಮಿಲಿ' ಎಂದು ಮುದ್ರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.












Click it and Unblock the Notifications