ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ವಿ ಸ್ಟಾಕ್ ಬ್ರೋಕರಿಂಗ್‌ನಿಂದ ಹೂಡಿಕೆದಾರರಿಗೆ ದೋಖಾ!

|
Google Oneindia Kannada News

ಬೆಂಗಳೂರು ಸೆ. 14: ಆಂಧ್ರ ಮತ್ತು ತೆಲಂಗಾಣದಲ್ಲಿ ಹೂಡಿಕೆದಾರರ ಷೇರುಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾವಿರಾರು ಕೋಟಿ ಲೂಟಿ ಮಾಡಿರುವ ಕಾರ್ವಿ ಸ್ಟಾಕ್ ಬ್ರೋಕರಿಂಗ್ ಸಂಸ್ಥೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹಲವಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ನೀಡಿದ ದೂರಿನಿಂದ ಅಕ್ರಮ ಬೆಳಕಿಗೆ ಬಂದಿದ್ದು, ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿದೆ.

ಪ್ರಕರಣ ತನಿಖೆ ಆರಂಭಿಸುತ್ತಿದ್ದಂತೆ, ಕಾರ್ವಿ ಗ್ರೂಪ್‌ ಆಫ್ ಕಂಪನಿಯ ಸದಸ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಮಾರು ನೂರು ಕೋಟಿ ರೂ.ಗೂ ಅಧಿಕ ಹಣವನ್ನು ವಂಚನೆ ಮಾಡಿರುವುದನ್ನು ಸಿಸಿಬಿ ತನಿಖಾಧಿಕಾರಿ ಧರ್ಮೇಂದ್ರ ಪತ್ತೆ ಮಾಡಿದ್ದಾರೆ. ಈಗಾಗಲೇ ತೆಲಂಗಾಣದಲ್ಲಿ 2300 ಕೋಟಿ ರೂ. ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಕಾರ್ವಿ ಸ್ಟಾಕ್ ಬ್ರೋಕರಿಂಗ್ ಸಂಸ್ಥೆಯ ಅಕ್ರಮ ಇದೀಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕಾರ್ವಿ ಟ್ರೇಡಿಂಗ್ ಬ್ರೋಕರೇಜ್ ಕಂಪನಿ ಮೂಲಕ ಷೇರು ಖರೀದಿ ಮಾಡಿದ್ದಲ್ಲಿ ಸಾರ್ವಜನಿಕರು ಸಿಸಿಬಿ ಪೊಲೀಸರಿಗೆ ದೂರು ನೀಡಲು ಮನವಿ ಮಾಡಲಾಗಿದೆ.

Karvy stockbroking company Multi crore scam exposed by CCB Police

ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ: ಬಳ್ಳಾರಿ ಮೂಲದ ಉದ್ಯಮಿಯೊಬ್ಬರು ಲಕ್ಷಾಂತರ ರೂಪಾಯಿ ಹಣವನ್ನು ಕಾರ್ವಿ ಟ್ರೇಡಿಂಗ್ ಕಂಪನಿ ಮೂಲಕ ಹೂಡಿಕೆ ಮಾಡಿದ್ದರು. ಉದ್ಯಮಿಯ ಷೇರುಗಳನ್ನು ಆವರಿಗೆ ಗೊತ್ತಿಲ್ಲದೇ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಎತ್ತಿರುವ ಕಾರ್ವಿ ಬ್ರೋಕರಿಂಗ್ ಕಂಪನಿ ತನ್ನದೇ ಒಡೆತನದ ಬೇರೆ ಕಂಪನಿಯಲ್ಲಿ ಹೂಡಿಕೆ ಮಾಡಿತ್ತು. ಈ ಮೂಲಕ ಅಕ್ರಮ ವಹಿವಾಟು ನಡೆಸಿತ್ತು. ಬಳ್ಳಾರಿ ಮೂಲದ ಉದ್ಯಮಿ ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಾರ್ವಿ ಅಕ್ರಮವನ್ನು ಸಿಸಿಬಿ ತನಿಖೆಗೆ ವಹಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದು ಕಾರ್ವಿಯ ಅಕ್ರಮ ವಹಿವಾಟು ಬಯಲಿಗೆ ಎಳೆಯಲು ಮುಂದಾಗಿದ್ದಾರೆ.

Karvy stockbroking company Multi crore scam exposed by CCB Police

ತೆಲಂಗಾಣದಲ್ಲಿ ಬ್ಲೇಡ್: ದೇಶದ ಪ್ರತಿಷ್ಠಿತ ಷೇರು ಮಾರುಕಟ್ಟೆಯ ಬ್ರೋಕರೆಜ್ ಕಂಪನಿಗಳಲ್ಲಿ ಕಾರ್ವಿ ಕೂಡ ಒಂದು. ಹೈದರಾಬಾದ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಾರ್ವಿ ಕಂಪನಿ ಷೇರು ಮಾರುಕಟ್ಟೆ ಮೇಲೆ ಗ್ರಾಹಕರು ಹಣ ಹೂಡಿಸುವ ಬ್ರೋಕರೇಜ್ ಕಾರ್ಯ ಮಾಡುತ್ತಿತ್ತು. ಕೆಲ ವರ್ಷಗಳ ಹಿಂದೆಯಷ್ಟೇ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಹೂಡಿಕೆದಾರರ ಷೇರುಗಳನ್ನು ಯಾರಿಗೂ ಗೊತ್ತಾಗದಂತೆ ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆದು ಅಕ್ರಮ ವಹಿವಾಟು ನಡೆಸಿತ್ತು. ಸಾರ್ವಜನಿಕರ 2300 ಕೋಟಿ ರೂ.ಗೂ ಅಧಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿತ್ತು. ಮಾರ್ಗಸೂಚಿಗಳನ್ನು ಉಲ್ಲಂಘನೆ ಕುರಿತು ಸೆಬಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ವಿಯಿಂದ ಮೋಸಹೋದ ಸಾವಿರಾರು ಜನರು ದೂರು ದಾಖಲಿಸಿದರು. ಈ ಹಿನ್ನೆಲೆಯಲ್ಲಿ ಕಾರ್ವಿಯ ಅಕ್ರಮ ಬಯಲಿಗೆ ಬಂದಿತ್ತು. ಪ್ರಸ್ತುತ ಈ ಪ್ರಕರಣದ ತನಿಖೆ ತೆಲಂಗಾಣದಲ್ಲಿ ನಡೆಯುತ್ತಿದೆ.

Karvy stockbroking company Multi crore scam exposed by CCB Police

ಬೆಂಗಳೂರಿನಲ್ಲಿ ಕಚೇರಿ ಹೊಂದಿದ್ದ ಕಾರ್ವಿ ಬ್ರೋಕರೇಜ್ ಕಂಪನಿ ಮೂಲಕ ಸಾವಿರಾರು ಜನರು ಷೇರು ವಹಿವಾಟು ನಡೆಸಿದ್ದರು. ಪ್ರತಿಷ್ಠಿತರು ಹಾಗೂ ಉದ್ಯಮಿಗಳು ಖರೀದಿಸಿರುವ ಷೇರುಗಳನ್ನ ಬ್ಯಾಂಕ್ ನಲ್ಲಿ ಅಡವಿಟ್ಟು ಹಣವನ್ನು ದುರುಪಯೋಗ ಪಡಿಸಿಕೊಂಡಿದೆ. ಸಾವಿರಾರು ಕೋಟಿ ರೂಪಾಯಿ ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಐಎಂಎ ಜನರಿಂದ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿದರೆ, ಇಲ್ಲಿ ಹೂಡಿಕೆ ಮಾಡಿದವರ ಹಣವನ್ನು ವಂಚಿಸಲು ಕಾರ್ವಿ ಸ್ಮಾರ್ಟ್ ಹಾದಿ ಕಂಡುಕೊಂಡಿದೆ. ಇನ್ನು ಹೂಡಿಕೆದಾರರ ಅನುಮತಿ ಇಲ್ಲದೇ ಷೇರುಗಳನ್ನು ಅಡವಿಟ್ಟಿರುವ ಕಾರ್ವಿ ಕಂಪನಿ ಜತೆ ಶಾಮೀಲಾಗಿರುವ ಬ್ಯಾಂಕ್‌ನ ಅಧಿಕಾರಿಗಳಿಗೂ ಈ ಪ್ರಕರಣ ಮುಳುವಾಗುವ ಲಕ್ಷಣ ಗೋಚರಿಸುತ್ತಿದೆ. ಈ ಪ್ರಕರಣದಲ್ಲಿ ಕಾರ್ವಿ ಸ್ಟಾಕ್ ಬ್ರೋಕರೇಜ್ ಕಂಪನಿ ಪರ ಕೆಲಸ ಮಾಡಿದವರು, ಹೂಡಿಕೆ ಮಾಡಿಸಿದವರಿಗೆ ಸಿಸಿಬಿ ಬಂಧನದ ಭೀತಿ ಎದುರಾಗಿದೆ.

English summary
Karvy stock marketbroking scam in Bengaluru: CCB police have arrested karvy cheaters in the multi crore scam know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X