Vokkaliga Swamiji: ಒಕ್ಕಲಿಗ ಸ್ವಾಮೀಜಿ ಆರೋಗ್ಯ ವಿಚಾರಿಸಿ, ಅಭಯ ಕೊಟ್ಟ ಬಿಜೆಪಿ ನಾಯಕರು
ವಕ್ಫ್ ವಿಚಾರವಾಗಿ ಮಾತನಾಡುವಾಗ ಮುಸ್ಲಿಮರ ಮತದಾನದ ಹಕ್ಕನ್ನು ರದ್ದು ಮಾಡಬೇಕು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರು ವಿವಾದಕ್ಕೆ ಕಾರಣವಾಗಿದ್ದರು. ಬಳಿಕ ಅವರು ಕ್ಷಮೆ ಕೇಳಿದ್ದರೂ ದೂರಿನ ಮೇರೆಗೆ ಎಫ್‌ಐಆರ್ ಕೂಡ ದಾಖಲಾಗಿದೆ. ಇನ್ನು ವಿಚಾರಣಗೆ ಬರುವಂತೆ ಪೊಲೀಸರು ನೋಟಿಸ್ ನೀಡಿದ್ದು, ಅನಾರೋಗ್ಯ ಕಾರಣದಿಂದ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಈ ಹಿನ್ನೆಲೆ ಬಿಜೆಪಿ ನಾಯಕರ ನಿಯೋಗವು ಇಂದು ಸ್ವಾಮೀಜಿಯವರನ್ನು ಭೇಟಿ ಮಾಡಿ ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಅಲ್ಲದೆ ಈ ಕೇಸ್ ಸಂಬಂಧ ಕಾನೂನು ವಿಚಾರಗಳ ಬಗ್ಗೆ ಸ್ವಾಮೀಜಿಯವರೊಂದಿಗೆ ಚರ್ಚೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಸಿ.ಎನ್.ಅಶ್ವತ್ಥ ನಾರಾಯಣ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಸ್ವಾಮೀಜಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.

ವಕ್ಫ್ ಹೋರಾಟದ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪರಮಪೂಜ್ಯ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರು ನೀಡಿರುವ ಹೇಳಿಕೆಯೊಂದಕ್ಕೆ ಎಫ್‌ಐಆರ್ ದಾಖಲಿಸಿ, ಸ್ವಾಮೀಜಿಗಳು ದೈಹಿಕ ಅಸ್ವಸ್ಥತೆ ಹೊಂದಿದ್ದರೂ ಕಾನೂನಿನ ಕಟಕಟೆಗೆ ಎಳೆಯುವ ಕಾಂಗ್ರೆಸ್ ಸರ್ಕಾರದ ದುಷ್ಟ ಸಂಚು ಖಂಡನೀಯ ಎಂದು ವಿಜಯೇಂದ್ರ ಹೇಳಿದ್ದಾರೆ.
ಚಂದ್ರಶೇಖರನಾಥ ಸ್ವಾಮೀಜಿ ಅವರೊಂದಿಗೆ ಬಿಜೆಪಿ ಸದಾ ನಿಲ್ಲಲಿದೆ ಎಂಬ ಅಭಯ ನೀಡಿದ್ದಾರೆ. ಪೂಜ್ಯ ಶ್ರೀಗಳು ಸೌಹಾರ್ದತೆಯ ಪ್ರತೀಕವಾಗಿ ಸೂಕ್ತ ಸ್ಪಷ್ಟನೆ ನೀಡಿದ್ದಾಗ್ಯೂ ಅವರ ವಿರುದ್ಧ ದಾಖಲಾಗಿರುವ ರಾಜಕೀಯ ಪ್ರೇರಿತ ಎಫ್ಐಆರ್ ಶ್ರೀಗಳಿಗೆ ಕಿರುಕುಳ ನೀಡುವ ದುರುದ್ದೇಶ ಹೊಂದಿದಂತಿದೆ. ಎಫ್.ಐ.ಆರ್ ರದ್ದುಪಡಿಸದೇ ವಿಷಯವನ್ನು ಮುಂದುವರೆಸಿದರೆ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾದೀತು ಎಂದು ಎಚ್ಚರಿಸ ಬಯಸುವೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಅಶ್ವತ್ಥ್ ನಾರಾಯಣ ಮಾತನಾಡಿ, ಕಾಂಗ್ರೆಸ್ ನಾಯಕರಿಗೆ ಯಾವುದೋ ಒಂದು ಸಂದರ್ಭದಲ್ಲಿ ಕಾನೂನು ನೆನಪಾಗುತ್ತೆ. ಹಾಗಾಗಿ ಮನಬಂದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುತ್ತಾರೆ. ಇವರೇ ಹೀಗೆ ಮಾತನಾಡುವುದಾದರೆ, ಇವರ ಅಧೀನದಲ್ಲಿರುವವರು ಇನ್ಯಾವ ರೀತಿ ಮಾತನಾಡ್ತಾರೆ ಎಂದು ಗುಡುಗಿದ್ದಾರೆ.
ಸ್ವಾಮೀಜಿಗಳು ನಿಮ್ಮಂತೆ ಭಂಡರೇನಲ್ಲ. ಅವರ ಮೇಲೆ ಕೇಸ್ ಹಾಕಿದ್ದೀರಿ, ಬಂದು ಹೇಳಿಕೆ ತೆಗೆದುಕೊಳ್ಳಿ ಎಂದು ಸವಾಲ್ ಹಾಕಿದ್ದಾರೆ. ಸರ್ಕಾರದ ನಡೆಯನ್ನ ಜನರು ಯಾವ ಕಾರಣಕ್ಕೂ ಒಪ್ಪಲ್ಲ. ಈಗ ಹೋಗಿ ಒಕ್ಕಲಿಗರ ಮಠದಲ್ಲೇ ನಿಮಗೆ ಬೇಕಾದ ಉತ್ತರ ತೆಗೆದುಕೊಳ್ಳಿ. ನಿಮ್ಮ ಬೆದರಿಕೆಗೆ ಒಕ್ಕಲಿಗ ಸಮಾಜದವರು ಹೆದರುವುದಿಲ್ಲ. ಕಾನೂನು ಏನು ಎಂಬುದು ನಮಗೂ ಗೊತ್ತಿದೆ. ಒಕ್ಕಲಿಗರು ನಿಮ್ಮ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಸಮಯ ಬಂದಾಗ ಉತ್ತರ ಕೊಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications