ಎಲ್ಲಾ ಇಲಾಖೆಗಳಲ್ಲೂ ಕನ್ನಡ ಬಳಕೆ ಕಡ್ಡಾಯ
ಬೆಂಗಳೂರು, ಅ, 31 : ಕರ್ನಾಟಕ ಸರ್ಕಾರ ಲಭ್ಯವಿರುವ ಆಧುನಿಕ ತಂತ್ರಜ್ಞಾನಗಳ ನೆರವಿನೊಂದಿಗೆ ಜನ ಸಾಮಾನ್ಯರಿಗೆ ಆಡಳಿತದ ಕುರಿತು ಸಕಲ ಮಾಹಿತಿ ನೀಡಲು ಸಿದ್ಧವಾಗಿದೆ, ಅದು ಕನ್ನಡ ಭಾಷೆಯಲ್ಲಿ. ಹೌದು, ಎಲ್ಲಾ ಇಲಾಖೆಗಳು ಕನ್ನಡದಲ್ಲಿ ಅಂತರ್ಜಾಲ ಹೊಂದಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಎಲ್ಲಾ ಹಂತಗಳಲ್ಲಿಯೂ ಕನ್ನಡ ಬಳಕೆ ಕಡ್ಡಾಯಗೊಳಿಸಿ, ಎಲ್ಲಾ ಇಲಾಖೆಗಳ ಮಾಹಿತಿಯನ್ನು ಕನ್ನಡದಲ್ಲಿ ಜನರಿಗೆ ತಲುಪಿಸಲು ಸರ್ಕಾರ ಯೋಜನೆ ರೂಪಿಸಿತ್ತು. ಅದರಂತೆ ಎಲ್ಲಾ ಇಲಾಖೆಗಳ ವೆಬ್ ಸೈಟ್ ಗಳಲ್ಲೂ ಕನ್ನಡದಲ್ಲಿ ಮಾಹಿತಿ ದೊರೆಯಬೇಕು ಎಂದು ಆದೇಶಿಸಿತ್ತು.

ಆದರೆ, ಸರ್ಕಾರದ ಆದೇಶದ ಹೊರತಾಗಿಯೂ ಕೆಲವು ಇಲಾಖೆಗಳು ಮಾಹಿತಿಯನ್ನು ಇಂಗ್ಲಿಷ್ ನಲ್ಲಿಯೇ ಪ್ರಕಟಿಸುತ್ತಿದ್ದವು. ಇದನ್ನು ಗಮನಿಸಿರುವ ಸರ್ಕಾರ, ಎಲ್ಲಾ ಇಲಾಖೆಗಳು ಎರಡು ತಿಂಗಳವೊಳಗೆ ಕನ್ನಡದಲ್ಲಿಯೂ ಮಾಹಿತಿ ಒದಗಿಸಬೇಕು ಎಂದು ಹೇಳಿದೆ.
ಆಯಾ ಇಲಾಖೆಗಳು ತಮ್ಮ ಯೋಜನೆಗಳ ಬಗ್ಗೆ ಇಂಗ್ಲಿಷ್ ನಲ್ಲಿ ನೀಡಿರುವ ಮಾಹಿತಿಯನ್ನು ಅನುವಾದಿಸಿ ಕನ್ನಡದಲ್ಲಿ ನೀಡಬೇಕು. ಎಲ್ಲಾ ಇಲಾಖೆಯ ವೆಬ್ ಸೈಟ್ ಗಳಲ್ಲೂ ಕನ್ನಡ ಕಡ್ಡಾಯವಾಗಿ ಇರಲೇ ಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಎರಡು ತಿಂಗಳ ನಂತರ ಯಾವುದೇ ಇಲಾಖೆ ಈ ಆದೇಶವನ್ನು ಉಲ್ಲಂಘಿಸಿ, ಇಂಗ್ಲಿಷ್ ನಲ್ಲಿಯೇ ಮಾಹಿತಿ ನೀಡಿದರೆ ಅದನ್ನು ಕರ್ತವ್ಯ ಲೋಪವೆಂದು ಪರಿಗಣಿಸಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎರಡು ದಿನಗಳ ಹಿಂದೆ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದ ಎಸ್.ವಿ.ರಂಗನಾಥ್ ಎಲ್ಲಾ ಇಲಾಖೆಗಳಿಗೂ ಸುತ್ತೋಲೆ ಕಳುಹಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ಕನ್ನಡದಲ್ಲಿ ಮಾತನಾಡಬೇಕು, ಇಲಾಖೆಯ ಮಾಹಿತಿಗಳು ಕನ್ನಡದಲ್ಲಿ ದೊರೆಯುವಂತಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಕೆಲವು ದಿನಗಳ ಹಿಂದೆ ಹೇಳಿದ್ದರು. ತಮ್ಮ ಮಾತಿನಂತೆ ಆಡಳಿತದಲ್ಲಿ ಕನ್ನಡ ಜಾರಿಗೆ ತರುವ ಪ್ರಯತ್ನಕ್ಕೆ ಸಿಎಂ ಚಾಲನೆ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇದು ಕನ್ನಡಿಗರಿಗೆ ನಿಜಕ್ಕೂ ಸಿಹಿ ಸುದ್ದಿ.












Click it and Unblock the Notifications