ಶಾಸಕರಿಗೆ ಬೇಕಂತೆ ಮತ್ತೊಂದು ಸುತ್ತು ವೇತನ ಹೆಚ್ಚಳ
ಬೆಂಗಳೂರು, ಮೇ 12: ಎಲ್ಲ ರಾಜ್ಯಗಳ ಪೈಕಿ ನಮ್ಮ ಕರ್ನಾಟಕದ ಶಾಸಕರು ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಜತೆಗೆ ಕೇವಲ ಮೂರು ವರ್ಷಗಳ ಹಿಂದಷ್ಟೇ ಶೇ. 73ರಷ್ಟು ಭಾರಿ ಪ್ರಮಾಣದ ವೇತನ ಏರಿಕೆಯನ್ನೂ ಮಾಡಿದ್ದರು. ಆದರೆ ಇದೀಗ ಅದನ್ನು ಡಬಲ್ ಮಾಡಿ ಎಂದು ಮತ್ತೆ ಪಟ್ಟು ಹಿಡಿದಿದ್ದಾರೆ. ಅಂದಹಾಗೆ, ಕಳೆದ 10 ವರ್ಷಗಳಲ್ಲಿ ಶಾಸಕರ ವೇತನ, ಭತ್ಯೆ ಮೂರೂವರೆ ಪಟ್ಟು ಹೆಚ್ಚಾಗಿದೆ.
ಕಳೆದ ಫೆಬ್ರವರಿಯಲ್ಲೇ ನಡೆದ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ವೇತನ ದುಪ್ಪಟ್ಟು ಮಾಡುವಂತೆ ಪಕ್ಷಾತೀತವಾಗಿ ಶಾಸಕರು ಮನವಿ ಸಲ್ಲಿಸಿದ್ದಾರೆ. ಸದ್ಯಕ್ಕೆ ವೇತನ ಹೆಚ್ಚಳ ಪ್ರಸ್ತಾಪ ಬೇಡ ಎಂದು ಮೌಖಿಕವಾಗಿ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿರುವ ಸ್ಪೀಕರ್, ವೇತನ ಹೆಚ್ಚಳ ಬೇಡಿಕೆಗೆ ಬ್ರೇಕ್ ಹಾಕಿದ್ದಾರೆ ಎಂದು ಗೊತ್ತಾಗಿದೆ.

2011ರ ಜೂನ್‌ನಲ್ಲಿ ಹೊಸ ಕಾಯಿದೆ ರಚಿಸಿ ಶಾಸಕರ ವೇತನವನ್ನು ಶೇ. 73ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ ಕೇವಲ 3 ವರ್ಷಗಳಲ್ಲಿ ಮತ್ತೊಮ್ಮೆ ವೇತನ ಪರಿಷ್ಕರಣೆಗೆ ಬೇಡಿಕೆ ಮಂಡಿಸಿರುವುದು ಜನತೆಯ ಹುಬ್ಬೇರಿಸಿದೆ.
(ಬೆಲೆ ಏರಿಕೆಗೆ ತತ್ತರ:ಕರ್ನಾಟಕ ಬಂದ್ ಗೆ ಸಜ್ಜಾಗಿ)
ಹರಿಯಾಣ ಶಾಸಕರು ಎರಡನೇ ಸ್ಥಾನದಲ್ಲಿ 1.05 ಲಕ್ಷ ರೂ. ವೇತನ, ಭತ್ಯೆ ಪಡೆಯುತ್ತಿದ್ದಾರೆ. ನೆರೆಯ ಆಂಧ್ರ ಪ್ರದೇಶದಲ್ಲಿ 95 ಸಾವಿರ ರೂ, ತಮಿಳುನಾಡು ಶಾಸಕರು 56 ಸಾವಿರ ರೂ, ಕೇರಳದ ಶಾಸಕರು 47 ಸಾವಿರ ರೂ. ಪಡೆಯುತ್ತಿದ್ದಾರೆ.
ನಮ್ಮ ಶಾಸಕರ ಹಿಂದಿನ ಲೆಕ್ಕಾಚಾರ ಹೀಗಿತ್ತು:
2011ರಲ್ಲಿ ವೇತನ ಹೆಚ್ಚಳ ಮಾಡಿದಾಗ ವೇತನ ಮೊತ್ತ ಏಕಾಏಕಿ 20 ಸಾವಿರ ರೂ.ಗೆ ಅಧಿಕಗೊಳಿಸಲಾಗಿತ್ತು. ವೇತನ ಹೆಚ್ಚಳದ ದೂರವಾಣಿ ಭತ್ಯೆಯನ್ನು 7,500 ರೂ. ಗಳಿಂದ 15 ಸಾವಿರ ರೂ.ಗೆ, ಕ್ಷೇತ್ರ ಭತ್ಯೆಯನ್ನು 3,500 ರೂ ನಿಂದ 15 ಸಾವಿರ ರೂ.ಗೆ, ಅಂಚೆ ವೆಚ್ಚವನ್ನು 1 ಸಾವಿರ ರೂ. ನಿಂದ 5 ಸಾವಿರ ರೂ. ಹಾಗೂ ಸಹಾಯಕನ ವೇತನವನ್ನು 1 ಸಾವಿರ ರೂ. ಗಳಿಂದ 10 ಸಾವಿರ ರೂ. ಗೆ ಹೆಚ್ಚಿಸಲಾಗಿತ್ತು. ಒಟ್ಟಾರೆ 22 ಸಾವಿರ ರೂ.ಗಳಿದ್ದ ವೇತನ, ಭತ್ಯೆ ಪ್ರಮಾಣ 65 ಸಾವಿರ ರೂ. ಗೆ ಏರಿಕೆಯಾಗಿತ್ತು. ಅಂದರೆ ಒಟ್ಟು 1 ಲಕ್ಷ 6,666 ರೂ. ಪಡೆಯುತ್ತಿದ್ದಾರೆ.
ಇನ್ನೂ ಏನೇನು ಸಿಗುತ್ತದೆ: ಬೆಂಗಳೂರಿನಲ್ಲಿ ಓಡಾಡಲು ಉಚಿತ ಕಾರಿನ ವ್ಯವಸ್ಥೆ, ಆರೋಗ್ಯ ಹದಗೆಟ್ಟರೆ ತಮಗೆ ಮಾತ್ರವಲ್ಲದೇ ಕುಟುಂಬದವರಿಗೂ ಮರುಪಾವತಿ ಸೌಲಭ್ಯ, ಒಂದು ಕೊಠಡಿಯಾದರೆ 100 ರೂ. ಬಾಡಿಗೆ, ಬಂಗಲೆಯಂತಹ ಮೂರು ಕೊಠಡಿಗಳಿಗಿರುವ ಕುಟುಂಬದ ಫ್ಲಾಟ್ ಆದರೆ 300 ರೂ. ಬಾಡಿಗೆ, ಕಂಪ್ಯೂಟರ್ ಖರೀದಿಗೆ ಹಣ, ಕಾರು ಖರೀದಿಗೆ ಶೇ.7ರ ಬಡ್ಡಿದರದಲ್ಲಿ ಸಾಲ, ನಿವೃತ್ತಿಯ ನಂತರವೂ ತಿಂಗಳಿಗೆ 25 ಸಾವಿರ ರೂ. ನಿವೃತ್ತಿ ವೇತನ, ವೈದ್ಯ ಸೌಲಭ್ಯ ಇವೆಲ್ಲವೂ ಲಭ್ಯ.
ಈಗಿನ ವೇತನ ಹೆಚ್ಚಳ ಲೆಕ್ಕಾಚಾರ:
ಈಗಿರುವ 20 ಸಾವಿರ ರೂ. ವೇತನವನ್ನು 40 ಸಾವಿರ ರೂ. ಗೆ ಹೆಚ್ಚಿಸುವಂತೆ ಕೋರಲಾಗಿದೆ. ಒಂದು ವೇಳೆ 30 ಸಾವಿರ ರೂ ನಷ್ಟಾದರೂ ಏರಿಕೆಯಾದರೂ ಉಳಿದ ಭತ್ಯೆಗಳೂ ಹೆಚ್ಚಳವಾಗುತ್ತವೆ. ಇದರಿಂದ ಒಟ್ಟಾರೆ ವೇತನ, ಭತ್ಯೆ ಒಂದೂವರೆ ಪಟ್ಟು ಹೆಚ್ಚಾಗಲಿದೆ ಎಂಬ ಲೆಕ್ಕಾಚಾರವಿದೆ.












Click it and Unblock the Notifications