"ಮಹಿಳೆಯರನ್ನು ಎಲ್ಲೂ ನೆಮ್ಮದಿಯಾಗಿ ಇರಲು ಬಿಡಲ್ವಾ?": 'ಬೆಂಗಳೂರು ಮೆಟ್ರೋ ಚಿಕ್ಸ್' ಅಡ್ಮಿನ್‌ಗೆ ಹೈಕೋರ್ಟ್ ಛೀಮಾರಿ, ಅರ್ಜಿ ವಜಾ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರ ವಿಡಿಯೋಗಳನ್ನು ಅವರ ಗಮನಕ್ಕೆ ಬಾರದಂತೆ ಚಿತ್ರಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ 'ಬೆಂಗಳೂರು ಮೆಟ್ರೋ ಚಿಕ್ಸ್' (Bangalore Metro Chicks) ಇನ್‌ಸ್ಟಾಗ್ರಾಮ್ ಖಾತೆಯ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಈ ಪ್ರಕರಣದಲ್ಲಿ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ಈ ಖಾತೆಯ ಅಡ್ಮಿನ್ ಎನ್ನಲಾದ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇದೀಗ ವಜಾಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಆರೋಪಿಯ ಕೃತ್ಯದ ಬಗ್ಗೆ ಆಕ್ರೋಶಗೊಂಡ ನ್ಯಾಯಮೂರ್ತಿಗಳು, "ನೀವು ಮಹಿಳೆಯರನ್ನು ಮೆಟ್ರೋದಲ್ಲಿಯೂ ಸುರಕ್ಷಿತವಾಗಿರಲು ಬಿಡುವುದಿಲ್ಲವೇ? ನೀವು ಮಹಿಳೆಯರನ್ನು ಎಲ್ಲಿಯೂ ನೆಮ್ಮದಿಯಾಗಿರಲು ಬಿಡುವುದಿಲ್ಲ. ಮಹಿಳೆಯರ ಮುಂಭಾಗ ಮತ್ತು ಹಿಂಭಾಗದಿಂದ ಅಸಭ್ಯವಾಗಿ ಚಿತ್ರಗಳನ್ನು ತೆಗೆದು, ಆ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡುತ್ತೀರಾ? ನೀವು ಎಂಥಹ ಮನುಷ್ಯರು? ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

High Court

ವರದಿಗಳ ಪ್ರಕಾರ ಮಹಿಳಾ ಪ್ರಯಾಣಿಕರ ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ ಆರೋಪದ ಮೇಲೆ ಕರಿಬೋನಹಳ್ಳಿ ನಿವಾಸಿ, 27 ವರ್ಷದ ಅಕೌಂಟೆಂಟ್ ಬಿ.ಕೆ. ದಿಗಂತ್ ಎಂಬಾತನನ್ನು ಕಳೆದ 2025ರ ಮೇ ತಿಂಗಳಲ್ಲಿ ಪೊಲೀಸರು ಬಂಧಿಸಿದ್ದರು. ಆ ಸಮಯದಲ್ಲಿ, ಆತನ ಇನ್‌ಸ್ಟಾಗ್ರಾಮ್ ಖಾತೆಯು 6,000ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಮತ್ತು 1,000ಕ್ಕೂ ಹೆಚ್ಚು ಟೆಲಿಗ್ರಾಮ್ ಚಂದಾದಾರರನ್ನು ಹೊಂದಿತ್ತು. ಆತನ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳು ಅತಿ ಹೆಚ್ಚಿನ ವೀಕ್ಷಣೆ ಪಡೆಯುತ್ತಿದ್ದವು ಎಂಬುದು ತನಿಖೆಯಿಂದ ತಿಳಿದುಬಂದಿತ್ತು.

ಪ್ರಸ್ತುತ ಈ ಪ್ರಕರಣದ ಕ್ರಿಮಿನಲ್ ಪ್ರಕ್ರಿಯೆಗಳು ಸಮನ್ಸ್ ಹಂತದಲ್ಲಿದ್ದು, ಬೆಂಗಳೂರಿನ ಹೆಚ್ಚುವರಿ ಸಿಜೆಎಂ ನ್ಯಾಯಾಲಯದಲ್ಲಿ ದಿಗಂತ್ ವಿರುದ್ಧ ವಿಚಾರಣೆ ನಡೆಯುತ್ತಿದೆ. ಬನಶಂಕರಿ ಪೊಲೀಸ್ ಠಾಣೆಯು ಸ್ವಯಂಪ್ರೇರಿತ ದೂರಿನ ಮೇಲೆ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78(2), 238(C) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

ಜೂನ್‌ನಿಂದ ಬೆಂಗಳೂರಿಗರಿಗೆ ಸಿಗಲಿದೆ 'ಒನ್ ನೇಷನ್ ಒನ್ ಕಾರ್ಡ್' ಸೌಲಭ್ಯ: ಮೆಟ್ರೋ, ಬಸ್‌ಗೆ ಒಂದೇ ಕಾರ್ಡ್
ಜೂನ್‌ನಿಂದ ಬೆಂಗಳೂರಿಗರಿಗೆ ಸಿಗಲಿದೆ 'ಒನ್ ನೇಷನ್ ಒನ್ ಕಾರ್ಡ್' ಸೌಲಭ್ಯ: ಮೆಟ್ರೋ, ಬಸ್‌ಗೆ ಒಂದೇ ಕಾರ್ಡ್

ವಿಚಾರಣೆ ವೇಳೆ ಆರೋಪಿಯ ಪರ ವಕೀಲರು, ಆರೋಪಿಯು ಮಹಿಳೆಯರ ಯಾವುದೇ ಅಶ್ಲೀಲ ಫೋಟೋಗಳನ್ನು ತೆಗೆದಿಲ್ಲ, ಇದರಲ್ಲಿ ಯಾವುದೇ ಅಪರಾಧವಿಲ್ಲ ಮತ್ತು ತನಿಖಾಧಿಕಾರಿಯೇ ದೂರುದಾರರಾಗಿದ್ದಾರೆ ಎಂಬ ತಾಂತ್ರಿಕ ಅಂಶವನ್ನು ಮುಂದಿಟ್ಟರು. ಆದರೆ ನ್ಯಾಯಾಲಯವು ಇದನ್ನು ಕಟ್ಟುನಿಟ್ಟಾಗಿ ನಿರಾಕರಿಸಿತು. "ಯಾವುದೇ ತಾಂತ್ರಿಕ ಕಾರಣಗಳು ನಿಮ್ಮ ಈ ಕೃತ್ಯವನ್ನು ಸಮರ್ಥಿಸಲಾಗದು... ಕೆಲವು ವಿಷಯಗಳಲ್ಲಿ ನಾವು ಕೇವಲ ತಾಂತ್ರಿಕತೆಗಳ ಆಧಾರದ ಮೇಲೆ ಅಪರಾಧದ ತೀವ್ರತೆಯನ್ನು ಅಳೆಯುವುದನ್ನು ನಿಲ್ಲಿಸುವ ಸಮಯ ಬಂದಿದೆ" ಎಂದು ನ್ಯಾಯಾಲಯ ಹೇಳಿ, ಅರ್ಜಿಯನ್ನು ವಜಾಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+