ನಮ್ಮ ಮೆಟ್ರೋ ಹಳಿ ನಿರ್ಮಾಣ: 138 ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ
ಬೆಂಗಳೂರು, ಫೆಬ್ರವರಿ 10: ನಮ್ಮ ಮೆಟ್ರೋ ರೈಲು ಹಳಿ ನಿರ್ಮಾಣ ಕಾಮಗಾರಿಗೆ ತೊಡಕಾಗಿರುವ 138 ಮರಗಳನ್ನು ಕಡಿಯಲು ಕರ್ನಾಟಕ ಹೈಕೋರ್ಟ್ ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿದೆ.
ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ ದತ್ತಾತ್ರೇಯ ದೇವರೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ನಡೆಸಿತು.
"ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಅನುಸರಿಸಬೇಕು. ಗಿಡ ನೆಡುವುದು ಮತ್ತು ಪರಿಸರದ ಮೇಲಿನ ಪರಿಣಾಮದ ಕುರಿತು ಸ್ಥಿತಿಗತಿ ವರದಿ ಸಲ್ಲಿಸಬೇಕು" ಎಂಬ ಷರತ್ತನ್ನು ಬಿಎಂಆರ್‌ಸಿಎಲ್‌ಗೆ ಪೀಠವು ವಿಧಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರದೀಪ್ ನಾಯಕ್ ಅವರು "ಮರಗಳನ್ನು ಕಡಿಯುವುದರಿಂದ ಆಗುವ ದುಷ್ಪರಿಣಾಮ ಮತ್ತು ಹೊಸ ಗಿಡಗಳನ್ನು ನೆಡುವುದರ ಕುರಿತು ತಜ್ಞರ ಸಮಿತಿಯು ವರದಿ ಸಲ್ಲಿಸಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. 2019ರಲ್ಲಿ ಸಿದ್ಧಪಡಿಸಿದ್ದ ಪರಿಸರದ ಮೇಲಿನ ಪರಿಣಾಮ ವಿಶ್ಲೇಷಣಾ ವರದಿಯನ್ನು ಸಮಿತಿ ಸಲ್ಲಿಸಿದೆ" ಎಂದರು.
ಬಿಎಂಆರ್‌ಸಿಎಲ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು "ಮರ ಕಡಿದ ಬಳಿಕ ಪರಿಸರದ ಮೇಲಿನ ಪರಿಣಾಮ ವರದಿ ಸಿದ್ಧಪಡಿಸಲು ಎರಡು ವರ್ಷಗಳು ಬೇಕಾಗುತ್ತದೆ. ಹೀಗಾಗಿ, ಹಿಂದಿನ ವರದಿಯನ್ನು ಸಲ್ಲಿಸಲಾಗಿದೆ" ಎಂದರು.
"ಅದಾಗ್ಯೂ, ಹೊಸದಾಗಿ ಪರಿಸರದ ಮೇಲಿನ ಪರಿಣಾಮದ ಕುರಿತು ವಿಶ್ಲೇಷಣಾ ವರದಿ ಸಿದ್ಧಪಡಿಸಲಾಗುವುದು. ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಮೆಟ್ರೊ ಯೋಜನೆ ತಡವಾಗುತ್ತಿದ್ದು, ವೆಚ್ಚವೂ ಹೆಚ್ಚಾಗುತ್ತಿದೆ" ಎಂದರು.
ಈ ಹಿಂದೆ ನಾಗವಾರ - ಗೊಟ್ಟಿಗೆರೆ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕಾಗಿ 577 ಮರಗಳನ್ನು ಕತ್ತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್ ಸಿಎಲ್) ಗುರುವಾರ ಕರ್ನಾಟಕ ಹೈಕೋರ್ಟ್ ಅನುಮತಿಸಿತ್ತು. ಕಾಮಗಾರಿ ವಿಳಂಬದಿಂದ ಪ್ರತಿದಿನ 2 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದ ನಿಗಮಕ್ಕೆ ನ್ಯಾಯಾಲಯದ ಆದೇಶದಿಂದ ಅನುಕೂಲವಾಗಿತ್ತು.
ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ ದತ್ತಾತ್ರೇಯ ದೇವರೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ನಡೆಸಿತ್ತು.
ಸುದೀರ್ಘವಾಗಿ ವಾದ - ಪ್ರತಿವಾದ ಆಲಿಸಿದ ಪೀಠವು ''ತಜ್ಞರ ಸಮಿತಿ ವರದಿಯಂತೆ ಬಿಎಂಆರ್‌ಸಿಎಲ್ ನವೆಂಬರ್ 26ರಂದು ಸಲ್ಲಿಸಿರುವ ಜ್ಞಾಪನಾ ಪತ್ರದಂತೆ 577 ಮರಗಳನ್ನು ಕತ್ತರಿಸಬಹುದಾಗಿದೆ. ಜೊತೆಗೆ 18 ಮರಗಳನ್ನು ಸ್ಥಳಾಂತರ ಮಾಡಬೇಕು ಮತ್ತು ಕತ್ತರಿಸುವ ಮರಗಳಿಗೆ ಪರ್ಯಾಯವಾಗಿ ತಜ್ಞರ ಸಮಿತಿ ಸೂಚನೆಯಂತೆ ಗಿಡ ನೆಡಬೇಕು. ನಿಗಮವು ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕು ಮತ್ತು ಆ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸಬೇಕು '' ಎಂದು ಆದೇಶಿಸಿತ್ತು.
"ಮರಗಳನ್ನು ಕತ್ತರಿಸುವ ಬಗ್ಗೆ ಪರಿಶೀಲನೆ ನಡೆಸಲು ನ್ಯಾಯಾಲಯ ನೇಮಿಸಿದ್ದ ತಾಂತ್ರಿಕ ತಜ್ಞರ ಸಮಿತಿಯ (ಟಿಇಸಿ) ವರದಿಯನ್ನು ಪೀಠವು ಒಪ್ಪಲಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಮತ್ತು ಮರ ತಜ್ಞರ ಸಮಿತಿ (ಟಿಇಸಿ) ನೀಡುವ ಅಂಕಿ ಸಂಖ್ಯೆಗೆ ಸ್ವಲ್ಪ ವ್ಯತ್ಯಾಸವಿದೆ ಎಂಬ ಕಾರಣಕ್ಕೆ, ಟಿಇಸಿ ಸರಿಯಾಗಿ ಮರಗಳನ್ನು ಪರಿಶೀಲಿಸಿಲ್ಲ ಎಂದು ಹೇಳಲಾಗದು.
2016ರಲ್ಲಿ ಸಿದ್ಧಪಡಿಸಲಾಗಿದ್ದ ಡಿಪಿಆರ್‌ಗೂ ಮತ್ತು 2019ರಲ್ಲಿ ಟಿಇಸಿ ಪರಿಶೀಲನೆ ನಡೆಸಿದಾಗ ಇದ್ದ ಮರಗಳ ಸಂಖ್ಯೆಗೂ ಹೆಚ್ಚು ಕಡಿಮೆ ಆಗಿರಬಹುದು. ಅದನ್ನೇ ದೊಡ್ಡ ವಿಚಾರ ಮಾಡುವ ಅಗತ್ಯವಿಲ್ಲ''ಎಂದು ಪೀಠ ಅಭಿಪ್ರಾಯಪಟ್ಟಿತ್ತು.
ನಾಗವಾರ-ಗೊಟ್ಟಿಗೆರೆ ಮೆಟ್ರೊ ಮಾರ್ಗದಲ್ಲಿ ಮರಗಳನ್ನು ಕತ್ತರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿದಾರರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಕರ್ನಾಟಕ ಮರ ಸಂರಕ್ಷಣಾ ಕಾಯಿದೆ 1976 ಮತ್ತು ಕರ್ನಾಟಕ ಮರ ಸಂರಕ್ಷಣಾ ನಿಯಮ 1977ಗೆ ವಿರುದ್ಧವಾಗಿ ಮರಗಳನ್ನು ಕತ್ತರಿಸಲಾಗುತ್ತಿದೆ. ಇದು ಕಾನೂನುಬಾಹಿರ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಮಾಹಿತಿ ಕೃಪೆ(ಬಾರ್ & ಬೆಂಚ್)












Click it and Unblock the Notifications