ನ.2ರಂದು ಯಡಿಯೂರಪ್ಪ ಸರ್ಕಾರಕ್ಕೆ 100 ದಿನ
ಬೆಂಗಳೂರು, ಅಕ್ಟೋಬರ್ 30: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುವ ನವೆಂಬರ್ 2ರಂದು ಮೊದಲ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಉದ್ದೇಶಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಡಳಿತಾರೂಢ ಬಿಜೆಪಿ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಸರಳವಾಗಿ ಸರ್ಕಾರದ ಮೊದಲ ನೂರು ದಿನದ ಆಚರಣೆಯನ್ನು ನಡೆಸಲು ಚಿಂತನೆ ನಡೆಯುತ್ತಿದೆ. ಸರ್ಕಾರದಿಂದ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಪ್ರವಾಹ , ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿರುವ ಈ ವೇಳೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಮುಖ್ಯವೇ ಹೊರತು ಸಂಭ್ರಮಾಚರಣೆ ಅಲ್ಲ, ಹಾಗೆ ಸಂಭ್ರಮಾಚರಣೆ ಮಾಡಿದಲ್ಲಿ ಅದು ಟೀಕೆಗೊಳಗಾಗಬಹುದು ಎಂಬ ನಿಲುವಿಗೆ ಯಡಿಯೂರಪ್ಪ ಬಂದಂತಿದೆ.

ಈ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಹೋದ್ಯೋಗಿ ಸಚಿವರೊಂದಿಗೆ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ, ಸದ್ಯದ ಮಾಹಿತಿ ಅನುಸಾರ ಸಂಭ್ರಮಾಚರಣೆ ಬೇಡ ಎಂಬ ನಿಲುವಿಗೆ ಬರಲಾಗಿದೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಇನ್ನೇನು ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿದೆ, ಖಂಡಿತವಾಗಿ ಅಧಿಕಾರವನ್ನು ಪೂರ್ಣಾವಧಿವರೆಗೆ ನಡೆಸಿಕೊಂಡ ಹೋಗುತ್ತೇವೆ ಎನ್ನುವ ವಿಶ್ವಾಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೊಂದಿದ್ದಾರೆ.












Click it and Unblock the Notifications