ಬಿಎಂಪಿ ಬಜೆಟ್‌ಗೆ ಬೊಮ್ಮಾಯಿ ಸರ್ಕಾರದಿಂದ ಹೆಚ್ಚುವರಿ 377 ಕೋಟಿ ರು ಅನುದಾನ
ಬೆಂಗಳೂರು, ಮೇ 7: 2022-23ನೇ ಸಾಲಿನ ಬಿಬಿಎಂಪಿ ಆಯವ್ಯಯಕ್ಕೆ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮಾರ್ಚ್ 31ರ ತಡ ರಾತ್ರಿ ಬಿಬಿಎಂಪಿ ಮಂಡಿಸಿದ್ದ 10,480 ಕೋಟಿ ಗಾತ್ರದ ಬಜೆಟ್ ಅನ್ನು 10,858 ಕೋಟಿಗೆ (377.50 ಕೋಟಿ ರೂ.) ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ. ಬಿಬಿಎಂಪಿ ವಿಶೇಷ ಹಣಕಾಸು ಆಯುಕ್ತೆ ತುಳಸಿ ಅವರು ಮಾರ್ಚ್ 31ರ ತಡ ರಾತ್ರಿ ವಿಧಾನಸೌಧದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಬಜೆಟ್ ಮಂಡನೆ ಮಾಡಿದ್ದರು. ರಾತ್ರಿ 11:30ಕ್ಕೆ ಬಜೆಟ್ ಪ್ರತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿತ್ತು.
ಘನತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಕೊಳವೆ ಅಳವಡಿಕೆ, ರಸ್ತೆ ಮಾರ್ಗದ ದುರಸ್ತಿ ಕಾಮಗಾರಿ, ರಾಜ್ಯ ಸರ್ಕಾರದ ಕಾಮಗಾರಿ ಪಾಲಿಕೆ ನೀಡಬೇಕಾದ ವಂತಿಕೆ, ಪತ್ರಕರ್ತರ ವೈದ್ಯಕೀಯ ಪರಿಹಾರ ಹಾಗೂ ಐಪಿಡಿ ಸಾಲಪ್ಪ ಸ್ಮರಣಾ ಕಾರ್ಯಕ್ರಮಕ್ಕೆ ಒಟ್ಟು 377.50 ಕೋಟಿ ಹೆಚ್ಚುವರಿ ಮೊತ್ತ ಸೇರಿಸಿ, ಪರಿಷ್ಕರಿಸಿ ರಾಜ್ಯ ಸರ್ಕಾರ ಬಜೆಟ್ ಗೆ ಅನುಮೋದನೆ ನೀಡಿದೆ. ಪರಿಷ್ಕೃತ ಮೊತ್ತವನ್ನು ಬಿಬಿಎಂಪಿ ತನ್ನ ಆದಾಯ ಮೂಲಗಳಿಂದ ಹೊಂದಾಣಿಕೆ ಮಾಡಿಕೊಳ್ಳುವಂತೆ ಇದೇ ವೇಳೆ ನಿರ್ದೇಶನ ನೀಡಲಾಗಿದೆ.
ವಿಶೇಷಚೇತನ ಅಭಿವೃದ್ಧಿಗೆ 370, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 346, ಕಲ್ಯಾಣ ಕಾರ್ಯಕ್ರಮಗಳಿಗೆ 428, ಘನತ್ಯಾಜ್ಯ ನಿರ್ವಹಣೆಗೆ 1,469, ಆರೋಗ್ಯ ವಲಯಕ್ಕೆ 75, ಮಹಾಪೌರರ ವಿವೇಚನೆಗೆ 83 ಕೋಟಿ, ಉಪ ಮಹಾಪೌರರ ವಿವೇಚನೆಗೆ 42 ಕೋಟಿ, ಮುಖ್ಯ ಆಯುಕ್ತರ ವಿವೇಚನೆಗೆ 63 ಕೋಟಿ, ಬೆಂಗಳೂರು ಉಸ್ತುವಾರಿ ಸಚಿವರ ವಿವೇಚನೆಗೆ 265 ಕೋಟಿ ಮೀಸಲಿಟ್ಟಿದ್ದರು.

ಕಳೆದ ವರ್ಷ 2021-22ನೇ ಸಾಲಿನಲ್ಲಿ 9,951 ಗಾತ್ರದ ಬಜೆಟ್ ಮಂಡನೆ ಮಾಡಿದ್ದ ಬಿಬಿಎಂಪಿ ಈ ವರ್ಷದ (2022-23) ಬಜೆಟ್ ನಲ್ಲಿ 529 ಕೋಟಿ ಹೆಚ್ಚಳ ಮಾಡಿತ್ತು. ಇದರಿಂದ ಕೆರಳಿದ್ದ ಬೆಂಗಳೂರು ನಗರ ಶಾಸಕರು ಪಕ್ಷಾತೀತವಾಗಿ
ಮಾರ್ಚ್ 14ರಂದು ನಡೆದಿದ್ದ ಬಜೆಟ್ ಸಮಾಲೋಚನಾ ಸಭೆಯಲ್ಲಿ ಬಿಬಿಎಂಪಿ ಆಯುಕ್ತರ ವಿರುದ್ಧ ಹಾಗೂ ಹಿರಿಯ ಅಧಿಕಾರಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ನೆಪವಿಟ್ಟುಕೊಂಡು ವಾರ್ಡ್ ಗೆ ನೀಡಬೇಕಿದ್ದ ಅನುದಾನ ನೀಡಿಲ್ಲ. ಬಿಬಿಎಂಪಿಗೆ ಮೇಯರ್ ಕಾರ್ಪೋರೇಟರ್ ಗಳಿಲ್ಲ. ಬಿಬಿಎಂಪಿಗೆ ಬಂದಿರುವ ಆದಾಯವನ್ನ ತೋರಿಸಿಲ್ಲ ಇನ್ನೂ ರಾಜ್ಯ ಸರ್ಕಾರ ನೀಡಿರುವ ಹಣವನ್ನ ಸರಿಯಾಗಿ ಬಳಸಿಲ್ಲ ಎಂದು ಆರೋಪಿಸಿದ್ದರು. ಇದೀಗ ಬಿಬಿಎಂಪಿ 2022-23ನೇ ಸಾಲಿನಲ್ಲಿ ಬಜೆಟ್ ಮಂಡಿಸಿರುವ ಹಣಕ್ಕಿಂತ 377.50 ಕೋಟಿ ಹೆಚ್ಚುವರಿ ಮೊತ್ತ ನೀಡಿರುವುದು ಗಮನಾರ್ಹವಾಗಿದೆ.












Click it and Unblock the Notifications