Geetha Shivarajkumar: ಗೀತಾ ಶಿವರಾಜಕುಮಾರ್ ಕಾಂಗ್ರೆಸ್ ಸೇರ್ಪಡೆ; ದೊಡ್ಡ ಬಲೆ ಹಾಕಿ ಬೀಳಿಸಿದ್ದೇನೆಂದ ಡಿಕೆಶಿ
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಕರುನಾಡು ಸಜ್ಜಾಗಿದ್ದು, ರಾಜ್ಯದಲ್ಲಿ ಒಂದು ಕಡೆ ಅಬ್ಬರದ ಪ್ರಚಾರ ನಡೆಯುತ್ತಿದ್ದರೆ, ಮತ್ತೊಂದೆಡೆ ಮೇ 10ರಂದು ಮತದಾನ ನಡೆಯಲಿರುವ ಮುನ್ನ ಹಲವು ಪರಿಚಿತ ಮುಖಗಳು ಪಕ್ಷ ಸೇರ್ಪಡೆ ಸಾಮಾನ್ಯವಾಗಿದೆ.
ಅದೇ ರೀತಿ ಶುಕ್ರವಾರ, ಏಪ್ರಿಲ್ 28ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಕನ್ನಡ ಚಲನಚಿತ್ರ ನಟ ಶಿವರಾಜಕುಮಾರ್ ಪತ್ನಿಯಾಗಿರುವ ಗೀತಾ ಅವರು ಜೆಡಿಎಸ್ ತೊರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ನಾನು ಸುಮಾರು ಜನರಿಗೆ ಗಾಳ ಹಾಕಿದ್ದೇನೆ. ಗಾಳ ಹಾಕಿ ಹಾಕಿ ಸುಸ್ತಾಗಿದ್ದೆ. ಈ ಬಾರಿ ಗೀತಾ ಶಿವರಾಜಕುಮಾರ್‌ಗೆ ದೊಡ್ಡ ಬಲೆ ಬೀಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ. ಗೀತಾ ಶಿವರಾಜಕುಮಾರ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ," ಎಂದು ತಿಳಿಸಿದರು.
"ಕಾಂಗ್ರೆಸ್ ಪಕ್ಷದ ಪರ ನಾನು ಚುನಾವಣಾ ಪ್ರಚಾರ ಮಾಡುತ್ತೇನೆ. ಪತಿ ಶಿವರಾಜಕುಮಾರ್ ಕೂಡ 3 ದಿನ ಪ್ರಚಾರಕ್ಕೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುತ್ತೇನೆ. ರಾಹುಲ್ ಗಾಂಧಿ ಅವರನ್ನು ಕಂಡರೆ ಇಷ್ಟ. ನನ್ನ ತಮ್ಮ ಮಧು ಬಂಗಾರಪ್ಪ ಎಲ್ಲಿರುತ್ತಾರೋ ನಾನು ಅಲ್ಲಿರುತ್ತೇನೆ," ಎಂದು ಗೀತಾ ಶಿವರಾಜಕುಮಾರ್ ಹೇಳಿದ್ದಾರೆ.
ಗೀತಾ ಶಿವರಾಜಕುಮಾರ್ ಅವರು ಸಹೋದರ ಹಾಗೂ ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರೂ ಸಹ ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದೀಗ ಸೊರಬ ಕ್ಷೇತ್ರದಲ್ಲಿ ಸಹೋದರ ಕುಮಾರ್ ಬಂಗಾರಪ್ಪನ ವಿರುದ್ಧವೇ ಮಧು ಬಂಗಾರಪ್ಪ ಸ್ಪರ್ಧಿಸಿದ್ದಾರೆ.
ಕಾಂಗ್ರೆಸ್ ಸೇರಿರುವ ಗೀತಾ ಶಿವರಾಜಕುಮಾರ್ ಅವರು ಕಿರಿಯ ಸಹೋದರ ಮಧು ಬಂಗಾರಪ್ಪ ಪರವಾಗಿ ಮತ್ತು ಹಿರಿಯ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧವಾಗಿ ಸೊರಬ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
ರಾಜ್ಯದ ಹೈ-ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಸೊರಬ ಕ್ಷೇತ್ರದಲ್ಲಿ ಈ ಬಾರಿಯೂ ಸಹೋದರರ ನಡುವಿನ ಅಖಾಡವಾಗಿದೆ. ಈ ಕಣದಲ್ಲಿ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಮಧು ಬಂಗಾರಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಸಹೋದರನ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಯಾವ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications