Karnataka Election 2023; ಈ ಸೆಲೆಬ್ರೆಟಿಗಳು ಚುನಾವಣಾ ಟಿಕೆಟ್ ಬಯಸಿದ್ದಾರೆ, ಯಾರವರು? ಯಾವ ಕ್ಷೇತ್ರ ತಿಳಿಯಿರಿ
ಬೆಂಗಳೂರು, ಮಾರ್ಚ್ 31: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ವಾರಗಳಷ್ಟೇ ಬಾಕಿ ಇದೆ. ಈ ಹಿಂದಿನಿಂದಲೂ ರಾಜಕಾರಣದಲ್ಲಿ ಕನ್ನಡ ಚಲನಚಿತ್ರ ಕಲಾವಿದರೂ ಸಕ್ರಿಯವಾಗಿದ್ದಾರೆ. ಪ್ರಸ್ತುತ 2023ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರರಂಗದ ಸದಸ್ಯರು ಸಹ ಹೊಸದಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಹಿಂದಿನಿಂದಲೂ ರಾಷ್ಟ್ರೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಕೆಲವು ಕಲಾವಿದರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಭೀತಿಯು ಎದುರಾಗಿದೆ. ಈ ಮಧ್ಯೆ ಹೊಸಬರಿಗೆ ಟಿಕೆಟ್ ಸಿಗುತ್ತಾ? ಎಂಬುದು ಇನ್ನೂ ಅಂತಿಮವಾಗಿಲ್ಲ. ಯಾರು ಈ ಹೊಸಬರು, ಯಾವ ಕ್ಷೇತ್ರ ಟಿಕೆಟ್ ಆಕಾಂಕ್ಷಿಗಳು ಎಂಬ ಮಾಹಿತಿ ಇಲ್ಲಿದೆ.

ಚಲನಚಿತ್ರ ನಿರ್ಮಾಪಕ ಕೆ. ಮಂಜು ಅವರು ತಾವು ಈ ಬಾರಿ ಚುನಾವಣಾ ಅಖಾಡಕ್ಕಿಳಿಯುವುದಾಗಿ ಘೊಷಣೆ ಮಾಡಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಸೈ ಎನಿಸಿಕೊಂಡಿದ್ದ ಕೆ. ಮಂಜು ಅವರು, ಇದೀಗ ರಾಜಕೀಯ ಅಂಗಳದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ, ಸೇವೆಯಂತೆ ರಾಜಕೀಯ ರಂಗದ ಮೂಲಕ ಜನರಿಗೆ ಅಭಿವೃದ್ಧಿ ಸೇವೆ ನೀಡುವ ಬಯಕೆ ಹೊಂದಿರುವ ಅವರು, ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆದಷ್ಟು ಶೀಘ್ರವೇ ಎಲ್ಲವನ್ನು ಅಧಿಕೃತವಾಗಿ ಬಹಿರಂಗಗೊಳಿಸುತ್ತೇನೆ. ಅಲ್ಲಿಯವರೆಗೆ ಪಕ್ಷದ ಮುಖಂಡರನ್ನು ಭೇಟಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಪದ್ಮನಾಭನಗರದಲ್ಲಿ ಒಕ್ಕಲಿಗರ ಮತಗಳು ಜಾಸ್ತಿ ಇವೆ. ಇಲ್ಲಿನ ಹಲವು ಮುಖಂಡರ ಬೆಂಬಲವು ನನಗಿದೆ ಎಂದು ಅವರು ಹೇಳಿದ್ದಾರೆ. ಅವರು ಇಲ್ಲಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತಾರೋ ಇಲ್ಲ ರಾಷ್ಟ್ರೀಯ ಪಕ್ಷವೊಂದನ್ನು ಸೇರಿ ಅಲ್ಲಿಂದ ಸ್ಪರ್ಧಿಸುತ್ತಾರಾ ಎಂದು ಕಾದು ನೋಡಬೇಕಿದೆ. ಸದ್ಯ ಬಿಜೆಪಿಯಿಂದ ಈ ಕ್ಷೇತ್ರದಿಂದ ಆರ್ ಅಶೋಕ್ ಸ್ಪರ್ಧೆ ಖಚಿತ ಎನ್ನಲಾಗಿದೆ. ಇತ್ತ ಕಾಂಗ್ರೆಸ್ ಇನ್ನೂ ಯಾವುದೇ ಅಭ್ಯರ್ಥಿಯನ್ನು ಈ ಕ್ಷೇತ್ರಕ್ಕೆ ಘೋಷಿಸಿಲ್ಲ.

ಉಮಾಶ್ರೀ ಅವರಿಗೆ ಕೈ ತಪ್ಪುತ್ತಾ ತೇರದಾಳ ಟಿಕೆಟ್?
ಕಾಂಗ್ರೆಸ್ ನಾಯಕಿ ಮಾಜಿ ಸಚಿವೆ ಮತ್ತು ಹಿರಿಯ ಕಲಾವಿದರಾದ ಉಮಾಶ್ರೀ ಅವರು ಸಹ ತೇರದಾಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಸಮೀಕ್ಷೆ ಆದರಿಸಿದ ಟಿಕೆಟ್ ಹಂಚಿಕೆ ಮಾಡುತ್ತಿದೆ. ಹೀಗಾಗಿ ಅವರಿಗೆ ತೇರದಾಳ ಕ್ಷೇತ್ರದ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.
ಇತ್ತ ಅವರಿಗೇ ಟಿಕೆಟ್ ಕೊಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಟಿಕೆಟ್ ನೀಡುವ ಕುರಿತಾಗಿ ಕಾಂಗ್ರೆಸ್ ಕೆಲವು ದಿನಗಳ ಹಿಂದೆ ನಡೆಸಿದ್ದ ಆಂತರಿಕ ಸಮೀಕ್ಷೆಯಲ್ಲಿ ಉಮಾಶ್ರೀ ಅವರಿಗೆ ಹಿನ್ನಡೆಯಾಗಿದೆ ಎನ್ನಲಾಗಿದೆ. ತೇರದಾಳದಿಂದಲೇ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿರುವ ಸಿದ್ದು ಕಣ್ಣೂರು ಅವರ ಮಧ್ಯೆ ಪೈಪೋಟಿ ನಡೆದಿದ್ದು, ಯಾರಿಗೆ ಟಿಕೆಟ್ ಎಂಬುದನ್ನು ಪಕ್ಷವೇ ಬಹಿರಂಗಪಡಿಸಬೇಕಿದೆ. ಆದರೆ ಸಿದ್ದರಾಮಯ್ಯನವರು ಮಾತ್ರ ಉಮಾಶ್ರೀ ಅವರಿಗೇ ಕೊಡಿಸಲು ಕಸರತ್ತು ನಡೆಸಿದ್ದಾರೆ.
ಬೊಮ್ಮನಹಳ್ಳಿಯಿಂದ ಉಮಾಪತಿ ಸ್ಪರ್ಧೆ ಸಾಧ್ಯತೆ
ಮತ್ತೊಬ್ಬ ಚಿತ್ರ ನಿರ್ಮಾಪಕರಾದ ಉಮಾಪತಿ ಗೌಡ ಅವರು ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕ ಸತೀಶ್ ರೆಡ್ಡಿ ಅವರು ಹ್ಯಾಟ್ರೀಕ್ ಬಾರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಈ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ. ಈ ಸಂಬಂಧ ಹಾಲಿ ಶಾಸಕರ ವಿರುದ್ಧ ಪ್ರಬಲ ನಾಯಕನನ್ನು ನಿಲ್ಲಿಸಲು ಕಾಂಗ್ರೆಸ್ ಹುಡುಕಾಟ ನಡೆಸಿದ್ದು, ಈ ಭಾರಿ ನಿರ್ಮಾಪಕ ಉಮಾಪತಿ ಗೌಡ ಅವರಿಗೆ ನೀಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಬಿಜೆಪಿಯನ್ನು ಕಟ್ಟಿ ಹಾಕುತ್ತಾ ಕಾಂಗ್ರೆಸ್
ಸತೀಶ್ ರೆಡ್ಡಿಯನ್ನು ಕಟ್ಟಿಹಾಕಲು ಕಾಂಗ್ರೆಸ್ ನಿರಂತರವಾಗಿ ಯತ್ನಿಸುತ್ತಲೇ ಇದ್ದು, ಆದರೆ ಸಫಲವಾಗಿಲ್ಲ. 4.25 ಲಕ್ಷ ಮತದಾರರು ಇಲ್ಲಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರವನ್ನು ಈ ಬಾರಿ ಗೆದ್ದೇ ತೀರಬೇಕೆಂದು ಕಾಂಗ್ರೆಸ್ ತಂತ್ರ ಹೆಣೆದಿದೆ. ಇತ್ತ ಕ್ಷೇತ್ರದಲ್ಲಿ ನಿರ್ಮಾಪಕ ಉದ್ಯಮಿಯೂ ಆಗಿರುವ ಪ್ರಬಲರು ಆದ ಉಮಾಪತಿ ಗೌಡ ಅವರು ಫುಲ್ ಆ್ಯಕ್ಟಿವ್ ಆಗಿದ್ದಾರೆ. ಈ ಸಂಬಂಧ ಅವರಿಗೇ ಒಂದು ವೇಳೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಚಿತ್ರರಂಗ ಸದಸ್ಯರೊಬ್ಬರ ರಾಜಕೀಯ ಪಾದಾರ್ಪಣೆ ಆಗಲಿದೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಚಿತ್ರರಂಗದಿಂದ ರಾಜಕಾರಣಕ್ಕೆ ಬಂದು ಮತ್ತೆ ರಾಜಕೀಯದಿಂದ ದೂರ ಸರಿದಿದ್ದ ಶಶಿಕುಮಾರ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಾರಾ? ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಕೋಟೆನಾಡು ಎಂಬ ಖ್ಯಾತಿಗೆ ಪಾತ್ರವಾದ ಚಿತ್ರದುರ್ಗದಿಂದ 1999ರಲ್ಲಿ ಅವರು ಸಂಸದರಾಗಿ ಚುನಾಯಿತರಾಗಿದ್ದರು. ನಂತರದ ವರ್ಷಗಳಲ್ಲಿ ಅವರು ರಾಜಕೀಯದಿಂದ ದೂರವಾಗಿದ್ದರು. ಇದೀಗ ಮತ್ತೆ ಅವರು ಚುನಾವಣಾ ಅಖಾಡಕ್ಕೆ ಇಳಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‌ಟಿ ಮೀಸಲಾತಿ ಕ್ಷೇತ್ರಗಳಾದ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಕ್ಷೇತ್ರಗಳಿಂದ ಇಳಿಯಬಹುದು ಎಂಬ ಮಾತುಗಳು ಕೇಳಿ ಬಂದಿವೆ.
ಇತ್ತೀಚೆಗೆ ಆಮ್ ಆದ್ಮಿ ಪಕ್ಷ ಸೇರಿದಂತೆ ಚಿತ್ರರಂಗದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರು ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷ ಸಂಘಟನೆಗಾಗಿ ಶ್ರಮಿಸುತ್ತೇನೆ ಎಂದಿದ್ದರು. ಇನ್ನೂ ಕಲಾವಿದ ಟೆನ್ನಿಸ್ ಕೃಷ್ಣ ಅವರಿಗೆ ಎಎಪಿಯು ತುರುವೇಕೆರೆ ಕ್ಷೇತ್ರದ ಟಿಕೆಟ್ ನೀಡಲಾಗಿದೆ.












Click it and Unblock the Notifications