Helicopter-Mini Flight: ಕರ್ನಾಟಕದಲ್ಲಿ ಚುನಾವಣೆ ಪ್ರಚಾರಕ್ಕಾಗಿ 150 ಹೆಲಿಕಾಪ್ಟರ್ ಬುಕ್, ಬಾಡಿಗೆ ಎಷ್ಟು? ಅಂಕಿ ಅಂಶ ಇಲ್ಲಿದೆ
ಬೆಂಗಳೂರು, ಏಪ್ರಿಲ್ 17: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರಿದೆ. ಚುನಾವಣಾ ಪ್ರಚಾರಕ್ಕೆ, ಇಲ್ಲವೇ ಪ್ರಚಾರದ ಕಾರ್ಯಕ್ರಮಗಳಿಗೆ ತಾವಿದ್ದ ಸ್ಥಳದಿಂದ ಬೇರೆಡೆ ಓಡಾಡಲು ಹೆಚ್ಚಾಗಿ ಹೆಲಿಕಾಫ್ಟರ್‌ಗಳ ಮೊರೆ ಹೊಗುತ್ತಿದ್ದಾರೆ. ಈ ಕಾರಣಕ್ಕೆ ಹೆಚ್ಚು ಹೆಲಿಕಾಪ್ಟರ್‌ಗಳು ಬುಕ್ ಆಗುತ್ತಿವೆ.
ಪ್ರಮುಖ ರಾಜಕೀಯ ಪಕ್ಷಗಳು ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬಂಡಾಯ ಎದ್ದಿದ್ದಾರೆ. ಅಂತವರನ್ನು ತಮ್ಮ ಪಕ್ಷದತ್ತ ಓಲೈಸಲು, ಕೂಡಲೇ ಕರೆದುಕೊಂಡು ಬಂದು ಅವರನ್ನು ತರಾತುರಿಯಲ್ಲಿ ತಮ್ಮ ಪಕ್ಷ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶಕ್ಕೂ ಹೆಲಿಕಾಪ್ಟರ್‌ಗಳು ಬಳಕೆ ಆಗುತ್ತಿವೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಜೆಡಿಎಸ್ನ ಘಟಾನುಘಟಿ ನಾಯಕರು, ಬೇಗ ಬೇಗನೇ ರಾಜ್ಯ ಸುತ್ತಾಡಲು, ಪ್ರಚಾರದ ವೇದಿಕೆ ತೆರಳಲು ಹೆಲಿಕಾಪ್ಟರ್ ಅನ್ನು ಬುಕ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು 100 ಹೆಲಿಕಾಪ್ಟರ್‌ಗಳು ಇವೆ ಎಂಬ ಮಾಹಿತಿ ಇದೆ.
ಹೆಲಿಕಾಪ್ಟರ್-ಮಿನಿ ವಿಮಾನ ಬೇಡಿಕೆ ಅಧಿಕ
ಚುನಾವಣೆ ಮತಪ್ರಚಾರ ಹಾಗೂ ಇನ್ನಿತರ ಕಾರಣಗಳಿಗಾಗಿ ಸದ್ಯ 150 ಹೆಲಿಕಾಪ್ಟರ್‌ಗಳು, ಮಿನಿ ವಿಮಾನಗಳು ಬುಕ್ ಆಗಿರುವ ಬಗ್ಗೆ ವರದಿಯಾಗಿದೆ. ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಕೆಲವು ರಾಜಕಾರಣಿಗಳು ಹೊರ ರಾಜ್ಯಗಳಿಂದಲೂ ಬಾಡಿಗೆ ರೂಪದಲ್ಲಿ ಹೆಲಿಕಾಪ್ಟರ್ ಪಡೆಯುತ್ತಿದ್ದಾರೆ.

ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ಜೈಪುರ, ದೆಹಲಿ, ಕೋಲ್ಕತಾದಂತಹ ಭಾಗದಿಂದಲೂ ಹೆಲಿಕಾಪ್ಟರ್‌ಗಳು ಕರ್ನಾಟಕಕ್ಕೆ ಬಂದಿವೆ. ದಿಢೀರ್ ನೇ ಹೆಲಿಕಾಪ್ಟರ್ ಮಿನಿ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಮಿನಿ ವಿಮಾನದ ಬಾಡಿಗೆ ಬೆಲೆಯಲ್ಲಿ ಶೇಕಡಾ 15 ಪ್ರತಿಶದಷ್ಟು ಹೆಚ್ಚಾಗಿದೆ.
ಯಾವ ಹೆಲಿಕಾಪ್ಟರ್? ಅವಕ್ಕೆ ಎಷ್ಟು ಬಾಡಿಗೆ ತಿಳಿಯಿರಿ
ಹೆಲಿಕಾಪ್ಟರ್ ಎಂದರೆ ಅದರಲ್ಲಿ ನಾನಾ ನಮೂನೆಗಳಿವೆ. ಆ ಪೈಕಿ ಇಬ್ಬರಷ್ಟೇ ಕುಳಿತುಕೊಳ್ಳುವ ಆಸನದ ಹೆಲಿಕಾಪ್ಟರ್ ನ ಒಂದು ಗಂಟೆ ಅವಧಿ ಬಾಡಿಗೆ ಬೆಲೆ 2.10 ಲಕ್ಷ ರೂಪಾಯಿ ನಿಗದಿಯಾಗಿದೆ. ನಾಲ್ಕು ಮಂದಿ ಕೂರು ಆಸನದ ಹೆಲಿಕಾಪ್ಟರ್ ಬಾಡಿಗೆಗೆ ರಾಜಕಾರಣಿಗಳು ಗಂಟೆಗೆ 2.30 ಲಕ್ಷ ರೂಪಾಯಿ ನೀಡುತ್ತಿದ್ದಾರೆ.

ಅದೇ ರೀತಿ 6 ಮಂದಿ ಕೂತು ಒಮ್ಮೆಲೆ ಪ್ರಯಾಣ ಮಾಡಬಹುದಾದ ಗಾತ್ರದಲ್ಲಿ ತುಸು ಚಿಕ್ಕದಾದ ಮಿನಿ ವಿಮಾನಕ್ಕೆ ಗಂಟೆಗೆ 2.60 ಸಾವಿರ ರೂಪಾಯಿ ಬಾಡಿಗೆ ಇದೆ. ಇನ್ನೂ ಒಂದು ಪಕ್ಷದ ಎಂಟು ಮಂದಿ ಒಂದೇ ಬಾರಿಗೆ ಬೇರೆಡೆ ತೆರಳಬೇಕಾದರೆ ಅಂತಹ ಮಿನಿ ವಿಮಾನಕ್ಕೆ ಪ್ರತಿ ಗಂಟೆಗೆ 3.5 ಲಕ್ಷ ರೂಪಾಯಿ ಹಣ ವ್ಯಯಿಸಬೇಕಿದೆ. 13 ಸೀಟಿನಿ ಮಿನಿ ವಿಮಾನವನ್ನು ಒಂದು ಗಂಟೆ ಬಾಡಿಗೆ ಪಡೆಯಬೇಕಾದರೆ ಜಿಎಸ್ಟಿ ಸಹಿತ 4 ಲಕ್ಷ ರೂಪಾಯಿ ಕೊಡಬೇಕು.
ಈ ರೀತಿ ಮೂರು ಪಕ್ಷದ ಮೂರು ಪಕ್ಷಗಳಿಂದ ರಾಜಕೀಯ ನಾಯಕರು ಹೆಲಿಕಾಪ್ಟರ್ ಮತ್ತು ಮಿನಿ ವಿಮಾನಗಳನ್ನು ಬುಕ್ಕಿಂಗ್ ಮಾಡುತ್ತಿದ್ದಾರೆ. ಇನ್ನು ಅವುಗಳ ಲ್ಯಾಂಡಿಂಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹೆಲಿಪ್ಯಾಡ್ಗಳನ್ನ (ಸ್ಥಳ) ನಿಗದಿ ಮಾಡಲಾಗಿದೆ.
ಹೆಲಿಪ್ಯಾಡ್ ಸ್ಥಳ ನಿಗದಿ ಎಲ್ಲಿ?
ರಾಜಧಾನಿ ಬೆಂಗಳೂರಿನ ಜಕ್ಕೂರು, ಯಲಹಂಕದ ಎಚ್ಎಎಲ್ ವಿಮಾನ ನಿಲ್ದಾಣ, ವೈಟ್ ಫೀಲ್ಡ್ ಭಾಗದಲ್ಲಿ ಹೆಲಿಕಾಪ್ಟರ್ಗಳ ನಿಲ್ದಾಣಕ್ಕೆ ಅವಕಾಶ ಇದೆ. ಇನ್ನು ಹುಬ್ಬಳ್ಳಿ, ಬೆಳಗಾವಿ, ಬೀದರ್, ಬಳ್ಳಾರಿ, ಕಲಬುರಗಿ ಸೇರಿದಂತೆ ರಾಜ್ಯದ ಹಲೆವೆಡೆ ಹೆಲಿಪ್ಯಾಡ್‌ಗಳಿಗೆ ಸ್ಥಳಾವಕಾಶ ನೀಡಲಾಗಿದೆ.
ಈ ಹೆಲಿಪ್ಯಾಡ್‌ಗಳು ಬೆಂಗಳೂರು ಭಾಗದಿಂದ ಉತ್ತರ ಕರ್ನಾಟಕ, ಕಲ್ಯಾಣ ಕಲ್ಯಾಣ, ಮಲೆನಾಡು ಭಾಗಕ್ಕೆ ತೆರಳುತ್ತಿವೆ. ಕರಾವಳಿ ಭಾಗಕ್ಕೂ ತೆರಳುತ್ತಿವೆ. ಈ ಮೂಲಕ ರಾಜಕೀಯ ಕಾರ್ಯಕ್ರಮಗಳಿಗೆ ಹಾಗೂ ಚುನಾವಣೆ ಪ್ರಚಾರಕ್ಕೆ ಬೇಗ ಬೇಗ ತೆರಳಲು ಸಾಧ್ಯವಾಗುತ್ತದೆ.












Click it and Unblock the Notifications