ವಿಶ್ವಗುರು ಬಸವಣ್ಣನವರ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಈಗ ಮತ್ತೊಮ್ಮೆ ಲಿಂಗಾಯತ ಸಮುದಾಯದ ವಿಚಾರ ಚರ್ಚೆಗೆ ಬಂದಿದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಮಲ ಪಾಳಯದ ಹೈಕಮಾಂಡ್ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕೂಡ ಅದೇ ಅಸ್ತ್ರ ಬಳಸುತ್ತಿದೆ. ಇದೇ ಸಮಯದಲ್ಲಿ ಬಸವಣ್ಣನವರ ಬಗ್ಗೆ ಡಿಸಿಎಂ ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ನಡೆದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 31 ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಿಸಿಎಂ ಮಾತನಾಡಿದರು. ಈ ವೇಳೆ, 5 ಗ್ಯಾರಂಟಿ ಘೋಷಣೆ ಮಾಡಿದ್ದೆವು, ಅದರಂತೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ನಮ್ಮ ಸರ್ಕಾರಕ್ಕೆ ಬಸವಣ್ಣನವರೇ ಪ್ರೇರಣೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಹಾಗೇ ತರಳಬಾಳು ಮಠ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ, ಬಸವಣ್ಣನವರ ಹಾದಿಯಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದಿದ್ದಾರೆ.

ನ್ಯಾಯಾಲಯ ಬಿಟ್ಟರೇ ತರಳಬಾಳು...
ಅಕ್ಷರ ದಾಸೋಹ, ಬಸವತತ್ವ ಸೇರಿದಂತೆ ರೈತರು & ನೀರಾವರಿ ಬಗ್ಗೆ ಕಾಳಜಿ ಹೊಂದಿರುವ ಬಹುದೊಡ್ಡ ವ್ಯಕ್ತಿತ್ವ ತರಳಬಾಳು ಶ್ರೀಗಳು. ನ್ಯಾಯಾಲಯ ಬಿಟ್ಟರೇ ತರಳಬಾಳು ಮಠದ ಸದ್ದರ್ಮ ನ್ಯಾಯ ಪೀಠವೇ ಅತ್ಯಂತ ಶಕ್ತಿಯುತವಾದ ನ್ಯಾಯಪೀಠ ಎಂದರು. ಊರಿನಲ್ಲಿ ಎಷ್ಟೊಂದು ಹೋರಿಗಳು ಜನಿಸುತ್ತವೆ ಆದರೆ ಎಲ್ಲವೂ ಬಸವ ಆಗುವುದಿಲ್ಲ. ಅದರಂತೆ ಎಷ್ಟೊಂದು ಜನ ಸನ್ಯಾಸತ್ವ ಸ್ವೀಕಾರ ಮಾಡಿ ಸ್ವಾಮೀಜಿಗಳಾದರೂ ತರಳಬಾಳು ಶ್ರೀಗಳಂತೆ ಇರಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸುತ್ತಿದ್ದಾರೆ
ಅಲೆಗ್ಸಾಂಡರ್ ಗುರು ಅರಿಸ್ಟಾಟಲ್ ಅವರಿಗೆ ಭಾರತ ವಶಪಡಿಸಿಕೊಳ್ಳಲು ಹೋಗುತ್ತಿರುವುದಾಗಿ ಹೇಳಿದರಂತೆ. ಆಗ ಅವರು "ನೀನು ಮರಳಿ ಬರುವಾಗ 5 ಸಂಗತಿಗಳನ್ನು ತೆಗೆದುಕೊಂಡು ಬಾ. ಭಗವದ್ಗೀತೆ, ರಾಮಾಯಣ, ಗಂಗಾಜಲ, ಕೃಷ್ಣನ ಕೊಳಲು & ತತ್ವಜ್ಞಾನಿ" ಇಷ್ಟು ಸಂಗತಿ ತಂದರೆ ಇಡೀ ಭಾರತವನ್ನೇ ತಂದಂತೆ ಎಂದರಂತೆ. ಅದೇ ರೀತಿ ಸ್ವಾಮೀಜಿಗಳು ತಮ್ಮ ನ್ಯಾಯ ಪೀಠದಿಂದ ಜನಸಾಮಾನ್ಯರ ಕಷ್ಟಗಳನ್ನು ನಿವಾರಣೆ ಮಾಡುತ್ತಿದ್ದಾರೆ ಎಂದರು.

ಶ್ರಮದಿಂದ ಮಾತ್ರ ಸಾಧನೆ ಸಾಧ್ಯ
ಹುಟ್ಟು ಸಾವಿನ ಮಧ್ಯೆ ನಾವು ಏನು ಕಾಯಕ ಮಾಡ್ತೀವೆ ಎನ್ನುವುದು ಮುಖ್ಯ. ಜನ ನಮ್ಮನ್ನು ನಡಿಗೆಯಿಂದ ನೆನಪಿಟ್ಟುಕೊಳ್ಳಬಾರದು ನಡತೆಯಿಂದ ನೆನಪಿಟ್ಟುಕೊಳ್ಳಬೇಕು. ನಾವು ದುಡಿದ ಹಣದಲ್ಲಿ ಕೊಂಚವಾದರೂ ಮಠಗಳ ದಾಸೋಹಕ್ಕೆ ನೀಡಿದರೆ ರಾಜ್ಯ ಧರ್ಮದಿಂದ ಕೂಡಿರುತ್ತೆ ಎಂದರು. ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಈ ಮೂರರ ನೆನೆಪು ಮನುಷ್ಯತ್ವದ ಮೂಲ. ಇದನ್ನು ಬೆಳೆಸಿದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಶ್ರೀಗಳು ನಮಗೆ ಮಾದರಿ. ಬದುಕಿನಲ್ಲಿ ಶ್ರಮಪಟ್ಟರೇ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರು ಡಿಸಿಎಂ.
ಕೆರೆಗಳಿಗೆ ನೀರು ತುಂಬಿಸುವ ಕೆಲಸ
ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ಕಾಡಿನಲ್ಲಿ ನೂರಾರು ಪ್ರಾಣಿಗಳಿದ್ದರೂ ಸಿಂಹವನ್ನ ಮೃಗರಾಜ ಎಂದು ಕರೆದರು ಅದರಂತೆ ನಮ್ಮ ಸಮಾಜಕ್ಕೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ನ್ಯಾಯಸಿಂಹದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಚೆನ್ನಗಿರಿ, ಮಾಯಕೊಂಡ ಭಾಗಗಳ ಕೆರೆಗಳಿಗೆ ಭದ್ರಾ ನದಿಯ ನೀರು ಹರಿಸಲು ಸ್ವಾಮೀಜಿಗಳು ಮಾರ್ಗದರ್ಶನ ನೀಡಿದ್ದಾರೆ, ಅದರಂತೆ ನಾವು ನಡೆದುಕೊಳ್ತೀವಿ. ರೈತರ ಜೀವನಾಡಿ ಅರಿತು ಕೆಲಸ ಮಾಡುತ್ತೇವೆ ಎಂದಿದ್ದಾರೆ ಡಿಸಿಎಂ.
ಇನ್ನು ಇದೇ ವೇಳೆ, ಹಂಪನಾ ಅವರ ಮಗ, ನಾನು ಎನ್‌ಪಿಎಸ್ ಶಾಲೆಯಲ್ಲಿ ಸಹಪಾಠಿಗಳು. ಅವರನ್ನ ನೋಡಿದರೆ ನಮಗೆ ನಾಚಿಕೆಯಾಗುತ್ತದೆ. 88 ವರ್ಷವಾದರೂ ನಮಗಿಂತ ಅವರು ಲವಲವಿಕೆಯಿಂದ ಕೂಡಿದ್ದಾರೆ. ನಾವು ಅವರ ವಯಸ್ಸಿಗೆ ಬರುವ ಕಾಲಕ್ಕೆ ಕೈಕಾಲೆಲ್ಲ ಬಿದ್ದು ಹೋಗಿರುತ್ತದೆ ಎಂದರು ಡಿಸಿಎಂ ಡಿ.ಕೆ.ಶಿವಕುಮಾರ್.












Click it and Unblock the Notifications