ಬ್ರ್ಯಾಂಡ್ ಬೆಂಗಳೂರಿಗೆ ಗ್ರ್ಯಾಂಡ್ ಜಾಹೀರಾತು ಕೊಟ್ಟ ಬಿಜೆಪಿ, ಏನದು?
ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಸ್ಪೆಷಲ್ ಟಾಸ್ಕ್ ಕೊಟ್ಟಿದ್ದರೂ ಇನ್ನೂ ಅದು ಯಶಸ್ವಿಯಾಗಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕೆಣಕುತ್ತಿವೆ. ಈ ವಾರ ಸುರಿದ ಭಾರಿ ಮಳೆಯಿಂದ ಬೆಂಗಳೂರಿನಲ್ಲಿ ಮತ್ತೆ ರಸ್ತೆಗುಂಡಿಗಳು ಬಾಯ್ತೆರೆದುಕೊಂಡಿವೆ ಎಂದು ಟೀಕಿಸುತ್ತಿವೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಗುಂಡಿ ಅಭಿಯಾನ ಶುರು ಮಾಡಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೂ ಆಗಿರುವ ಬ್ರ್ಯಾಂಡ್ ಬೆಂಗಳೂರಿಗೆ ಟಕ್ಕರ್ ಕೊಡುವ ಜಾಹೀರಾತನ್ನು ಬಿಜೆಪಿ ಪ್ರದರ್ಶಿಸುತ್ತಿದೆ.

ಬೆಂಗಳೂರಿನ ರಸ್ತೆಯೊಂದರಲ್ಲಿ ಇರುವ ಗುಂಡಿಯಲ್ಲಿ ಬಿಜೆಪಿ ತನ್ನ ಜಾಹೀರಾತು ಪ್ರದರ್ಶಿಸಿ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಈ ಫೋಟೋ ಹಂಚಿಕೊಂಡು, ಬ್ರ್ಯಾಂಡ್ ಬೆಂಗಳೂರಿನ ಗ್ರ್ಯಾಂಡ್ ಜಾಹೀರಾತು! ಎಂದು ಕಾಲೆಳೆದಿದೆ. ರಾಜ್ಯ ಸರ್ಕಾರ ಉದ್ಯಾನ ನಗರಿಯ ರಸ್ತೆಗಳನ್ನು ಕೊಳಚೆ ಗುಂಡಿಯಾಗಿ ಪರಿವರ್ತಿಸಿದೆ ಎಂದು ಆರೋಪಿಸಿದೆ. ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿರುವವರಿಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಸಮಯವೇ ಸಾಕಾಗುತ್ತಿಲ್ಲವೇ? ಎಂದು ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದರೆ, ಬ್ರಾಂಡ್ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಆರ್ಭಟ ಜೋರಾಗಿದೆ. ರಸ್ತೆಗುಂಡಿಗಳನ್ನು ಮುಚ್ಚಲು ಯೋಗ್ಯತೆಯಿಲ್ಲದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದೆಸೆಯಿಂದ ಜನ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೆ ಇನ್ನೆಷ್ಟು ಸಮಯ ಬೇಕು? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.

ಮಳೆ ಬಂದರೆ ಮತ್ತೆ ಆಕಾಶಕ್ಕೆ ಕಳುಹಿಸುವುದಕ್ಕೆ ಆಗುತ್ತಾ ಎನ್ನುವಷ್ಟು ಅಸಹಾಯಕ ಪರಿಸ್ಥಿತಿಗೆ ಭ್ರಷ್ಟ ಕರ್ನಾಟಕ ಸರ್ಕಾರ ಬಂದು ತಲುಪಿದೆ. ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಲೂಟಿ ಹೊಡೆಯವುದು ಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿ ರಸ್ತೆ, ಚರಂಡಿಗಳನ್ನು ದುರಸ್ತಿ ಮಾಡಿದ್ದರೆ, ಮಳೆ ನೀರು ಸೇರಬೇಕಾದ ಸ್ಥಳಕ್ಕೆ ಸೇರುತ್ತಿತ್ತು ರಸ್ತೆಯಲ್ಲಿ ನಿಲ್ಲುತ್ತಿರಲಿಲ್ಲ. ಅಭಿವೃದ್ಧಿ ಮಾಡಲು, ಅಧಿಕಾರ ನಡೆಸಲು ಕೈಲಾಗದೆ ಇದ್ದರೆ ಸರ್ಕಾರವನ್ನು ವಿಸರ್ಜನೆ ಮಾಡಿ ಕಾಂಗ್ರೆಸ್ ಮನೆಯಲ್ಲಿ ಕೂರುವುದು ಉತ್ತಮ ಎಂದು ಕುಟುಕಿದೆ.
ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ: ಒಂದೇ ಮಳೆಗೆ ಬೆಂಗಳೂರಿನ ತುಂಬಾ ಬಾಯ್ತೆರೆದಿರುವ ಯಮಸ್ವರೂಪಿ ರಸ್ತೆ ಗುಂಡಿಗಳು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಏನು ಎಂಬುದನ್ನ ಬಟಾ ಬಯಲು ಮಾಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಕಿಡಿಕಾರಿದ್ದಾರೆ.
40% ಕಮಿಷನ್ ಸರ್ಕಾರ ಅಂತ ಸುಳ್ಳು, ಅಪಪ್ರಚಾರದ ಮೂಲಕ ಕನ್ನಡಿಗರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ತನ್ನ ಭ್ರಷ್ಟಾಚಾರದ ಹಸಿವು, ದಾಹ ನೀಗಿಸಿಕೊಳ್ಳಲು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವನ್ನ ಬಲಿ ಕೊಡುತ್ತಿದೆ ಎಂದು ದೂರಿದ್ದಾರೆ.
ರಾಜಧಾನಿಯ ರಸ್ತೆಗಳು ಕೆರೆಗಳಾಗಿವೆ, ಬಡಾವಣೆಗಳು ಜಲಾವೃತವಾಗಿವೆ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ಹೊಡೆದು, ಸಿಲಿಕಾನ್ ಸಿಟಿ ಜನರನ್ನು ಮಳೆ ನೀರಲ್ಲಿ ಮುಳುಗಿಸಿ, ಬೆಂಗಳೂರಿನ ಮರ್ಯಾದೆ ಹರಾಜು ಹಾಕಿದ್ದೀರಲ್ಲ, ಇದೇನಾ ತಾವುಗಳು ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡುವ ಪರಿ? ಎಂದು ಲೇವಡಿ ಮಾಡಿದ್ದಾರೆ.












Click it and Unblock the Notifications