ಕರ್ನಾಟಕ ಬಂದ್: ಬೆಂಗಳೂರಲ್ಲಿ ಏನೇನಾಯ್ತು?
ಬೆಂಗಳೂರು, ಏ. 18: 'ಈ ಬಂದ್ ನಿಂದ ರಾಜ್ಯಕ್ಕೆ ಲಾಭವಾದ್ರೆ ಒಳಿತು, ಇಲ್ಲಾ ಅಂದ್ರೆ ನಾವು ಒಂದು ದಿನ ಉಪವಾಸ ಕೂತಿದ್ದಕ್ಕೇ ಬೆಲೇನೇ ಇರಲ್ಲ. ನಮ್ಮ ಒಂದು ದಿನದ ಕೂಲಿ ಹೋಯ್ತೆಂದು ಯಾರನ್ನೂ ದೂರಲ್ಲ. ರಾಜ್ಯದ ಜನರಿಗೆ ನೀರು ಸಿಕ್ಕರೇ ಅದೇ ಸಾಕು' ಕೆಆರ್ ಮಾರುಕಟ್ಟೆಯಲ್ಲಿ ಕೈ ಗಾಡಿ ಮೂಲಕ ಸಾಮಗ್ರಿಗಳನ್ನು ಸಾಗಿಸುವ ನಿರಂಜನ ಅವರ ಮಾತಿನಲ್ಲಿ ಎಂಥ ಅರ್ಥ ಇದೆ ಅಲ್ಲವೇ?
ಹೌದು.. ಶನಿವಾರದ ಕರ್ನಾಟಕ ಬಂದ್ ಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಣೆಕಟ್ಟು ಕಟ್ಟಬೇಕು, ಮೂರು ಜಿಲ್ಲೆಗಳ ಜನರಿಗೆ ನೀರು ಸಿಗಬೇಕು, ತಮಿಳುನಾಡು ಇಂಥ ಕ್ಯಾತೆ ಬಿಡಬೇಕು, ಮುಖ್ಯಮಂತ್ರಿ ಶೀಘ್ರ ಶಂಕುಸ್ಥಾಪನೆ ನೆರವೇರಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಉತ್ತಮವಾಗಿಯೇ ಇದೆ.[ಕರ್ನಾಟಕ ಬಂದ್ ಹೇಗೆ ನಡೆಯುತ್ತಿದೆ?]
ಆದರೆ ಬಂದ್ ನ ಸೈಡ್ ಎಫೆಕ್ಟ್ ಗಳು ಏನು? ನಾಗರೀಕರು ಯಾವ ರೀತಿ ತೊಂದರೆ ಪಟ್ಟರು? ಬಸ್ ಸಿಗದೇ ಪರದಾಡಿದವರು ಏನು ಹೇಳಿದರು? ಅಷ್ಟಕ್ಕೂ ಬಂದ್ ಎಂದು ಅಂಗಡಿ ಬಾಗಿಲು ಹಾಕಿದ ರಾಜಸ್ಥಾನಿಗೆ ಯಾಕಾಗಿ ಬಂದ್ ಮಾಡುತ್ತಿದ್ದಾರೆ ಎನ್ನುವುದು ಗೊತ್ತೆ? ಇವೆಲ್ಲವನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ.

ದೊಡ್ಡಬಳ್ಳಾಪುರಕ್ಕೇ ಹೋಗಬೇಕು ಕಣ್ರೀ?
ದೊಡ್ಡಬಳ್ಳಾಪುರದಿಂದ ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿಗೆ ಆಗಮಿಸಿ ಗಾಳಿ ಆಂಜನೇಯನ ದರ್ಶನ ಪಡೆದು ವಾಪಸ್ ಊರಿಗೆ ತೆರಳಬೇಕಿದ್ದ ಸುಜಾತಾ ಮತ್ತು ರಾಜೇಶ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿಯೇ ಇದ್ದಾರೆ. ನಮಗೆ ಬಂದ್ ಬಗ್ಗೆ ಗೊತ್ತಿತ್ತು, ಆದರೆ ಬಸ್ ಗಳನ್ನು ಏಕಾಏಕಿ ನಿಲ್ಲಿಸಿ ಬಿಡ್ತಾರೆ ಅನ್ನೋದು ಗೊತ್ತಿರಲಿಲ್ಲ. ಏನು ಮಾಡೋದು ಆರು ಗಂಟೆ ನಂತರ ಬಸ್ ಹಿಡಿಯಬೇಕು ಅಷ್ಟೇ ಎಂದು ಹೇಳುತ್ತಾರೆ. ಜತೆಗೆ ಜನರಿಗೆ ನೀರಿ ಸಿಕ್ಕರೆ ಸಾಕು ಅನ್ನಲು ಮರೆಯಲ್ಲ.

ವ್ಯಾಪಾರ ಇಲ್ಲಾ ಸ್ವಾಮಿ!
ಕೆಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ಎಂದಿನಂತೆ ಇರಲಿಲ್ಲ. ಮುಂಜಾನೆ 5 ರಿಂದ 6 ಗಂಟೆ ವರೆಗೆ ಜನರಿದ್ದರು. ಬಸ್ ಬಂದ್ ಆದ ಮೇಲೆ ಜನರಿಲ್ಲ. ನೋಡೋಣ ಸಂಜೆಗೆ ವ್ಯಾಪಾರ ಸುಧಾರಿಸಬಹುದು ಎನ್ನುತ್ತಾರೆ ಕೆ.ಆರ್ ಮಾರುಕಟ್ಟೆಯ ಹೂವಿನ ವ್ಯಾಪಾರಿ ರಿಜ್ವಾನ್.

ಬಂದ್ ಯಾತಕ್ಕೆ ಗೊತ್ತೆ ಇಲ್ಲ!
ಕೆಜಿ ರಸ್ತೆಯ ಅಂಗಡಿ ಮಾಲೀಕ ಮಹಾಶಯನೊಬ್ಬನಿಗೆ ಯಾಕೆ ಬಂದ್ ಮಾಡಿದ್ದಾರೆ ಎನ್ನೋದು ಗೊತ್ತೇ ಇಲ್ಲ. ಫೋಟೋ ತೇಗಿರೀ ಅಂದ ರಾಜಸ್ಥಾನಿಗೆ ಯಾಕೆ ಬಂದ್ ಮಾಡಿದ್ದಾರೆ ಗೊತ್ತಾ? ಎಂದು ಕೇಳಿದರೆ, ಅದೇನೋ ಬಿಲ್ಡಿಂಗ್ ಅಂಥ ತಡಬಡಾಯಿಸಿದ. ಇದರ ಅರ್ಥ ಇಷ್ಟೇ, ಎಲ್ಲರೂ ಬಾಗಿಲು ಹಾಕಿದ್ದಾರೆ ಎಂದು ಈತನು ಅಂಗಡಿಗೆ ಬಾಗಿಲು ಹಾಕಿ ಕುಳಿತಿದ್ದಾನೆ.

ಹೊರ ಊರಿಗೆ ತೆರಳುವವರ ಕತೆ?
ಸರ್ ಬಳ್ಳಾರಿಗೆ ಹೋಗಬೇಕಿತ್ತು. ಬೆಳಿಗ್ಗೆನೇ ಬಂದೆ ಆದ್ರೆ ಇವತ್ತು ಬಸ್ ಯಾವ ಬಸ್ ಇಲ್ಲ. ನನ್ನ ಮಗನ ಮನೆ ಮಾರತ್ ಹಳ್ಳಿಯಲ್ಲಿದೆ. ಈಗ ಅಲ್ಲಿಗೂ ಹೋಗೋಕಾಗಲ್ಲ. ಏನು ಮಾಡೋದು? ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ ಮೆಜೆಸ್ಟಿಕ್ ಗ್ರಾಮೀಣ ಬಸ್ ನಿಲ್ದಾಣದಲ್ಲಿ ಕುಳಿತಿರುವ ರಾಜಪ್ಪ.

ಯಾರೆಲ್ಲ ಭಾಗವಹಿಸಿದ್ದರು?
ಬೆಂಗಳೂರಿನ ಟೌನ್ ಹಾಲ್ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಾರಾ ಗೋವಿಂದು, ಸಾಹಿತಿ ಚಂಪಾ, ನಾಯಕ ನಟ ಪ್ರೇಮ್, ರೈತ ಮುಖಂಡ ಕೋಡಿಹಳ್ಳೀ ಚಂದ್ರಶೇಖರ್, ಹಿರಿಯ ನಟರಾದ ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್ ಮತ್ತು ಕೆಲ ಕಿರುತೆರೆ ಕಲಾವಿದರು ಪಾಲ್ಗೊಂಡು ಕನ್ನಡದ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಫ್ರೀಡಂ ಪಾರ್ಕ್‌ನವರೆಗೂ ತೆರಳಿದ ಮೆರವಣಿಗೆಯಲ್ಲಿ ವಾಟಾಳ್ ನಾಗರಾಜ್, ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ರೈತ ಸಂಘ ಅಧ್ಯಕ್ಷ ಕೋಡಿ ಚಂದ್ರಶೇಖರ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸೇರಿದಂತೆ ನಾನಾ ಮುಖಂಡರು ಭಾಗವಹಿಸಿದ್ದರು.

ಎಷ್ಟು ಜನ ಕನ್ನಡಾಭಿಮಾನಿಗಳಿದ್ದರು?
ಸುಮಾರು 8 ಸಾವಿರಕ್ಕೂ ಹೆಚ್ಚಿನ ಜನ ಭಾಷಾಭಿಮಾನದ ದೃಷ್ಟಿಯೊಂದ ಒಗ್ಗೂಡಿ ಕನ್ನಡ ಪರ ಘೊಷಣೆಗಳನ್ನು ಕೂಗಿದರು. ಡಾ. ರಾಜ್ ಕುಮಾರ್, ವಾಟಾಳ್ ನಾಗರಾಜ್, ಕುವೆಂಪು, ಬೇಂದ್ರೆ ಅವರ ಭಾವಚಿತ್ರಗಳನ್ನು ಹಿಡಿದಿದ್ದು ವಿಶೇಷ. ಕೆಲವರು ಉರುಳು ಸೇವೆ ಮಾಡಿ ತಮಿಳು ನಾಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆರು.

ಬೆಂಬಲ ನೀಡಿದ್ದ ಸಂಘಟನೆಗಳು
ಜಯಕರ್ನಾಟಕ, ಒಕ್ಕಲಿಗರ ಸಂಘ, ಜೆಡಿಯು, ರೈತ ಸಂಘ, ದಲಿತ ಸಂಘರ್ಷ ಸಮಿತಿ, ಹಸಿರುಸೇನೆ, ಟ್ಯಾಕ್ಸಿ ಮತ್ತು ಕ್ಯಾಬ್ ಮಾಲೀಕರ ಸಂಘ, ಲಾರಿಮಾಲೀಕರ ಸಂಘ, ವಾದ್ಯಗೋಷ್ಠಿ ಕಲಾವಿದರ ಸಂಘ, ಎಸ್ ಡಿಪಿಐ, ಸೇರಿದಂತೆ 400ಕ್ಕೂ ಹೆಚ್ಚು ಸಂಘಟನೆಗಳು ಪುರಭವನ ವೃತ್ತದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಜನ ಸಂಚಾರವಿಲ್ಲ
ಬೆಂಗಳೂರಿನ ಹೃದಯ ಭಾಗದ ಗಾಂಧಿನಗರದಲ್ಲಿ ಬಂದ್ ಕಾವು ಜೋರಾಗಿತ್ತು. ಬಿವಿಕೆ ಅಯ್ಯಂಗಾರ್ ರಸ್ತೆ, ಕೆಂಪೇಗೌಡ ರಸ್ತೆ, ಚಿಕ್ಕಪೇಟೆ, ಮೆಜಸ್ಟಿಕ್‌ನಲ್ಲಿ ವ್ಯಾಪಾರ-ವಹಿವಾಟು ಇಲ್ಲವಾಗಿತ್ತು. ಸದಾ ಜನರಿಂದ ತುಂಬಿರುತ್ತಿದ್ದ ಕೆಜಿ ರಸ್ತೆಯ ಚಿತ್ರಮಂದಿರಗಳು ಬಾಗಿಲು ಹಾಕಿದ್ದವು.

ಬಿಎಂಟಿಸಿ ಯಾಕೆ ಹಿಂಗೆ ಮಾಡಿತೋ?
ಬೆಳಗ್ಗೆ ಬಸ್ ಸಂಚಾರ ಆರಂಭ ಮಾಡಿದ ಬಿಎಂಟಿಸಿ ನಂತರ ಬಂದ್ ಮಾಡಿದ್ದು ಪ್ರಯಾಣಿಕರಿಗೆ ತಾಪತ್ರಯ ತಂದಿಟ್ಟಿರು. ಯಾವ ರೂಟ್ ಗೆ ತೆರಳಿದ್ದವೋ ಆ ಬಸ್ ಗಳು ಅಲ್ಲಲೇ ನಿಂತವು. ಮೆಜೆಸ್ಟಿಕ್ ನಲ್ಲಿದ್ದವರು ಅಲ್ಲಿಯೇ, ಶಾಂತಿನಗರದಲ್ಲಿದ್ದವರೂ ಅಲ್ಲಿಯೇ ಇರಬೇಕಾಯಿತು. ಇನ್ನೊಂದು ಬಸ್ ಹಿಡಿಯೋಣ ಎಂದು ಮನೆಯಿಂದ ಹೊರಟು ಬಂದವರು ಸಂಕಷ್ಟಕ್ಕೆ ಸಿಲುಕಿದರು.

ಪ್ರತಿಭಟನೆಯಲ್ಲಿ ಪ್ರೇಮ್ ಹುಟ್ಟುಹಬ್ಬ
ನಟ ಜಗ್ಗೇಶ್, ಪ್ರೇಮ್ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಬಹುತೇಕ ನಾಯಕ ನಟರ ಸುಳಿವೇ ಇರಲಿಲ್ಲ, ನನ್ನ ಹುಟ್ಟುಹಬ್ಬಕ್ಕಿಂತಲೂ ಜನರಿಗೆ ನೀರು ಸಿಗಬೇಕಾದದ್ದು ಮುಖ್ಯ. ಮೇಕೆದಾಟು ಯೋಜನೆಯನ್ನು ಯಾವ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರೇಮ್ ಹೇಳಿದರು.

ಅಣಕು ಶವ ಯಾತ್ರೆ
ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ತಮಿಳುನಾಡು ಸಿಎಂ ಪನ್ನಿರ್ ಸೆಲ್ವಂ ಅವರ ಅಣಕು ಶವಯಾತ್ರೆ ನಡೆಸಿ ಸುಟ್ಟುಹಾಕಿದರು. ಈ ವೇಳೆ ತಮಿಳುನಾಡು ಸರ್ಕಾರ ಮತ್ತು ಜಯಲಲಿತಾ ವಿರುದ್ಧ ಕಟುವಾದ ಘೋಷಣೆಗಳನ್ನು ಕೂಗಿದರು.

ಪೊಲೀಸ್ ಬಂದೋಬಸ್ತ್
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಶುಕ್ರವಾರದಿಂದಲೇ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿತ್ತು. ಕಾನೂನು ಮತ್ತು ಸುವ್ಯವ್ಯಸ್ಥೆ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಸ್ವತಃ ಸ್ಥಳದಲ್ಲಿ ಹಾಜರಿದ್ದು ಮೇಲ್ವಿಚಾರಣೆ ನೋಡಿಕೊಂಡರು.

ಮೈಸೂರಲ್ಲಿ ಶಿವಣ್ಣ ಸಾಥ್
ನಾವು ಮತ್ತು ನಮ್ಮ ಕುಟುಂಬ ಎಂದಿಗೂ ಕನ್ನಡದ ಪರ. ಭಾಷೆ ಕುರಿತಾದ ಹೋರಾಟದಲ್ಲಿ ಭಾಘವಹಿಸುವುದೇ ಒಂದು ಪುಣ್ಯ ಎಂದು ಮೈಸೂರಿನಲ್ಲಿ ಶಿವರಾಜ್ ಕುಮಾರ್ ಹೇಳಿದರು. ನಟ ಪುನೀತ್ ರಾಜ್ ಕುಮಾರ್ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಮೆರವಣಿಗೆ ನಂತರದ ಸಭೆಯಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications
